Wednesday, January 14, 2026
HomeKotturuದಲಿತ, ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನ ಆಚರಣೆ

ದಲಿತ, ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನ ಆಚರಣೆ

ವರದಿ : ಶಿವರಾಜ್ ಕನ್ನಡಿಗ

ಕೊಟ್ಟೂರು: ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಮಂಡಳಿ ವತಿಯಿಂದ ನವೆಂಬರ್ ೧೮ರ ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಣೆ ಮಾಡಲಾಯಿತು. ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತಾ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ.

ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕೋಮುಗಲಭೆಗಳುಂಟಾಗಿ ಸಮಾಜದಲ್ಲಿ ಸಾಕಷ್ಟು ನೆತ್ತರು ಹರಿಯುವುದಕ್ಕೆ ಮೇಲು-ಕೀಳು, ಬಹುಸಂಖ್ಯಾ-ಅಲ್ಪಸಂಖ್ಯಾತ, ಹಿಂದೂ-ಮುಸ್ಲಿಂ ಎಂಬ ಭೇದಭಾವಗಳೇ ಈ ನೆಲದಲ್ಲಿ ಇನ್ನೂ ರಾರಾಜಿಸುತ್ತಿವೆ.
ಎಲ್ಲಿಯವರೆಗೆ ಜಾತಿಯ ತಾರತಮ್ಯ ಈ ನೆಲದಲ್ಲಿ ತಾಂಡವವಾಡುತ್ತಿರುತ್ತದೋ ಅಲ್ಲಿಯವರೆಗೆ ಈ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಸಿ.ಪಿ.ಐ. ಪಕ್ಷದ ರಾಜ್ಯ ಮಂಡಳಿ ತಾಲ್ಲೂಕು ಕಾರ್ಯದರ್ಶಿ ಕೆ. ರೇಣುಕಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿಗಳಾದ ಉಮೇಶ.ಎಚ್, ಬಿ.ರೇಣುಕಮ್ಮ, ತಾಲ್ಲೂಕು ಮಂಡಳಿ ಸದಸ್ಯರಾದ ರಸೂಲ್, ಜಲೀಲ್ ಮುಖಂಡರು ಷಂಶದ್, ಶಾಹಿನಾ, ಗೌರಮ್ಮ, ಜ್ಯೋತಿ, ಕಾಳಾಪುರದ ಎಲ್ಲಾ ಮಹಿಳೆಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments