ಬಳ್ಳಾರಿ:ಡಿ,28; ಮುಂಬರುವ ಫೆಬ್ರವರಿ 13, 14 ಮತ್ತು 15 ರಂದು ಗಣಿನಾಡು ಬಳ್ಳಾರಿಯಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಅವರಣದಲ್ಲಿರುವ ಪತ್ರಿಕಾ ಭವನದಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಳ್ಳಾರಿಯ ಇತಿಹಾಸದಲ್ಲೆ ಇದು ಐತಿಹಾಸಿಕ ಕಾರ್ಯಕ್ರಮ ಆಗಿದ್ದು, ಬಳ್ಳಾರಿಯ ಇತಿಹಾಸದಲ್ಲೇ ಹಿಂದೆಂದೂ ನಡೆಯದೆ ಪತ್ರಕರ್ತರ ರಾಷ್ಟ್ರ ಮಟ್ಟದ ಕಾರ್ಯಕ್ರಮ ಬಳ್ಳಾರಿ ನಗರದಲ್ಲಿ ನಡೆಯುತ್ತಿರುವುದು ನಮ್ಮೇಲ್ಲರ ಸೌಭಾಗ್ಯ, ನಮ್ಮೇಲ್ಲರ ಹೆಮ್ಮೆಯು ಹೌದು, ಎಂದ ಅವರು, ಮುಂಬರುವ ಫೆಬ್ರವರಿ 13, 14 ಮತ್ತು 15 ಮೂರು ದಿನಗಳ ಕಾಲ ಬಳ್ಳಾರಿ ನಗರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸಭೆ ಹಾಗೂ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಂಡಳಿ ಸಭೆ ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದ್ದು, ದೇಶದ 15 ರಾಜ್ಯಗಳಿಂದ ಸುಮಾರು 500 ಜನ ಪತ್ರಕರ್ತರು ಅಂದು ಬಳ್ಳಾರಿಯಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಅದಲ್ಲದೇ, ಫೆಬ್ರವರಿ 13 ರಂದು ನಡೆಯುವ ರಾಜ್ಯ ಸಮಿತಿ ಸಭೆಗೆ ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಎಲ್ಲಾ ಜಿಲ್ಲಾಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಫೆಬ್ರವರಿ 13 ಮಧ್ಯಾಹ್ನ 2 ಗಂಟೆಯೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಅಂದು ಬಳ್ಳಾರಿಗೆ ಸೇರಿಕೊಳ್ಳಲಿದ್ದಾರೆ. ಅಂದು ಮದ್ಯಾಹ್ನ 3:00 ಗಂಟೆಯಿಂದ ರಾಜ್ಯ ಸಮಿತಿ ಸಭೆ ಆರಂಭವಾಗಲಿದ್ದು, ರಾತ್ರಿ 8:00 ಗಂಟೆಯ ವರೆಗೂ ನಡೆಯಲಿದೆ.
ಇನ್ನು ಫೆಬ್ರವರಿ 14 ಬೆಳಿಗ್ಗೆ 10:30 ಕ್ಕೆ ರಾಷ್ಟ್ರೀಯ ಮಂಡಳಿ ಸಭೆ ಆರಂಭವಾಗಲಿದ್ದು, ಅಂದು ಇಡೀ ದಿನ ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ. ಬಳಿಕ ಫೆಬ್ರವರಿ 15 ರಂದು ದೇಶದ ನಾನಾ ರಾಜ್ಯಗಳಿಂದ ಬಂದಂತ ಪತ್ರಕರ್ತ ಪ್ರತಿನಿಧಿಗಳನ್ನು ಹಂಪಿ ಪ್ರವಾಸ ಕೈಗೊಳ್ಳುವರು.
ಈ ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲರನ್ನು ಆಹ್ವಾನಿಸಲಾಗುವುದು ಜೊತೆಗೆ ರಾಜ್ಯದ ಹಲವಾರು ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಪತ್ರಕರ್ತರು ಕೈಜೋಡಿಸಲು ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಕೆ.ಬಜಾರಪ್ಪ, ಡಾ.ಗಿರೀಶ್ ಕುಮಾರ್ ಗೌಡ, ಕುರುಗೋಡು ವೀರಭದ್ರಗೌಡ, ಪ್ರಧಾನ ಕಾರ್ಯದರ್ಶಿ ದುರುಗೇಶ್ ಯಾದವ್, ಕಾರ್ಯದರ್ಶಿ ಮೊಹ್ಮದ್ ಲುಕ್ಮನ್, ಖಜಾಂಚಿ ಪಂಪನಗೌಡ, ಸಿರುಗುಪ್ಪ ತಾಲೂಕು ಪ್ರಧಾನ ಕಾರ್ಯದರ್ಶಿ ಷಣ್ಮುಖ, ಸಿರುಗುಪ್ಪ ತಾಲೂಕು ಅಧ್ಯಕ್ಷ ಮಹೆಬೂಬ್, ಕುರುಗೋಡು ತಾಲೂಕು ಅಧ್ಯಕ್ಷ ಅಣ್ಣಯ್ಯಸ್ವಾಮಿ, ಕಂಪ್ಲಿ ತಾಲೂಕು ರಘುವೀರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಕೇಶ್, ಬಾಬು, ಲಕ್ಷ್ಮಣ, ಮಹೇಶ್, ಮರಿಸ್ವಾಮಿ, ಹೇಮಂತ್, ಸುನೀಲ್, ಗಣೇಶ್ ಇನಾಂದಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
