Friday, September 4, 2026
HomeDistrictsBallariಅಭಿವೃದ್ಧಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಕನಿಷ್ಠ ಪರಿಜ್ಞಾನವೂ ಮಾಜಿ ಶಾಸಕ ಸುರೇಶ್‌ ಬಾಬು ಅವರಿಗಿಲ್ಲ: ಶಾಸಕ...

ಅಭಿವೃದ್ಧಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಕನಿಷ್ಠ ಪರಿಜ್ಞಾನವೂ ಮಾಜಿ ಶಾಸಕ ಸುರೇಶ್‌ ಬಾಬು ಅವರಿಗಿಲ್ಲ: ಶಾಸಕ ಜೆ.ಎನ್. ಗಣೇಶ್

[ವರದಿ : ಜಿ ಎಂ ಬಸಯ್ಯ]
ಕುರುಗೋಡು, ಸೆ. 4: ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ವಿಚಾರದಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್‌ ಬಾಬು ಮಾಡಿರುವ ಟೀಕೆಗಳಿಗೆ ಶಾಸಕ ಜೆ.ಎನ್. ಗಣೇಶ್ ತಿರುಗೇಟು ನೀಡಿದ್ದಾರೆ.

ಕುರುಗೋಡು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಗಣೇಶ್, “ಯಾವ ಇಲಾಖೆಯಿಂದ ಯಾವ ಕಾಮಗಾರಿಗೆ ಅನುದಾನ ತರಬೇಕು, ಯಾವ ಇಲಾಖೆಯ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡಿಸಿಕೊಳ್ಳಬೇಕು ಎಂಬ ಕನಿಷ್ಠ ಪರಿಜ್ಞಾನವೂ ಮಾಜಿ ಶಾಸಕ ಸುರೇಶ್‌ ಬಾಬು ಅವರಿಗೆ ಇಲ್ಲ” ಎಂದು ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುದಾನ ತರಲಾಗುತ್ತಿದೆ. ಕಾಮಗಾರಿಗಳ ಸ್ವರೂಪಕ್ಕೆ ಅನುಗುಣವಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆಯ ಬಗ್ಗೆ ಅರಿವಿಲ್ಲದೆ ಮಾಜಿ ಶಾಸಕರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳು ಹಾಗೂ ಮಂಜೂರಾಗಿರುವ ಅನುದಾನದ ಕುರಿತು ದಾಖಲೆಗಳ ಸಮೇತ ಮಾಹಿತಿ ನೀಡಲು ಸಿದ್ಧ ಎಂದು ಶಾಸಕ ಗಣೇಶ್ ತಿಳಿಸಿದರು.

“ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ:
ರಾಜಕೀಯ ಟೀಕೆಗಳಿಗೆ ಉತ್ತರ ನೀಡುವುದಕ್ಕಿಂತ ಜನರಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ” ಎಂದು ಅವರು ಹೇಳಿದರು.

ಕಾಲುವೆ ನೀರು ಹಂಚಿಕೆ ವಿಚಾರದಲ್ಲೂ ತಿರುಗೇಟು:
ತುಂಗಭದ್ರಾ ನದಿಯಿಂದ ಕಾಲುವೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮಾಜಿ ಶಾಸಕ ಸುರೇಶ್‌ ಬಾಬು ಮಾಡುತ್ತಿರುವ ಹೇಳಿಕೆಗಳಿಗೂ ಶಾಸಕ ಗಣೇಶ್ ಪ್ರತಿಕ್ರಿಯಿಸಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಾಲುವೆಗಳಲ್ಲಿ ಎಷ್ಟು ಡಿಪಿಗಳಿವೆ ಹಾಗೂ ಯಾವ ಡಿಪಿಗೆ ಎಷ್ಟು ಪ್ರಮಾಣದ ನೀರು ಹರಿಸಲಾಗುತ್ತದೆ ಎಂಬ ಸಾಮಾನ್ಯ ಮಾಹಿತಿಯೂ ಮಾಜಿ ಶಾಸಕ ಸುರೇಶ್‌ ಬಾಬು ಅವರಿಗೆ ಇಲ್ಲ ಎಂದು ಅವರು ಆರೋಪಿಸಿದರು.

2028ರ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಶಾಸಕ ಗಣೇಶ್, ಸದ್ಯಕ್ಕೆ ಆ ಆರೋಪಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದರು.

“2028ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರೇ ಅದಕ್ಕೆ ಉತ್ತರ ನೀಡಲಿದ್ದಾರೆ” ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಬಸವರಾಜ್, ಪುರಸಭೆ ಸದಸ್ಯ ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments