Thursday, July 9, 2026
HomeKotturuಕೊಟ್ಟೂರಿನ 'ಹುಲಿ', ಪ್ರಭಾವಿ ಧೀಮಂತ ನಾಯಕ ಎಂ.ಎಂ.ಜೆ. ಹರ್ಷವರ್ಧನ ಇನ್ನಿಲ್ಲ

ಕೊಟ್ಟೂರಿನ ‘ಹುಲಿ’, ಪ್ರಭಾವಿ ಧೀಮಂತ ನಾಯಕ ಎಂ.ಎಂ.ಜೆ. ಹರ್ಷವರ್ಧನ ಇನ್ನಿಲ್ಲ

ವರದಿ:ಶಿವರಾಜ್ ಕನ್ನಡಿಗ..
​ಕೊಟ್ಟೂರು: ತಾಲೂಕಿನ ರಾಜಕೀಯ ಚದುರಂಗದ ಚತುರ, ಪ್ರಭಾವಿ ರಾಜಕಾರಣಿ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದ ಎಂ.ಎಂ.ಜೆ. ಹರ್ಷವರ್ಧನ (64) ಅವರು ಬುಧವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉಜ್ಜಯಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿಗಳೂ ಆಗಿದ್ದ ಇವರ ನಿಧನದಿಂದ ಕೊಟ್ಟೂರು ಭಾಗದ ಜನಪ್ರಿಯ ಧ್ವನಿಯೊಂದು ಅಸ್ತಮಿಸಿದಂತಾಗಿದೆ.

​ಸಾರ್ವಜನಿಕ ವಲಯದಲ್ಲಿ ‘ಕೊಟ್ಟೂರಿನ ಹುಲಿ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಹರ್ಷವರ್ಧನ ಅವರು, ಈ ಭಾಗದ ಜನರೊಂದಿಗೆ ಅಪಾರ ಒಡನಾಟ ಹೊಂದಿದ್ದರು. 1994ರಲ್ಲಿ ಕೊಟ್ಟೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ಭದ್ರ ಹೆಜ್ಜೆ ಇಟ್ಟಿದ್ದರು. ಕೊಟ್ಟೂರು ಎಪಿಎಂಸಿ ನಿರ್ದೇಶಕರಾಗಿ, ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಇಂದಿಗೂ ಸ್ಮರಣೀಯ.

ವಿಶೇಷವಾಗಿ 2006ರಲ್ಲಿ ಇವರ ಅಧಿಕಾರಾವಧಿಯಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಗುಲ್ಬರ್ಗಾ ವಿಭಾಗದಲ್ಲೇ ‘ಮಾದರಿ ಪಟ್ಟಣ ಪಂಚಾಯಿತಿ ಪ್ರಶಸ್ತಿ’ ಒಲಿದು ಬಂದಿದ್ದು ಇವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
​ನ್ಯಾಯದ ತಕ್ಕಡಿ, ಬಡವರ ಧಣಿ:
​ಕೊಟ್ಟೂರಿನ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ “ನ್ಯಾಯ ಬೇಕೆಂದರೆ ಹರ್ಷವರ್ಧನ ಅವರ ಬಳಿ ಹೋಗಬೇಕು” ಎಂಬ ಅಚಲವಾದ ನಂಬಿಕೆಯಿತ್ತು. ಅಣ್ಣ-ತಮ್ಮಂದಿರ ಜಗಳ, ದಾಯಾದಿ ಕಲಹ ಸೇರಿದಂತೆ ಯಾವುದೇ ಕಠಿಣ ಸಾಮಾಜಿಕ ಸಮಸ್ಯೆಗಳಿದ್ದರೂ, ಇವರ ನೇತೃತ್ವದ ‘ಪಂಚಾಯಿತಿ’ಯಲ್ಲಿ ಸುಲಭವಾಗಿ ಬಗೆಹರಿಯುತ್ತಿದ್ದವು.

​ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಜಗಳಗಳಿಗೂ ಜನರು ಪೊಲೀಸ್ ಠಾಣೆ, ಕೋರ್ಟ್-ಕಚೇರಿ ಮೆಟ್ಟಿಲೇರಿ ಹಣ, ಸಮಯ ಕಳೆದುಕೊಳ್ಳುತ್ತಿದ್ದರೆ, ಹರ್ಷವರ್ಧನ ಅವರು ಮಾತ್ರ ಉಭಯ ಪಾರ್ಟಿಗಳ ಮನವೊಲಿಸಿ, ಮುಖಾಮುಖಿ ಕೂರಿಸಿ ನ್ಯಾಯಯುತ ತೀರ್ಮಾನ ನೀಡುತ್ತಿದ್ದರು. ಇವರ ಪಂಚಾಯಿತಿ ತೀರ್ಪಿಗೆ ಇಡೀ ಜನ ಸಮೂಹವೇ ತಲೆಬಾಗುತ್ತಿತ್ತು.

​ಅವರ ನಿಧನಕ್ಕೆ ಕೊಟ್ಟೂರು ತಾಲೂಕಿನ ಗಣ್ಯರು, ರಾಜಕೀಯ ಮುಖಂಡರು ಹಾಗೂ ಸಹಸ್ರಾರು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಕೊಟ್ಟೂರು ಭಾಗ ಒಬ್ಬ ಅಪರೂಪದ ಜನನಾಯಕನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments