Thursday, April 9, 2026
HomeDistrictsBengaluru Cityಹೋಂಗಾರ್ಡ್ಸ್, ರಿಸರ್ವ್ ಪೊಲೀಸರಿಂದ ನಿಯಮಬಾಹಿರ ವಾಹನ ತಪಾಸಣೆ: ಕಠಿಣ ಕ್ರಮಕ್ಕೆ ಡಿಜಿಪಿಗೆ ಪತ್ರ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರಿಂದ ನಿಯಮಬಾಹಿರ ವಾಹನ ತಪಾಸಣೆ: ಕಠಿಣ ಕ್ರಮಕ್ಕೆ ಡಿಜಿಪಿಗೆ ಪತ್ರ

ಬೆಂಗಳೂರು, ಏ. 9: ರಾಜ್ಯದಲ್ಲಿ ಗೃಹ ರಕ್ಷಕದಳ (ಹೋಂಗಾರ್ಡ್ಸ್) ಹಾಗೂ ಸಶಸ್ತ್ರ ಪೊಲೀಸ್ ಪಡೆಯ ಕೆಲವು ಸಿಬ್ಬಂದಿಗಳು ಅಧಿಕಾರ ಮೀರಿಸಿ ವಾಹನ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತವಾಗಿದ್ದು, ಈ ಅನಧಿಕೃತ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯದ ಡಿಜಿ ಮತ್ತು ಐಜಿಪಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅವರು ಉಲ್ಲೇಖಿಸಿರುವಂತೆ, ಮೋಟಾರ್ ವಾಹನ ಕಾಯ್ದೆ-1988 ಹಾಗೂ ಕರ್ನಾಟಕ ಮೋಟಾರ್ ವಾಹನಗಳ ನಿಯಮಗಳು-1989ರ ಪ್ರಕಾರ ವಾಹನ ತಪಾಸಣೆ ನಡೆಸುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಅಧಿಕಾರವು ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎಎಸ್‌ಐ) ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ರಿಗೆ ಎಫ್‌ಟಿವಿಆರ್ ವರದಿಯ ಆಧಾರದ ಮೇಲೆ ಟ್ರಾಫಿಕ್ ಚಾಲನ್ ನೀಡಲು ಅವಕಾಶವಿದ್ದರೂ, ಸ್ವತಂತ್ರವಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವ ಅಧಿಕಾರ ಅವರಿಗೆ ಇಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಆದಾಗ್ಯೂ, ವಾಸ್ತವ ಪರಿಸ್ಥಿತಿಯಲ್ಲಿ ಗೃಹ ರಕ್ಷಕದಳದ ಸಿಬ್ಬಂದಿಗಳು ಮತ್ತು ಸಶಸ್ತ್ರ ಪಡೆಯ ಕೆಲವು ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸರ್ಕಾರದ ವಾಹನಗಳನ್ನು ಬಳಸಿಕೊಂಡು ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಹಾಕಿ ತಪಾಸಣೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದಾಗಿ ದೂರಲಾಗಿದೆ. ಕೆಲವೆಡೆ ವಾಹನ ಸವಾರರ ಕೀಗಳನ್ನು ಕಿತ್ತುಕೊಳ್ಳುವುದು, ಕೇಸ್ ದಾಖಲಿಸುವ ಹೆಸರಿನಲ್ಲಿ ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ಅವಮಾನಿಸುವುದು ಹಾಗೂ ದೌರ್ಜನ್ಯ ತೋರಿಸುವ ಘಟನೆಗಳು ನಡೆಯುತ್ತಿರುವುದಾಗಿ ಪತ್ರದಲ್ಲಿ ವಿವರಿಸಲಾಗಿದೆ.

ವಿಶೇಷವಾಗಿ ನಗರ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಗಳಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಜನ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ದಾನಪ್ಪ ಹೇಳಿದ್ದಾರೆ.

ಈ ರೀತಿಯ ಅಧಿಕಾರ ದುರುಪಯೋಗದಿಂದ ಬೇಸತ್ತ ಸಾರ್ವಜನಿಕರು ದೂರವಾಣಿ ಮೂಲಕ ಹಾಗೂ ಪೊಲೀಸ್ ದೂರುಗಳ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ತಿಳಿದುಬಂದಿದೆ. ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟಾಗುವಂತಹ ಈ ವರ್ತನೆಗಳನ್ನು ತಕ್ಷಣ ತಡೆಗಟ್ಟಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆ, ಮೋಟಾರ್ ವಾಹನ ಕಾಯ್ದೆಯಲ್ಲಿ ನಿಗದಿಪಡಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಇತರ ಯಾವುದೇ ಸಿಬ್ಬಂದಿಗಳು ವಾಹನಗಳನ್ನು ನಿಲ್ಲಿಸುವುದು ಅಥವಾ ತಪಾಸಣೆ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸ್ಪಷ್ಟ ಸುತ್ತೋಲೆ ಹೊರಡಿಸಬೇಕು. ಜೊತೆಗೆ, ಈ ಕುರಿತು ಪ್ರತಿಯೊಂದು ಠಾಣೆ ಮತ್ತು ಘಟಕಗಳಲ್ಲಿ ದಿನನಿತ್ಯದ ರೋಲ್ ಕಾಲ್ ಸಮಯದಲ್ಲಿ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಎಚ್ಚರಿಕೆ ನೀಡುವಂತೆ ಸೂಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕರ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments