Saturday, July 4, 2026
HomeDistrictsBengaluru Cityಸಾರ್ವಜನಿಕ ಬಸ್‌ಗಳಲ್ಲಿ ಗುಟ್ಕಾ- ಧೂಮಪಾನಕ್ಕೆ ಕಟ್ಟುನಿಟ್ಟಿನ ಬ್ರೇಕ್; ಮೋಹನ್ ಕುಮಾರ್ ದಾನಪ್ಪರಿಂದ ಸರ್ಕಾರಕ್ಕೆ ಮನವಿ

ಸಾರ್ವಜನಿಕ ಬಸ್‌ಗಳಲ್ಲಿ ಗುಟ್ಕಾ- ಧೂಮಪಾನಕ್ಕೆ ಕಟ್ಟುನಿಟ್ಟಿನ ಬ್ರೇಕ್; ಮೋಹನ್ ಕುಮಾರ್ ದಾನಪ್ಪರಿಂದ ಸರ್ಕಾರಕ್ಕೆ ಮನವಿ

ಬೆಂಗಳೂರು, ಜುಲೈ 4: ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಸಾರ್ವಜನಿಕ ಬಸ್‌ಗಳ ಕಿಟಕಿಗಳಿಗೆ ಕಡ್ಡಾಯವಾಗಿ ಕಬ್ಬಿಣದ ಸರಳುಗಳನ್ನು ಅಳವಡಿಸುವ ಜೊತೆಗೆ, ಬಸ್‌ಗಳಲ್ಲಿ ಗುಟ್ಕಾ, ತಂಬಾಕು ಹಾಗೂ ಧೂಮಪಾನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ. ವರದಿಗಳ ಪ್ರಕಾರ, ಶಿರೂರು ಗ್ರಾಮದ 17 ವರ್ಷದ ಐಟಿಐ ವಿದ್ಯಾರ್ಥಿ ಫಕ್ಕಿರೇಶ ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಬಸ್‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅವರು ಗುಟ್ಕಾ ಉಗುಳುವ ಉದ್ದೇಶದಿಂದ ಕಿಟಕಿಯಿಂದ ತಲೆಯನ್ನು ಹೊರಹಾಕಿದಾಗ, ಹಿಂಬದಿಯಿಂದ ಅತಿವೇಗವಾಗಿ ಬಂದ ಟಿಪ್ಪರ್ ಲಾರಿಯು ಅವರ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅತ್ಯಂತ ಭೀಕರ ರೀತಿಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿದ್ದು, ಪ್ರಕರಣ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ತಕ್ಷಣವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಬಸ್‌ಗಳನ್ನು ಪರಿಶೀಲಿಸಿ, ಪ್ರಯಾಣಿಕರು ಕಿಟಕಿಯಿಂದ ತಲೆ ಅಥವಾ ದೇಹದ ಯಾವುದೇ ಭಾಗವನ್ನು ಹೊರಹಾಕದಂತೆ ಕಿಟಕಿಗಳಿಗೆ ಕಬ್ಬಿಣದ ಸುರಕ್ಷತಾ ಸರಳುಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಲಾಗಿದೆ.

ಇದೇ ವೇಳೆ ಸಾರ್ವಜನಿಕ ಬಸ್‌ಗಳಲ್ಲಿ ಗುಟ್ಕಾ, ತಂಬಾಕು ಸೇವನೆ ಹಾಗೂ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ. ಕರ್ನಾಟಕ ಧೂಮಪಾನ ನಿಷೇಧ ಮತ್ತು ಧೂಮಪಾನ ಮಾಡದವರ ಆರೋಗ್ಯ ರಕ್ಷಣೆ ಅಧಿನಿಯಮ–2001, ಕೋಟ್ಪಾ ಕಾಯ್ದೆ–2003 ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು, ವ್ಯಾಪಾರ ಮತ್ತು ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದ ರಾಜ್ಯದ ತಿದ್ದುಪಡಿ ಕಾನೂನುಗಳ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ದಂಡ ವಿಧಿಸುವ ಅವಕಾಶವಿದ್ದು, ಸಾರ್ವಜನಿಕ ಬಸ್‌ಗಳಲ್ಲಿಯೂ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಗುಟ್ಕಾ, ತಂಬಾಕು ಸೇವನೆ ಅಥವಾ ಧೂಮಪಾನದಲ್ಲಿ ತೊಡಗುವ ಪ್ರಯಾಣಿಕರ ವಿರುದ್ಧ ಕಾನೂನುಬದ್ಧವಾಗಿ ₹1,000 ದಂಡ ವಿಧಿಸುವ ಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಪ್ರಯಾಣಿಕರ ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ತುರ್ತು ಸುರಕ್ಷತಾ ಪರಿಶೀಲನೆ ನಡೆಸಿ, ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮೋಹನ್ ಕುಮಾರ್ ದಾನಪ್ಪ ಅವರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments