ವರದಿ: ಶಿವರಾಜ್ ಕನ್ನಡಗ ಕೊಟ್ಟೂರು
ವಿಜಯನಗರ ಜಿಲ್ಲೆ, ಕೊಟ್ಟೂರು ಪಟ್ಟಣದ ಮುದಕನ ಕಟ್ಟೆ ಕೊರಚರ ಓಣಿಯಲ್ಲಿ ಅಲೆಮಾರಿ ಸಮುದಾಯದ ಕೊರಮ,ಕೊರಚ, ಕುಂಚಿ ಕೊರವ ಸಮುದಾಯಗಳು ದೇವಿಯ ಹಬ್ಬ ವಿಶೇಷ ಹಬ್ಬವಾಗಿ ಬುಧವಾರ ಆಚರಣೆ ಮಾಡಲಾಯಿತು.
ಕೊರಮ,ಕೊರಚ, ಕುಂಚಿ ಕೊರವ ಸಮುದಾಯ ಕಸಬರಿಗೆ, ನುಲಿಯುವಿಕೆ, ಹಂದಿ ಸಾಕಾಣಿಕೆ ಇತರೆ ಮುಂತಾದ ಕುಲಕಸುಬುಗಳನ್ನೇ ಉಸಿರಾಗಿಸಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗಿ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳುತ್ತಿರುವ ಸಮುದಾಯ. ಸಂಕ್ರಾಂತಿ ಹಬ್ಬ ಕೊರಮ,ಕೊರಚ,ಕುಂಚಿ ಕೊರವ ಜನಾಂಗಕ್ಕೆ
ಒಂದು ವಿಶೇಷ ಹಬ್ಬ. ಈ ಹಬ್ಬದಲ್ಲಿ ತಮ್ಮ ಅಧಿದೇವತೆಗಳಾದ ದೇವಿ ಆರಾಧಕರು ದುರುಗಮ್ಮ, ದ್ಯಾಮಮ್ಮ ದೇವರನ್ನು ಪೂಜಿಸಿ, ಅವರನ್ನು ಸಂತೃಪ್ತಿಪಡಿಸಿ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ತಮ್ಮ ಬಂಧು ಬಳಗ, ಸ್ನೇಹಿತರನ್ನೆಲ್ಲಾ ಹಬ್ಬಕ್ಕೆ ಕರೆದು ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸುಮಾರು 80 ವರ್ಷಗಳಿಗೂ ಮುಂಚೆಯೇ ಕೊಟ್ಟೂರಿಗೆ ಬಂದು ನೆಲೆಸಿದ ಕೊರಮ,ಕೊರಚ,ಕುಂಚಿ ಕೊರವ ಸಮುದಾಯ ತನ್ನದೇಯಾದ ಅಸ್ಮಿತೆಯನ್ನು ಉಳಿಸಿಕೊಂಡಿದೆ. ತಮ್ಮ ಸಮುದಾಯಕ್ಕೊಂದು ನಿರ್ದಿಷ್ಟ ಪ್ರದೇಶವೆಂದು ನಿಗದಿಪಡಿಸಿಕೊಂಡು ಆ ಪ್ರದೇಶದಲ್ಲಿ ವಾಸಿಸಿಕೊಂಡು ಕುಣಿತದೊಂದಿಗೆ ಮೆರವಣಿಗೆ ಮೂಲಕ ದೇವಿ ಹಬ್ಬವನ್ನು ಆಚರಿಸುತ್ತಾ
ಬರುತ್ತಿದೆ. ಈ ವರ್ಷದ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ ಎಂದು ಕೆ ಕೊಟ್ರೇಶ್, ಕಾಂತಪ್ಪ, ಪಕೀರಪ್ಪ, ಸಣ್ಣ ಹನುಮಂತಪ್ಪ, ಆರುಬಳ್ಳು ಕೊಟ್ರೇಶ್ , ವೆಂಕಟಪ್ಪ, ದೊಡ್ಡ ಹನುಮಂತಪ್ಪ, ಮುದ್ದಿ ಹನುಮಂತ , ಇತರೆ ಕುಟುಂಬಗಳು ಪತ್ರಿಕೆಗೆ ತಿಳಿಸಿದರು.
