Sunday, March 1, 2026
Home Blog Page 2

ನಂದಿಹಳ್ಳಿಯಲ್ಲಿ ದೇಶಭಕ್ತಿ, ಸಂವಿಧಾನ ಜಾಗೃತಿ ಮೂಡಿಸಿದ 77ನೇ ಗಣರಾಜ್ಯೋತ್ಸವ

0

ಭಾರತದ 77ನೇ ಗಣರಾಜ್ಯೋತ್ಸವವನ್ನು ಸಂಡೂರು ತಾಲೂಕಿನ ಸ.ಹಿ.ಪ್ರಾ. ಶಾಲೆ ನಂದಿಹಳ್ಳಿಯಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಶಾಲಾ ಆವರಣ ರಾಷ್ಟ್ರಧ್ವಜ, ತ್ರಿವರ್ಣ ಧ್ವಜಪತಾಕೆಗಳು ಹಾಗೂ ದೇಶಭಕ್ತಿ ಘೋಷಣೆಗಳಿಂದ ಕಂಗೊಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ಮಾದೇಶ್ ವಹಿಸಿಕೊಂಡಿದ್ದರು. ಎಸ್.ಡಿ.ಎಂ.ಸಿ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎನ್.ಕೆ.ಎಸ್. ಶಿವು ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕ-ಪೋಷಕರು ಹಾಗೂ ಗ್ರಾಮಸ್ಥರು ಗೌರವಪೂರ್ಣವಾಗಿ ನಿಂತು ರಾಷ್ಟ್ರಗೀತೆಗೆ ಶಿರಸಾಷ್ಟಾಂಗ ನಮಿಸಿದರು. ಈ ಕ್ಷಣವು ಎಲ್ಲರಲ್ಲೂ ದೇಶಾಭಿಮಾನ ಹಾಗೂ ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ಮಹತ್ವದ ಕ್ಷಣವಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯ ಮುಖ್ಯಗುರುಗಳಾದ ತಮ್ಮಣ್ಣ ಎಲ್.ಹೆಚ್ ಅವರು, ಭಾರತದ ಸಂವಿಧಾನ ರಚನೆಯ ಮಹತ್ವವನ್ನು ವಿವರಿಸಿದರು. ಸಂವಿಧಾನವು ಸರ್ವರಿಗೂ ಸಮಪಾಲು, ಸಮಬಾಳು, ಸಮಾನ ಹಕ್ಕುಗಳನ್ನು ನೀಡುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಸಂವಿಧಾನ ರಚನೆಗೆ ಶ್ರಮಿಸಿದ ಮಹನೀಯರನ್ನು ನೆನೆದು, ಮುಂದಿನ ಪೀಳಿಗೆಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಜವಾಬ್ದಾರಿ ಶಿಕ್ಷಕರು, ಪೋಷಕರು ಹಾಗೂ ಸಮಾಜದ ಮೇಲಿದೆ ಎಂದು ಅವರು ತಿಳಿಸಿದರು. ಈ ನಾಡು ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗೀದಾರರಾಗಬೇಕು ಎಂಬ ಸಂದೇಶವನ್ನು ಅವರು ನೀಡಿದರು.

ನಂತರ ಮಾತನಾಡಿದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶಿವು ಎನ್.ಕೆ.ಎಸ್ ಅವರು, ಗಣರಾಜ್ಯೋತ್ಸವದ ಐತಿಹಾಸಿಕ ಹಿನ್ನೆಲೆ, ಸಂವಿಧಾನ ಜಾರಿಗೆ ಬಂದ ದಿನದ ಮಹತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪಾತ್ರದ ಕುರಿತು ಸವಿಸ್ತಾರವಾಗಿ ವಿವರಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು ಹಾಗೂ ಸಂವಿಧಾನ ಶಿಲ್ಪಿಗಳ ತ್ಯಾಗವನ್ನು ನೆನೆಯುವ ಮೂಲಕ, ಯುವ ಪೀಳಿಗೆ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಪಾಲಕ-ಪೋಷಕರ ಸಭೆಯನ್ನು ಸಹ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲಕ-ಪೋಷಕರಿಗಾಗಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ ಪೋಷಕರು ಕ್ರೀಡಾ ಮನೋಭಾವ ಪ್ರದರ್ಶಿಸಿದರು. ವಿಜೇತರಾದ ಪಾಲಕರಿಗೆ ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನ ಹಾಗೂ ಬಹುಮಾನಗಳನ್ನು ವಿತರಿಸಿದರು. ಇದರಿಂದ ಶಾಲೆ–ಪೋಷಕರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾದಂತಾಯಿತು.

ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ದೊಡ್ಡಬಸಪ್ಪ, ಸದಸ್ಯರಾದ ಚನ್ನಪ್ಪ, ರಾಮ, ಚಿತ್ತಪ್ಪ, ಲೋಕೇಶ್, ಚೌಡೇಶ್ ಉಪಸ್ಥಿತರಿದ್ದರು. ಜೊತೆಗೆ ಊರಿನ ಮುಖಂಡರಾದ ಬಂಡ್ರೆಪ್ಪ, ಹುಲೇಶಿ, ಬಸವರಾಜ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಪ್ಪ ಅವರು ಸುಸ್ಪಷ್ಟವಾಗಿ ನಡೆಸಿಕೊಟ್ಟರು. ಕರಿಬಸಮ್ಮ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ತನುಜ ಅವರು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜಿಸಿ ನಡೆಸಿದರು. ದೇಶಭಕ್ತಿ ಗೀತೆಗಳು, ನೃತ್ಯಗಳು ಮತ್ತು ಭಾಷಣಗಳ ಮೂಲಕ ಕಾರ್ಯಕ್ರಮವು ಇನ್ನಷ್ಟು ಅರ್ಥಪೂರ್ಣವಾಯಿತು.

ಒಟ್ಟಾರೆ, ಸ.ಹಿ.ಪ್ರಾ. ಶಾಲೆ ನಂದಿಹಳ್ಳಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂವಿಧಾನದ ಮೌಲ್ಯಗಳು, ದೇಶಭಕ್ತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಯಶಸ್ವಿ ಕಾರ್ಯಕ್ರಮವಾಗಿ ರೂಪುಗೊಂಡಿತು.

ಕ್ರಿಕೆಟ್ ವಿಜೇತರಿಗೆ ಧ್ರುವ ಕಪ್ ವಿತರಿಸಿದ ಧ್ರುವ ಆಸರೆ ಫೌಂಡೇಶನ್‌ ಅಧ್ಯಕ್ಷ ಎಂ.ಜಿ ಕನಕ

0

ಬಳ್ಳಾರಿ: ಜನವರಿ.20ರಂದು; ತಾಲೂಕಿನ ಕಕ್ಕಬೇವಿನಹಳ್ಳಿ ಗ್ರಾಮದಲ್ಲಿ “ಧ್ರುವ ಕಪ್ ಕೆ.ಪಿ.ಎಲ್ ಸೀಸನ್ – 5” ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು.

ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷರು ಹಾಗೂ ಅಹಿಂದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಫೈನಲ್ ಕ್ರಿಕೆಟ್ ಮ್ಯಾಚ್ ವಿನ್ನರ್ DYNAMIC DYNAMOS ತಂಡಕ್ಕೂ ಹಾಗೂ ರನ್ನರ್ BLAZING BLASTERS ತಂಡಕ್ಕೂ ಕಪ್ ವಿತರಣೆ ಮಾಡಿದರು.

ನಂತರ ಮಾತನಾಡಿದ ಎಂ.ಜಿ ಕನಕ ಅವರು ಫೈನಲ್ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಿತು ಹಾಗೂ ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಯುವಕರು ಒಳಗಾಗುತ್ತಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ.

ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಲು ಗೆಲುವು ಎನ್ನದೇ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಕರು ಕ್ರಿಕೆಟ್ ಪಂದ್ಯಾವಳಿಯನ್ನು ರೂಪಿಸಿ ಕ್ರೀಡಾಸ್ಫೂರ್ತಿ ಮೆರೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಎಂ.ಜಿ ಕನಕ ಅವರು ಹೇಳಿದರು.

ಈ ಸಂದರ್ಭದಲ್ಲಿ ಚೇಳ್ಳಗುರ್ಕಿ ನಾಗರಾಜ್, ಡೊಣೆಕಲ್ ರಾಜಶೇಖರ್, ಹರಗಿನಡೋಣಿ ಗಾದಿಲಿಂಗ, ಮಾಸೂಮ್, ಸಿ.ಗಂಗಾಧರ್, ಯಾಳ್ಪಿ ಹೇಮರಾಜ್, ನಾಗರಾಜ್ (ಬೈರೆಡ್ಡಿ), ವೈಫೈ ಶಿವು, ಭೀಮೇಶ್ ಆರಿಫ್, ಕಕ್ಕಬೇವಿನಹಳ್ಳಿ ಗ್ರಾಮದ ಕ್ರೀಡಾಪಟುಗಳಾದ ಎ.ಲಕ್ಷ್ಮಣ, ಕೆ.ಆನಂದ, ಎಂ.ಸುರೇಶ್, ಎ.ಲಿಂಗಮೂರ್ತಿ, ಎಚ್.ಅಶೋಕ್ ಸೇರಿದಂತೆ ಇನ್ನೂ ಅನೇಕ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಜಲಕ್ರಾಂತಿಯ ಹರಿಕಾರ ಶ್ರೀ ಸಿದ್ದರಾಮೇಶ್ವರ ಜಯಂತಿ

0

ವರದಿ: ಶಿವರಾಜ್ ಕನ್ನಡಿಗ ಕೊಟ್ಟೂರು
ಕೊಟ್ಟೂರು 15.01.2026 :- ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ತಹಶೀಲ್ದಾರರಾದ ಅಮರೇಶ ಜಿ ಕೆ ಅವರು ಮಹಾನ್ ವಚನಕಾರ, ತತ್ವಜ್ಞಾನಿ, ಸಾಮಾಜಿಕ ಸುಧಾರಕ, ಕರ್ಮಯೋಗಿ, ಕೆರೆ, ಕಟ್ಟೆ, ದೇವಸ್ಥಾನಗಳನ್ನು ನಿರ್ಮಿಸುವುದರ ಮೂಲಕ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದ, ಅನುಭವ ಮಂಟಪದ 3ನೇ ಅಧ್ಯಕ್ಷರಾಗಿದ್ದ, ಸಾವಿರಾರು ವಚನಗಳನ್ನು ರಚಿಸುವ ಮೂಲಕ ಸಾಮಾಜಿಕ ಸಮಾನತೆ, ಮೂಢನಂಬಿಕೆ, ಅನಿಷ್ಟಗಳನ್ನು ತೊಲಗಿಸಲು ಪ್ರಯತ್ನಿಸಿ ಕರ್ತವ್ಯವೇ ದೇವರೆಂದು ನಂಬಿದ್ದ ಸಮತೆಯ ಗಾರುಢಿಗರಾದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಅವರು ಸಮಾಜಕ್ಕೆ ನೀಡಿದ ಸೇವೆಯನ್ನು ಸ್ಮರಿಸುತ್ತಾ, ಶರಣರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖಂಡರಾದ ದೊಡ್ಡರಾಮಣ್ಣ, ಅಧ್ಯಕ್ಷ ಹುಲುಗಪ್ಪ, ಮುಖಂಡರಾದ ವಿ ಟಿ ಎಸ್ ತಿಪ್ಪೇಸ್ವಾಮಿ ವೆಂಕಟೇಶ್, ಪಿ ಹೆಚ್ ಪಂಪಣ್ಣ, ಸಣ್ಣ ರಾಮಪ್ಪ, ಪಿಡಬ್ಲುಡಿ ಇಂಜಿನಿಯರ್ ಕೊಟ್ರೇಶ್ ಹಾಗೂ ಇತರೆ ಭೋವಿ ಸಮಾಜದ ಮುಖಂಡರು ಭಾಗವಹಿಸಿದ್ದರು. ನಂತರ ಗಣೇಶನ ದೇವಸ್ಥಾನದಿಂದ ಪಟ್ಟಣದಲ್ಲಿ ಅದ್ದೂರಿಯಾಗಿ ಶ್ರೀ ಸಿದ್ದಾರೇಶ್ವರ ಭಾವಚಿತ್ರದ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಹಶೀಲ್ದಾರರು ಮೆರವಣಿಗೆಗೆ ಚಾಲನೆ ನೀಡಿದರು.

“ಅಲೆಮಾರಿ ಸಮುದಾಯದ ಅಧಿದೇವತೆಗಳಾದ ದೇವಿ ವಿಶೇಷ ಹಬ್ಬ”

0

ವರದಿ: ಶಿವರಾಜ್ ಕನ್ನಡಗ ಕೊಟ್ಟೂರು

ವಿಜಯನಗರ ಜಿಲ್ಲೆ, ಕೊಟ್ಟೂರು ಪಟ್ಟಣದ ಮುದಕನ ಕಟ್ಟೆ ಕೊರಚರ ಓಣಿಯಲ್ಲಿ ಅಲೆಮಾರಿ ಸಮುದಾಯದ ಕೊರಮ,ಕೊರಚ, ಕುಂಚಿ ಕೊರವ ಸಮುದಾಯಗಳು ದೇವಿಯ ಹಬ್ಬ ವಿಶೇಷ ಹಬ್ಬವಾಗಿ ಬುಧವಾರ ಆಚರಣೆ ಮಾಡಲಾಯಿತು.

ಕೊರಮ,ಕೊರಚ, ಕುಂಚಿ ಕೊರವ ಸಮುದಾಯ ಕಸಬರಿಗೆ, ನುಲಿಯುವಿಕೆ, ಹಂದಿ ಸಾಕಾಣಿಕೆ ಇತರೆ ಮುಂತಾದ ಕುಲಕಸುಬುಗಳನ್ನೇ ಉಸಿರಾಗಿಸಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆ ಹೋಗಿ ತಮ್ಮ ಬದುಕುಗಳನ್ನು ಕಟ್ಟಿಕೊಳ್ಳುತ್ತಿರುವ ಸಮುದಾಯ. ಸಂಕ್ರಾಂತಿ ಹಬ್ಬ ಕೊರಮ,ಕೊರಚ,ಕುಂಚಿ ಕೊರವ ಜನಾಂಗಕ್ಕೆ
ಒಂದು ವಿಶೇಷ ಹಬ್ಬ. ಈ ಹಬ್ಬದಲ್ಲಿ ತಮ್ಮ ಅಧಿದೇವತೆಗಳಾದ ದೇವಿ ಆರಾಧಕರು ದುರುಗಮ್ಮ, ದ್ಯಾಮಮ್ಮ ದೇವರನ್ನು ಪೂಜಿಸಿ, ಅವರನ್ನು ಸಂತೃಪ್ತಿಪಡಿಸಿ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ತಮ್ಮ ಬಂಧು ಬಳಗ, ಸ್ನೇಹಿತರನ್ನೆಲ್ಲಾ ಹಬ್ಬಕ್ಕೆ ಕರೆದು ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸುಮಾರು 80 ವರ್ಷಗಳಿಗೂ ಮುಂಚೆಯೇ ಕೊಟ್ಟೂರಿಗೆ ಬಂದು ನೆಲೆಸಿದ ಕೊರಮ,ಕೊರಚ,ಕುಂಚಿ ಕೊರವ ಸಮುದಾಯ ತನ್ನದೇಯಾದ ಅಸ್ಮಿತೆಯನ್ನು ಉಳಿಸಿಕೊಂಡಿದೆ. ತಮ್ಮ ಸಮುದಾಯಕ್ಕೊಂದು ನಿರ್ದಿಷ್ಟ ಪ್ರದೇಶವೆಂದು ನಿಗದಿಪಡಿಸಿಕೊಂಡು ಆ ಪ್ರದೇಶದಲ್ಲಿ ವಾಸಿಸಿಕೊಂಡು ಕುಣಿತದೊಂದಿಗೆ ಮೆರವಣಿಗೆ ಮೂಲಕ ದೇವಿ ಹಬ್ಬವನ್ನು ಆಚರಿಸುತ್ತಾ
ಬರುತ್ತಿದೆ. ಈ ವರ್ಷದ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ ಎಂದು ಕೆ ಕೊಟ್ರೇಶ್, ಕಾಂತಪ್ಪ, ಪಕೀರಪ್ಪ, ಸಣ್ಣ ಹನುಮಂತಪ್ಪ, ಆರುಬಳ್ಳು ಕೊಟ್ರೇಶ್ , ವೆಂಕಟಪ್ಪ, ದೊಡ್ಡ ಹನುಮಂತಪ್ಪ, ಮುದ್ದಿ ಹನುಮಂತ , ಇತರೆ ಕುಟುಂಬಗಳು ಪತ್ರಿಕೆಗೆ ತಿಳಿಸಿದರು.

ಕೊಟ್ಟೂರು ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ – ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ ಗುರಿ: ಶಾಸಕ ಕೆ. ನೇಮಿರಾಜ್ ನಾಯ್ಕ್

0

ವರದಿ : ಶಿವರಾಜ್ ಕನ್ನಡಿಗ ಕೊಟ್ಟೂರು

ಕೊಟ್ಟೂರು ಪಟ್ಟಣದ ಪ್ರತಿಯೊಂದು ವಾರ್ಡ್‌ಗಳು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಕೆಆರ್‌ಡಿಪಿ ಯೋಜನೆಯ ಅಡಿಯಲ್ಲಿ ಒಟ್ಟು 36 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ನೇಮಿರಾಜ್ ನಾಯ್ಕ್ ಅವರು ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ನಂತರ ಮಾತನಾಡಿದ ಅವರು, ಮತದಾರರ ಆಶೀರ್ವಾದ ಇರುವವರೆಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ತಮ್ಮ ಮುಖ್ಯ ಗುರಿಯಾಗಿದೆ. ಸಂಪೂರ್ಣ ಕ್ಷೇತ್ರವನ್ನು ಸುಂದರ ಹಾಗೂ ಮಾದರಿ ತಾಲೂಕುಗಳನ್ನಾಗಿ ರೂಪಿಸುವ ಕನಸು ನನ್ನದು ಎಂದು ಹೇಳಿದರು.

ಇಂದು ಕೆಕೆಆರ್‌ಡಿಪಿ ಹಾಗೂ ಗ್ರಾಮೀಣ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಕೊಟ್ಟೂರು ಪಟ್ಟಣ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಒಟ್ಟು 36 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಅನುದಾನದ ಮೂಲಕ ಸುಸಜ್ಜಿತ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅವಧಿಯಲ್ಲೇ ಪೂರ್ಣಗೊಳಿಸಲಾಗುವುದು. ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ರೂಪಿಸುವುದೇ ನನ್ನ ಸಂಕಲ್ಪ ಎಂದು ಹೇಳಿದರು.

ಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದ್ದ ರಸ್ತೆಗಳು ಹಾಗೂ ಚರಂಡಿ ಕಾಮಗಾರಿಗಳನ್ನು ಗುತ್ತಿಗೆದಾರರು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಮುಂಬರುವ ಫೆಬ್ರವರಿ 12ರಂದು ನಡೆಯಲಿರುವ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಹಿನ್ನೆಲೆಯಲ್ಲಿ ಪಾದಯಾತ್ರಿಗಳಿಗೆ ಯಾವುದೇ ಕೊರತೆ ಉಂಟಾಗದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಪಾದಯಾತ್ರಿಕರಿಗೆ ಸುಗಮ ಸಂಚಾರಕ್ಕೆ ಹೊಸ ರಸ್ತೆ ನಿರ್ಮಾಣ, ಅಗತ್ಯ ಭದ್ರತೆ, ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲಾಗುತ್ತಿದೆ. ಪಂಚಾಯಿತಿಯಲ್ಲಿ ವಸತಿ ನಿಲಯಗಳ ಕಾಮಗಾರಿಗಳು ಅಂತಿಮ ಹಂತದಲ್ಲಿವೆ ಎಂದು ಹೇಳಿದರು.

ಕೊಟ್ಟೂರು–ಹಗರಿ–ಗಜಪುರ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ಆರಂಭಿಸಲಾಗುವುದು. ತುಂಗಭದ್ರ ಹಿನ್ನೀರಿನ ಬನ್ನಿಗೋಳು ಬಳಿಯಿಂದ ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರು ಸರಬರಾಜು ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೇಸಿಗೆ ಮುನ್ನವೇ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೊಟ್ಟೂರು ಪಟ್ಟಣದಲ್ಲಿ ಈಗಾಗಲೇ ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲ್ಲಿದ್ದು, ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಗ್ರೀನ್ ಸಿಗ್ನಲ್ ಲಭಿಸಿದೆ. ಕೊಟ್ಟೂರು ಕ್ಷೇತ್ರಕ್ಕೆ ಮಾದರಿಯಾಗಿ ಕಾಣಬೇಕು ಎಂಬುದು ನನ್ನ ಆಶಯ ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಯುವ ಮುಖಂಡ ಶೋಬಿತ್, ಎಂ.ಎಂ.ಜೆ. ಬೂದಿ ಶಿವಕುಮಾರ್, ವೈ. ಮಲ್ಲಿಕಾರ್ಜುನ, ಕನ್ನಿಹಳ್ಳಿ ಚಂದ್ರಶೇಖರ್, ವಾಲ್ಮೀಕಿ ಮುಖಂಡ ಫಕೀರಪ್ಪ, ಬಿಎಸ್ಆರ್ ಮೂಗಣ್ಣ, ವಕೀಲರಾದ ಪ್ರಕಾಶ್ ಕೋಡಿಹಳ್ಳಿ, ವೀರೇಶ್, ಐನಳ್ಳಿ ಮಲ್ಲಿಕಾರ್ಜುನ, ದೀಪ ಪ್ರಕಾಶ್, ಸದ್ದಾಂ, ಜಿ. ರಾಜಶೇಖರ್, ಹಳ್ಳಿ ಸುರೇಶ್, ಬಾವಿಕಟ್ಟಿ ಶಿವಾನಂದ್, ರುದ್ರಮುನಿ, ನಾಗಲಪುರ ಬಸಣ್ಣ, ರುದ್ರಜ್ಜ, ಎನ್.ಬಿ. ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕೊಟ್ಟೂರು: ಎಪಿಎಂಸಿ ವರ್ತಕರ ಪುತ್ರ ಬಿ.ಎಸ್. ಪ್ರಶಾಂತ್ ನಿಧನ

0

ಕೊಟ್ಟೂರಿನ ಎಪಿಎಂಸಿ ವರ್ತಕರಾದ ಬಿ.ಎಸ್. ಕೊಟ್ರೇಶ್ ಅವರ ಪುತ್ರ ಬಿ.ಎಸ್. ಪ್ರಶಾಂತ್ ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ದಾವಣಗೆರೆ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಶಾಂತ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಎಪಿಎಂಸಿ ವರ್ತಕ ವಲಯದಲ್ಲಿ ತೀವ್ರ ಶೋಕ ಆವರಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸ್ನೇಹಿತರು ಹಾಗೂ ಕುಟುಂಬದವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಮೃತರ ಆತ್ಮಕ್ಕೆ ಗೌರವ ಸೂಚಿಸುವ ಸಲುವಾಗಿ ನಾಳೆ ಕೊಟ್ಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಿರಲು ನಿರ್ಧರಿಸಲಾಗಿದೆ. ದಲ್ಲಾಲರು ಹಾಗೂ ಖರೀದಿದಾರರು ಸಹಕರಿಸಬೇಕೆಂದು ಎಪಿಎಂಸಿ ವರ್ತಕರು ಮನವಿ ಮಾಡಿದ್ದಾರೆ.

ರಥೋತ್ಸವದ ಯಶಸ್ವಿಗೆ ಶ್ರಮಿಸೋಣ – ನೇಮಿರಾಜ್ ನಾಯ್ಕ್.

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ರಥೋತ್ಸವದ ಸಂದರ್ಭದಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕೆಂದು ಶಾಸಕ ಕೆ.ನೇಮಿರಾಜ್ ನಾಯ್ಕ ಸೂಚಿಸಿದರು.

ಬರುವ ಫೆ.12 ರಂದು ಜರುಗಲಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳೆ ಹೊಣೆಯಾಗುತ್ತಾರೆ ಹಾಗೂ ಪಟ್ಟಣದಲ್ಲಿ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಸಿ.ಸಿ.ಕ್ಯಾಮರಗಳನ್ನು ಅಳವಡಿಸಿ ಸೂಕ್ತ ರಕ್ಷಣೆ ಕಲ್ಪಿಸಬೇಕು ಹಾಗೂ ನೆರಳು, ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಇವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಸ್ವಚ್ಛತೆ, ಬೀದಿ ದೀಪಗಳು ಹಾಗೂ ನೀರಿನ ಪೂರೈಕೆ, ಫಾಗಿಂಗ್ ಹಾಗೂ ಪಾದಯಾತ್ರಿಕರಿಗೆ ಬಯಲು ಸ್ಥಳದಲ್ಲಿ ಶಾಮಿಯಾನ ಹಾಕಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲ ಇವರಿಗೆ ಸೂಚಿಸಿದರು.

ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಜೆಸ್ಕಾಂ ಇಲಾಖೆ ಎಇಇ ನಾಗರಾಜ್ ಅವರಿಗೆ ಸೂಚಿಸಿದರು.

ಸುತ್ತಮುತ್ತಲಿನ ಪಟ್ಟಣಗಳಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಹಾಗೂ ಪಟ್ಟಣದ ಹೊರವಲಯಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ತೆರೆಯುವಂತೆ ಡಿಪೋ ವ್ಯವಸ್ಥಾಪಕರಿಗೆ ಆದೇಶಿಸಿದರು.

ಪಾದಾಯಾತ್ರಿಕರಿಗೋಸ್ಕರ ಎಲ್ಲಾ ಮುಖ್ಯ ರಸ್ತೆಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದು ಹಾಗೂ ಔಷಧಿಗಳ ದಾಸ್ತಾನು ಮಾಡಿಕೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖಾಧಿಕಾರಿಗೆ ಸೂಚಿಸಿದರು. ಎಲ್ಲಾ ಇಲಾಖೆಗಳಿಗೆ ವಹಿಸಿದ ಜವಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ರಥೋತ್ಸವದ ಸಂದರ್ಭದಲ್ಲಿ ಬಂದೋಬಸ್ತಿಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ ಕಲ್ಪಿಸಲಾಗುವುದು ಜೊತೆಗೆ ಸ್ಧಳೀಯರ ಸಹಕಾರ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಮಹಲ್ ಮಠದ ಶಿವಪ್ರಕಾಶ ಸ್ವಾಮಿ ಕೊಟ್ಟೂರು ದೇವರು, ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಪಿ.ಎಚ್.ದೊಡ್ಡರಾಮಣ್ಣ, ಸಹಾಯಕ ಆಯುಕ್ತ ವಿವೇಕಾನಂದ, ತಹಶೀಲ್ದಾರ್ ಜಿ.ಕೆ.ಅಮರೀಶ್, ತಾ.ಪಂ. ಇಒ ಬಿ.ಆನಂದ್ ಕುಮಾರ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಧಾರ್ಮಿಕ ಲಾಖೆ ಸಹಾಯಕ ಆಯುಕ್ತೆ ಎಚ್.ಸವಿತಾ, ಪ.ಪಂ. ಮುಖ್ಯಾಧಿಕಾರಿ ಎ.ನಸರುಲ್ಲಾ, ದೇವಸ್ಧಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಧರ್ಮಕರ್ತ ಎಂ.ಕೆ.ಶೇಖರಯ್ಯ, ಅರವಿಂದ್ ಬಸಾಪುರ್, ಕಟ್ಟೆಮನಿ ದೈವಸ್ಥರು, ಆಯಗಾರ ಬಳಗ, ಇಲಾಖಾ ಅಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಚಿತ್ರ : ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶಾಸಕ ಕೆ.ನೇಮೀರಾಜ್ ನಾಯ್ಕ್ ಮಾತನಾಡಿದರು.

ಕೆರೆ ಕಾವಲಿಹಟ್ಟಿಯಲ್ಲಿ ಯುವತಿಯ ನಿಧನ: ಕುಟುಂಬಕ್ಕೆ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಸಾಂತ್ವನ

0

ವರದಿ : ಬಾಬು ವೈ ಎಂ

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೂಡ್ಲಿಗಿ ಪಟ್ಟಣದ ಕೆರೆ ಕಾವಲಿಹಟ್ಟಿ ಗ್ರಾಮದಲ್ಲಿ ಶ್ರೀಮತಿ ಲಕ್ಷ್ಮೀ (30), ಗಂಡ ಮಾರೇಶ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇಂದು ನಿಧನರಾದರು.

ಈ ದುಃಖದ ಸುದ್ದಿ ತಿಳಿದ ಕೂಡಲೇ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ಸ್ಥಳೀಯ ಮುಖಂಡರೊಂದಿಗೆ ಮೃತರ ನಿವಾಸಕ್ಕೆ ಭೇಟಿ ನೀಡಿ, ದುಃಖದಲ್ಲಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತಳಿಗೆ ದರ್ಶನ ಪಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕರು, ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು, “ಈ ದುಃಖದ ಸಂದರ್ಭದಲ್ಲಿ ನಾವು ನಿಮ್ಮ ಕುಟುಂಬದ ಜೊತೆ ಇದ್ದೇವೆ. ಯಾವುದೇ ಸಹಾಯ ಬೇಕಾದರೂ ಸರ್ಕಾರ ಹಾಗೂ ನನ್ನ ಮಟ್ಟದಲ್ಲಿ ನೆರವು ನೀಡಲಾಗುವುದು” ಎಂದು ಭರವಸೆ ನೀಡಿದರು. ಅಲ್ಲದೆ, ಪೂಜಾ ವಿಧಿ ವಿಧಾನಗಳಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಮೃತಳ ಕುಟುಂಬದ ಸದಸ್ಯರು, ಸ್ಥಳೀಯ ಮುಖಂಡರು, ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಮೃತಳ ಅಗಲಿಕೆಗೆ ಸಂತಾಪ ಸೂಚಿಸಿದರು.

“ಕೊಟ್ಟೂರಿನ ಕಲಾಕೇಂದ್ರದ ಕೊಡುಗೆ ಅಪಾರ :ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿ”

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಲಾ ಕೇಂದ್ರದ ವತಿಯಿಂದ ಶಾಮನೂರು ಶಿವಶಂಕರಪ್ಪ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ಹಾಗೂ ನಾಟಕೋತ್ಸವ 2026 ನಾಲ್ಕನೇ ದಿನದ ಸಮಾರಂಭಕ್ಕೆ ಚಾಲನೆ ನೀಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳಸುವಲ್ಲಿ ಕಲಾ ಕೇಂದ್ರದ ಕೊಡುಗೆ ಅಪಾರ
ಮತ್ತು ಇಂದಿನ ಯುವ ಪೀಳಿಗೆಗೆ ಕಲೆ,ಸಂಗೀತ, ಸಂಸ್ಕೃತಿ ಬಗ್ಗೆ ಅರಿವು ಮೂಢಿಸುತ್ತಿರುವ ಕಲಾಕೇಂದ್ರದ ಕಾರ್ಯ ಶ್ಲಾಘನೀಯ ಎಂದು ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿಯವರು ಹೇಳಿದರು

ಆಧುನಿಕ ಯುಗದಲ್ಲಿ ಯುವ ಜನಾಂಗ ಕೇವಲ ತಾಂತ್ರಿಕತೆಗೆ ಮಾರುಹೋಗದೇ ಕಲೆ, ಸಂಸ್ಕೃತಿಯ ಅರಿವು ಅಳವಡಿಸಿಕೊಳ್ಳಬೇಕೆಂದು ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ.ಸತ್ಯಪ್ರಕಾಶ್, ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಮೋಹನ್ ರೆಡ್ಡಿ, ಎಸ್.ಎಂ.ಗುರುಪ್ರಸಾದ್, ಎನ್.ಎಂ.ಜಲಜಾಕ್ಷಿ, ಮಾತನಾಡಿದರು.

ಈ ಸಂದರ್ಭದಲ್ಲಿ ವಿಕಾಸ ಬ್ಯಾಂಕ ಅಧ್ಯಕ್ಷ ವಿಶ್ವನಾಥ್ ಹಿರೇಮಠ್, ಗುರುದೇವ ವಿದ್ಯಾ ಸಂಸ್ಧೆ ಆಡಳಿತ ಮಂಡಳಿಯ ನಾಗರಾಜ್ ಶೆಟ್ಟಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಎಸ್.ಎಂ.ಮರುಳಸಿದ್ದಯ್ಯ, ಪಿ.ಎಂ.ಬಸವಲಿಂಗಯ್ಯ, ಅಡಿಕೆ ಮಂಜುನಾಥ್, ಎನ್.ಬಿ.ಕೊಟ್ರೇಶ್, ಕುಡತಿನಿಮೊಗ್ಗಿ ದೇವೆಂದ್ರಗೌಡ, ಅಂಚೆ ಕೊಟ್ರೇಶ್, ಮತ್ತಿಹಳ್ಳಿ ಪ್ರಕಾಶ್, ಕೆ.ಎಂ.ರಾಜು, ಗಜಾಪುರ ಸತೀಶ್, ಕೆ.ಅಯ್ಯನಹಳ್ಳಿ ನಾಗಪ್ಪ ತಿಪ್ಪಜ್ಜಿ ರಾಜಣ್ಣ, ವೀರೇಶ್, ಸೋಮಣ್ಣ ಮುಂತಾದವರು ಪಾಲ್ಗೊಂಡಿದ್ದರು.

ಕೋಗಳಿ ಕೊಟ್ರೇಶ್ ತಂಡದವರಿಂದ ಹಾಸ್ಯ ಕಾರ್ಯಕ್ರಮ, ಸರಿಗಮಪ ಜೀಟಿವಿ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಪುಟ್ಟರಾಜ್ ಗವಾಯಿ ಮೆಲೋಡಿಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಡಿಜಿಪಿ ಆದೇಶ

0

ಬೆಂಗಳೂರು:03, ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆ ದಂಡದ ಮೊತ್ತ ವಸೂಲಾತಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ, ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಸಾರ್ವಜನಿಕ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರರವರು ಆದೇಶ ಹೊರಡಿಸಿದ್ದಾರೆ,

ಕೆಲವು ಪೊಲೀಸ್I ಸಿಬ್ಬಂದಿಗಳು ವಾಹನ ತಪಾಸಣಾ ಸಂದರ್ಭದಲ್ಲಿ ವಾಹನ ಚಾಲಕರ ಮೇಲೆ ದೌರ್ಜನ್ಯ, ಹಲ್ಲೆ, ಕಿರುಕುಳ, ಅವಹೇಳನಕಾರಿ, ಅವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿದು ಅವಮಾನ ಮಾಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಂಡು ಬಂದಿದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ

ನಿಮಿತ್ಯ ಪೊಲೀಸ್ ಸಿಬ್ಬಂದಿಗಳು ದಂಡದ ಮೊತ್ತವನ್ನು ವಸೂಲಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ, ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಸಾವರ್ಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರರವರು ಆದೇಶ ಹೊರಡಿಸಿದ್ದಾರೆ,