ರಜನೀಕಾಂತ್ ಭಾರತದ ಸೂಪರ್ ಸ್ಟಾರ್ ನಟ. ಅವರ ಎತ್ತರಕ್ಕೆ ಏರುವ ಮತ್ತೊಬ್ಬ ನಟರಿಲ್ಲ. ಆದರೆ ಖ್ಯಾತ ನಿರ್ದೇಶಕರೊಬ್ಬರು ರಜನೀಕಾಂತ್ ಜೊತೆಗೆ ನಟಿ ಸಮಂತಾರನ್ನು ಹೋಲಿಸಿದ್ದಾರೆ. ಅದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.
ರಜನೀಕಾಂತ್ ಭಾರತದ ನಂಬರ್ 1 ಸೂಪರ್ ಸ್ಟಾರ್. ಎಲ್ಲ ರಾಜ್ಯಗಳಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ಇದೀಗ ತೆಲುಗಿನ ಖ್ಯಾತ ನಿರ್ದೇಶಕರೊಬ್ಬರು ನಟಿ ಸಮಂತಾರನ್ನು ಸೂಪರ್ ಸ್ಟಾರ್ ರಜನೀಕಾಂತ್ಗೆ ಹೋಲಿಸಿದ್ದಾರೆ. ತಾವು ಈ ರೀತಿಯ ಹೋಲಿಕೆ ಮಾಡಿದ್ದೇಕೆ ಎಂದು ಕಾರಣವನ್ನು ಸಹ ನೀಡಿದ್ದಾರೆ. ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ವೇದಿಕೆಯನ್ನು ನಿರ್ದೇಶಕ ತ್ರಿವಿಕ್ರಮ್, ಸಮಂತಾರನ್ನು ರಜನೀಕಾಂತ್ಗೆ ಹೋಲಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ‘ಜಿಗ್ರಾ’ ಸಿನಿಮಾದ ಇವೆಂಟ್ನಲ್ಲಿ ಮಾತನಾಡಿದ ಖ್ಯಾತ ನಿರ್ದೇಶಕ ತ್ರಿವಿಕ್ರಮ್, ‘ಎಲ್ಲ ರಾಜ್ಯಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ನಟ ಯಾರಾದರೂ ಇದ್ದರೆ ಅದು ರಜನೀಕಾಂತ್ ಮಾತ್ರ. ನಟಿ ಸಮಂತಾ ಸಹ ರಜನೀಕಾಂತ್ ರೀತಿಯೇ ಅವರಿಗೂ ಸಹ ಎಲ್ಲ ಭಾಷೆಗಳಲ್ಲಿಯೂ ಸಮಾನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ’ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಮಂತಾರನ್ನು ಸಾಕಷ್ಟು ಹೊಗಳಿದ ನಿರ್ದೇಶಕ ತ್ರಿವಿಕ್ರಮ್, ‘ಸಮಂತಾ ಜೊತೆಗೆ ಮೂರು ಸಿನಿಮಾಗಳಿಗೆ ನಾನು ಕೆಲಸ ಮಾಡಿದ್ದೇನೆ. ಆಕೆಯ ಜೊತೆ ಡಲ್ ಮೂಮೆಂಟ್ ಎಂಬುದೇ ಇರುವುದಿಲ್ಲ. ಸಾಯುವ ಸೀನ್ ಆಗಿದ್ದರೂ ಸಹ ನಗುತ್ತಲೇ ಇರುತ್ತಾರೆ, ನಗಿಸುತ್ತಲೇ ಇರುತ್ತಾರೆ. ಆಕೆಯ ಜೊತೆ ಕೆಲಸ ಮಾಡುವುದೇ ಖುಷಿ. ನಾನು ಸಹ ಸಮಂತಾ ಅಭಿಮಾನಿ. ಅವರ ‘ಯೇ ಮಾಯ ಚೇಸಾವೆ’ ಸಿನಿಮಾ ಮಾಡಿದಾಗ ಹಲವು ಭಾರಿ ನೋಡಿದ್ದೆ. ನಟ ಅಲ್ಲು ಅರ್ಜುನ್ ಫೋನ್ ಮಾಡಿ ನನಗೆ ಹೇಳಿದ್ದ, ಸಮಂತಾ ಎಂಬ ಹೊಸ ನಟಿ ಬಂದಿದ್ದಾಳೆ ನೋಡಿ ಬಹಳ ಚೆನ್ನಾಗಿ ನಟಿಸುತ್ತಾರೆ ಎಂದು, ಅಲ್ಲು ಅರ್ಜುನ್ ಸಹ ಸಮಂತಾ ಅಭಿಮಾನಿ’ ಎಂದಿದ್ದಾರೆ.
ನಾರಿ ಶಕ್ತಿಯ ಬಗ್ಗೆ ಸಮಂತಾ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿ, ‘ಮಹಿಳೆಯರು ನಿಜವಾದ ‘ಹೀರೋ’ಗಳು, ನಾರಿ ಎಂದರೆ ಶಕ್ತಿ. ಯಾರೂ ಅವರನ್ನು ಶಕ್ತ ಗೊಳಿಸುವ ಅವಶ್ಯಕತೆ ಇಲ್ಲ. ಯಾರೂ ಸಹ ಅವರನ್ನು ಉದ್ದಾರ ಮಾಡುವ ಅವಶ್ಯಕತೆಯೂ ಇಲ್ಲ. ಅವರಿಗೆ ಶಕ್ತಿ ಇದೆ, ಅವರೇ ನಮ್ಮನ್ನು ಎಂಪವರ್ ಮಾಡಬೇಕು. ತಾಯಿ ಇಲ್ಲದಿದ್ದರೆ ನಾವ್ಯಾರು ಇಲ್ಲ. ಹಾಗೆಯೇ ನೀವು ಇಲ್ಲದಿದ್ದರೆ ನಾವ್ಯಾರೂ ಇಲ್ಲ’ ಎಂದರು ತ್ರಿವಿಕ್ರಮ್.
ಸಮಂತಾ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ‘ಸಮಂತಾ ನಟಿಸುವುದಿಲ್ಲವೇನೋ ಎಂದುಕೊಂಡು ನಾವು ಅವರಿಗೆ ಪಾತ್ರ ಬರೆಯುತ್ತಿಲ್ಲ. ಅವರು ಈಗ ಬಾಂಬೆಯಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ನಮ್ಮ ಸಿನಿಮಾಗಳಲ್ಲಿ ಎಲ್ಲಿ ನಟಿಸುತ್ತಾರೆ ಎಂದುಕೊಂಡು ನಾವು ಸುಮ್ಮನಿದ್ದೇವೆ. ಸಮಂತಾ ನಟಿಸುತ್ತಾರೆ ಎಂದರೆ ಖಂಡಿತ ಬರೆಯುತ್ತೀನಿ. ಆಗ ‘ಅತ್ತಾರಿಂಟಿಕಿ ದಾರೇದಿ’ (ಅತ್ತೆಯ ಮನೆಗೆ ದಾರಿ ಯಾವುದು?) ಎಂದು ಸಿನಿಮಾ ಮಾಡಿದ್ದೆವು. ಈಗ ಸಮಂತಾಗೆ ‘ಹೈದರಾಬಾದ್ಗೆ ದಾರಿ ಯಾವುದು?’ ಎಂದು ಕಲಿಸಿಕೊಡುವಂತಾಗಿದೆ. ಸಮಂತಾ ಬರೀ ಮುಂಬೈನಲ್ಲಿ ನಡೆಯುವ ಇವೆಂಟ್ನಲ್ಲಿ ಭಾಗವಹಿಸುತ್ತಾರೆ, ಅವರು ಹೈದರಾಬಾದ್ಗೂ ಬರಬೇಕು’ ಎಂದು ಕಾಲೆಳೆದರು. ಕಾರ್ಯಕ್ರಮದಲ್ಲಿ ಆಲಿಯಾ ಭಟ್, ನಿರ್ದೇಶಕ ವಾಸನ್ ಬಾಲ, ರಾಣಾ ದಗ್ಗುಬಾಟಿ ಇನ್ನೂ ಹಲವರು ಭಾಗವಹಿಸಿದ್ದರು.