ವರದಿ : ಬಸಯ್ಯ ಜಿ ಎಂ
ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮದಿರೆ ಗ್ರಾಮದ ಸರ್ಕಾರಿ ಶಾಲೆಯನ್ನು ಕೆಪಿಎಸ್ ಯೋಜನೆ ಹೆಸರಿನಲ್ಲಿ ಕೋಳೂರು ಶಾಲೆಗೆ ವಿಲೀನಗೊಳಿಸುವ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪೋಷಕರು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಸೇರಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ವಿರೋಧವನ್ನು ದಾಖಲಿಸಿದರು. ಈ ವೇಳೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುರಳ್ಳಿ ರಾಜ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಪಿಎಸ್ ಯೋಜನೆ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ನೀಲನಕ್ಷೆಯಾಗಿದೆ ಎಂದು ಆರೋಪಿಸಿದರು.
ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೇ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಿ ಶಿಕ್ಷಣ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.
ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳ ಹೆಸರಿನಲ್ಲಿ ಜನರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಈಗಿರುವ ಸರ್ಕಾರಿ ಶಾಲೆಗಳಲ್ಲೇ ಉತ್ತಮ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯೆ ವಿದ್ಯಾವತಿ, ಗ್ರಾಮಸ್ಥರಾದ ದೊಡ್ಡಬಸಪ್ಪ, ಲೋಕೇಶ್, ಲಾಲೆಪ್ಪ, ರಮೇಶ್, ರವಿಚಂದ್ರ ಸೇರಿದಂತೆ ಹಲವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
