Monday, May 25, 2026
HomeDistrictsBallariರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ...

ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ

ಬಳ್ಳಾರಿ,ಮೇ 25:ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ತುಂಗಭದ್ರ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆ (ಸಂ-14, ಕಿ.ಮೀ 4.40) ಮೇಲಿನ ಸೇತುವೆಯ ಮರು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆದ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

ಮೋಟಾರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.

ಕಾಲುವೆಗೆ ನೀರು ಹರಿಸುವ ಮುನ್ನವೇ ಈ ಸೇತುವೆ ಕಾಮಗಾರಿಯನ್ನು ಅತೀ ಜರೂರಾಗಿ ಮುಗಿಸಬೇಕಾಗಿರುವುದರಿಂದ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಮತ್ತು ಅಭಿಪ್ರಾಯವನ್ನು ಪರಿಗಣಿಸಿ ಈ ಕೆಳಗಿನಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಪರ್ಯಾಯ ಸಂಚಾರ ಮಾರ್ಗ:
ಸಿರುಗುಪ್ಪ ಕಡೆಯಿಂದ ಬಳ್ಳಾರಿ ಹಾಗೂ ಬೆಂಗಳೂರು ರಸ್ತೆ ಕಡೆಗೆ ಸಂಚರಿಸುವ ಭಾರಿ ಮತ್ತು ಲಘು ವಾಹನಗಳು ಹವಂಬಾವಿ ಹತ್ತಿರ ಇರುವ ಕೆನಾಲ್ ಪಕ್ಕದ ಎಡಭಾಗದ ಸರ್ವಿಸ್ ರಸ್ತೆ ಮುಖಾಂತರ ತಾಳೂರು ರಸ್ತೆ, ತಾಳೂರು ರಸ್ತೆ ಕ್ರಾಸ್ ಮತ್ತು ಎಸ್.ಪಿ ಸರ್ಕಲ್ ಮೂಲಕ ಚಲಿಸಬೇಕಾಗುತ್ತದೆ.
ಬಳ್ಳಾರಿ ನಗರದ ಕಡೆಯಿಂದ ಸಿರುಗುಪ್ಪಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು ಹವಂಭಾವಿ ಹತ್ತಿರ ಇರುವ ಕೆನಾಲ್ ಪಕ್ಕದ ಎಡಭಾಗದ ರಸ್ತೆಯಿಂದ 100 ಮೀಟರ್ ಅಂತರದಲ್ಲಿರುವ ಸೇತುವೆ ಮೂಲಕ ತಿರುವು ಪಡೆದುಕೊಂಡು ಸಿರುಗುಪ್ಪ ರಸ್ತೆ ಕಡೆಗೆ ಸಂಚರಿಸಬೇಕು.

ಸುರಕ್ಷತಾ ಕ್ರಮಗಳಿಗೆ ಕಟ್ಟುನಿಟ್ಟಿನ ಆದೇಶ:
ಹವಂಬಾವಿ ಕೆನಾಲ್ ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳ ಬದಿಯಲ್ಲಿ ಸಾರ್ವಜನಿಕರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೆ ಈ ರಸ್ತೆಗಳು ಸದ್ಯ ತಗ್ಗು ಗುಂಡಿಗಳಿAದ ಕೂಡಿದ್ದು, ರಾತ್ರಿ ವೇಳೆಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಭಾರಿ ವಾಹನಗಳು ಸಂಚರಿಸುವಾಗ ಯಾವುದೇ ಅಪಘಾತಗಳು ಸಂಭವಿಸದಂತೆ ಲೋಕೋಪಯೋಗಿ ಇಲಾಖೆಯು ಕಡ್ಡಾಯವಾಗಿ ಸೂಕ್ತ ರಸ್ತೆ ಸಂಕೇತಗಳು ಹಾಗೂ ಇತರೆ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಈ ತಾತ್ಕಾಲಿಕ ಸಂಚಾರ ನಿರ್ಬಂಧ ಮತ್ತು ಮಾರ್ಗ ಬದಲಾವಣೆಯ ಅಧಿಸೂಚನೆಯು ಕಾಮಗಾರಿ ಮುಕ್ತಾಯಗೊಂಡು ರಸ್ತೆ ಸಂಚಾರವು ಯಥಾಸ್ಥಿತಿಗೆ ಬರುವವರೆಗೂ ಜಾರಿಯಲ್ಲಿರಲಿದೆ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments