Monday, March 2, 2026
Home Blog Page 5

ಮಸಣ ಕಾರ್ಮಿಕರಿಗೆ ಮೂಲಭೂತ ಸೌಕರ್ಯ–ಭದ್ರತೆ ಒದಗಿಸಿ

0

ಸಂಡೂರು ಪಟ್ಟಣದಲ್ಲಿ ಸೋಮವಾರ ಮಹತ್ವದ ಪ್ರತಿಭಟನೆ ನಡೆದು ಗಮನ ಸೆಳೆಯಿತು. ಮಸಣ ಕಾರ್ಮಿಕರು ಹಾಗೂ ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಗಳು ಸಮೂಹವಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ (ತಾಪಂ) ಕಚೇರಿ ಎದುರು ಧರಣಿ ನಡೆಸಿ, ತಾಪಂ ಇಒ ಮಡಗಿನ ಬಸಪ್ಪ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಮಟ್ಟದಲ್ಲಿ ಮಸಣ ಭೂಮಿಗಳ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಮಸಣ ಕಾರ್ಮಿಕರ ಹಕ್ಕು-ಸ್ವಾಭಿಮಾನ ರಕ್ಷಣೆಗೆ ಓದಿದ ಬೇಡಿಕೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಧರಣಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಸಂಘದ ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ ಹಾಗೂ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಮಸಣಗಳ ಕಳಪೆ ಸ್ಥಿತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ ಅವರು ಹೇಳಿದರು:

“ತಾಲೂಕಿನ ಬಹುತೇಕ ಗ್ರಾಮಗಳ ಮಸಣಗಳು ಸಂಪೂರ್ಣ ಅವ್ಯವಸ್ಥೆಯಾಗಿದೆ.
ಶವಗಳನ್ನು ತರಲು ಸರಿಯಾದ ದಾರಿ ಇಲ್ಲದಿರುವುದು ಕುಟುಂಬಗಳಿಗೆ ದೊಡ್ಡ ಸಂಕಷ್ಟವನ್ನು ಉಂಟುಮಾಡುತ್ತಿದೆ.”

“ಸ್ಮಶಾನ ಪ್ರದೇಶಗಳಲ್ಲಿ ಕಸಕಡ್ಡಿಯ ರಾಶಿ, ಜಾಗದ ಅಸವ್ಯವಸ್ಥೆ ಹಾಗೂ ನೀರು–ಬೆಳಕು ವ್ಯವಸ್ಥೆಯ ಕೊರತೆ ಇನ್ನೂ ಮುಂದುವರಿದಿದೆ.
ಮರಣೋತ್ತರ ವಿಧಿ ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಅತಿ ಮೂಲಭೂತ ಸೌಲಭ್ಯಗಳೂ ಇಲ್ಲ.”

“ಸ್ಮಶಾನ ಸುತ್ತ ಕಾಂಪೌಂಡ್ ತಡೆಗೋಡೆ,
ಒಳಗೆ ವಿಶ್ರಾಂತಿ ಕೊಠಡಿ, ಶೌಚಾಲಯ,
ಕುಡಿಯುವ ನೀರು, ಬೆಳಕಿನ ವ್ಯವಸ್ಥೆ
ತಕ್ಷಣ ಒದಗಿಸಬೇಕು.”

“ಮಸಣ ಕಾರ್ಮಿಕರು ಮರಣೋತ್ತರ ವಿಧಿಗಳನ್ನು ನೆರವೇರಿಸುವ ಮೂಲಕ ಸಮಾಜದ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊರುತ್ತಿದ್ದಾರೆ. ಆದರೆ ಇಂದಿಗೂ ಅವರಿಗೆ ಮೂಲಭೂತ ಜೀವನ–ಭದ್ರತೆ, ಗೌರವ, ಹಾಗೂ ಸರಿಯಾದ ಸೌಲಭ್ಯಗಳ ಕೊರತೆ ಇದೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕಣ್ಣು ತೆರೆಯಬೇಕು.” ಎಂದರು

ಕಾರ್ಯಕರ್ತರು ಮತ್ತಷ್ಟು ಬೇಡಿಕೆಗಳನ್ನು ಮಂಡಿಸಿದರು:

■ಶವಕ್ಕೆ ಕುಣಿ ತೆಗೆದು ಮುಚ್ಚುವ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೌರವಧನ ನಿಗದಿ ಮಾಡಬೇಕು.
■ಮಸಣ ಕಾರ್ಮಿಕರಿಗೆ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ನೀಡಬೇಕು.
■ಕೆಲಸ ಮಾಡುವಾಗ ರಕ್ಷಿಸಿಕೊಳ್ಳಲು ಗ್ಲವ್ಸ್, ಮಾಸ್ಕ್, ಬೂಟು, ಟಾರ್ಚ್ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ಕಡ್ಡಾಯವಾಗಿ ಒದಗಿಸಬೇಕು.
■ತಲೆಮಾರುಗಳಿಂದ ಅರಣ್ಯ ಹಾಗೂ ಸರ್ಕಾರಿ ಭೂಮಿಗಳಲ್ಲಿ ಬೆಳೆ ಬೆಳೆಸಿ ಬದುಕುತ್ತಿರುವ ಮಸಣ ಕಾರ್ಮಿಕರಿಗೆ ಪಟ್ಟುಪತ್ರ (ಹಕ್ಕುಪತ್ರ) ನೀಡಬೇಕು ಎಂದರು

ಈ ಸಂಧರ್ಭದಲ್ಲಿ
ಮಾರಮ್ಮ (ತಾಲೂಕು ಅಧ್ಯಕ್ಷೆ),
ಹುಲಿಗೆಮ್ಮ, ಹುಲುಗಪ್ಪ, ತಾಯಪ್ಪ, ಲಕ್ಷ್ಮಣ, ಮರಿಯಪ್ಪ, ಹನುಮಂತಪ್ಪ,
ಪಕೀರಪ್ಪ, ಶಿವಮೂರ್ತಿ, ಗಂಗಪ್ಪ, ಅಂಜಿನಪ್ಪ, ನಾಗಪ್ಪ, ಕುಮಾರಸ್ವಾಮಿ, ಹುಲುಗಪ್ಪ, ಬಸವರಾಜ ಮುಂತಾದವರು.

ಪ್ರತಿಭಟನೆ ಶಾಂತಿಪೂರ್ಣವಾಗಿ ನಡೆದಿದ್ದು, ತಾಪಂಇಒ ಬಸಪ್ಪ ಅವರಿಗೆ ಸಮಗ್ರ ಮನವಿ ಸಲ್ಲಿಸಲಾಯಿತು. ಅಧಿಕಾರಿಗಳ ಸ್ಪಂದನೆಗಾಗಿ ಕಾರ್ಮಿಕರು ಈಗ ಕಾತರದಿಂದ ಕಾಯುತ್ತಿದ್ದಾರೆ.

ಕೂಲ್ ಆಗಿರ್ರೀ ಡಿಕೆ ಅಂದ್ರಾ ಖರ್ಗೆ?

0

ಕಳೆದ ವಾರ ದಿಲ್ಲಿಗೆ ಹೋಗಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.ಹೀಗೆ ಹೊರಟವರು ರಾಜ್ಯ ಕಾಂಗ್ರೆಸ್ ನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
‘ಸಾರ್,ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಎರಡೂವರೆ ವರ್ಷ ಕಳೆದಿದೆ.ಈಗ ಒಪ್ಪಂದದಂತೆ ನನಗೆ ಸಿಎಂ ಹುದ್ದೆ ಸಿಗಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ.ಆದರೆ ಸಿದ್ದರಾಮಯ್ಯ ಅವರು ಒಪ್ಪಂದವೇ ಆಗಿಲ್ಲ ಅಂತ ಹೇಳುತ್ತಿದ್ದಾರೆ.ವಿಚಿತ್ರ ಎಂದರೆ ಒಪ್ಪಂದ ಆಗಿದೆಯೋ ಇಲ್ಲವೋ ಅಂತ ವರಿಷ್ಟರು ಕೂಡಾ ಬಾಯಿ ಬಿಡುತ್ತಿಲ್ಲ.
ಈಗ ಎಲ್ಲರ ಅನುಮಾನ ಎಂದರೆ, ಒಪ್ಪಂದವೇ ಅಗಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಯಾಕೆ ಸಿಎಂ ಹುದ್ದೆ ಬಿಟ್ಟುಕೊಡಬೇಕು ಅಂತ ಪಟ್ಟು ಹಿಡಿಯುತ್ತಾರೆ?ಅದೇ ರೀತಿ ಒಪ್ಪಂದ ಆಗಿಲ್ಲ ಎಂದಾದರೆ ಹೈಕಮಾಂಡ್ ಯಾಕೆ ಸ್ಪಷ್ಟನೆ ಕೊಡುತ್ತಿಲ್ಲ?
ಹೀಗಾಗಿ ಈ ವಿಷಯದಲ್ಲಿ ವರಿಷ್ಟರು ಸ್ಪಷ್ಟವಾಗಿ ಮಾತನಾಡಬೇಕು.ಇಲ್ಲದಿದ್ದರೆ ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಮುಳುಗಿ ನಾವೆಲ್ಲ ಪರದಾಡಬೇಕಾಗುತ್ತದೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದಾಗ ಖರ್ಗೆಯವರು ಸ್ವಲ್ಪ ಹೊತ್ತು ಮೌನವಾಗಿದ್ದರಂತೆ.
ಆನಂತರ ಮೆಲ್ಲಗೆ,ಆದರೆ ಖಡಕ್ಕಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು:’ನೋಡಿ ಚಲುವರಾಯಸ್ವಾಮಿ,ರಾಜಕಾರಣದಲ್ಲಿ ಏನು ನಡೆಯಿತು,ಏನು ನಡೆದಿಲ್ಲ ಎಂಬುದಕ್ಕಿಂತ ತುಂಬ ತಾಳ್ಮೆಯಿಂದ ಹೆಜ್ಜೆ ಇಡುವುದು ಮುಖ್ಯ.ಇವತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು?ಅಂತ ಶಾಸಕರ ಗುಂಪು ಬಂದಿತ್ತಲ್ಲ?ಅದರಿಂದ ತುಂಬ ಪ್ರಯೋಜನವಿಲ್ಲ.ಯಾಕೆಂದರೆ ರಾಹುಲ್ ಗಾಂಧಿಯವರು‌ ಇಂತಹ ಒತ್ತಡಗಳಿಗೆಲ್ಲ ಬಗ್ಗುವುದಿಲ್ಲ.ಈ ಹಿಂದೆ ರಾಜಸ್ತಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಮಧ್ಯೆ ಇದೇ ರೀತಿಯ ಬಿಕ್ಕಟ್ಟು ಉದ್ಭವಿಸಿತ್ತಲ್ಲ?ಆಗ ಸಚಿನ್ ಪೈಲಟ್ ಅವರು ಕೂಡಾ ಇದೇ ರೀತಿ ಹೈಕಮಾಂಡ್ ಮೇಲೆ‌ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು.ಆದರೆ ಸಚಿನ್ ಪೈಲಟ್ ಅವರ ಒತ್ತಡಗಳಿಗೆ ರಾಹುಲ್ ಗಾಂಧಿ ಮಣಿಯಲಿಲ್ಲ.ಇನ್ ಫ್ಯಾಕ್ಟ್‌,ಇಂತಹ ಒತ್ತಡಗಳಿಗೆ ಮಣಿಯುವ ಜಾಯಮಾನವೇ ರಾಹುಲ್ ಗಾಂಧಿ ಅವರದಲ್ಲ‌‌.
ಇನ್ನು ಈ ಬೆಳವಣಿಗೆಗಳ ಬಗ್ಗೆ ಮೇಡಂ ಸೋನಿಯಾಗಾಂಧಿಯವರು ಮಧ್ಯ ಪ್ರವೇಶ ಮಾಡುವುದಿಲ್ಲ.ಈಗಾಗಲೇ ಇಂತಹ ಎಲ್ಲ ವ್ಯವಹಾರಗಳನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿರುವುದರಿಂದ ಅವರು ಹೆಚ್ಚು ಉತ್ಸುಕತೆಯನ್ನು ತೋರುವುದೂ ಇಲ್ಲ.
ಹೀಗಾಗಿ ನಾಳೆಯೇ ಸಿಎಂ ಆಗಬೇಕು ಅಂತ ಡಿ.ಕೆ.ಶಿವಕುಮಾರ್ ಅವರೇನು ಹೊರಟಿದ್ದಾರೆ?ಅದರ ಬದಲು ಸ್ವಲ್ಪ ದಿನ ಕಾಯಲಿ.ಇಂತಹ ವಿಷಯಗಳಲ್ಲಿ ಏನೇ ಹೆಜ್ಜೆ ಇಡಬೇಕೆಂದರೂ ಎಲ್ಲರ ಮನವೊಲಿಸಬೇಕು.ಇಂತಹ ಮನವೊಲಿಕೆ‌ಯ ಕಾರ್ಯ ಮುಗಿಯುವವರೆಗೆ ಕಾಯಬೇಕು.ಈ ಕಾರ್ಯ ಹೊಸ ವರ್ಷದ ಹೊತ್ತಿಗಾದರೂ ಆಗಬಹುದು.ಬಜೆಟ್ ಮುಗಿದ ನಂತರವೂ ಆಗಬಹುದು.
ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ದಿನ ತಾಳ್ಮೆಯಿಂದಿರಲಿ ಅಂತ ಚಲುವರಾಯಸ್ವಾಮಿ ಅವರಿಗೆ ವಿವರಿಸಿದ್ದಾರೆ.
ಅವರಾಡಿದ ಮಾತು ಕೇಳಿದ ಚಲುವರಾಯಸ್ವಾಮಿ ಅವರು:’ಏನೋ ಗೊತ್ತಿಲ್ಲ ಸಾರ್,ಆದರೆ ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಕೂಲಾಗಿ ಹೋದರೆ ಸಾಕು’ಅಂತ ನಿಟ್ಟುಸಿರು ಬಿಟ್ಟರಂತೆ.

ಡಿಕೆಸು ನೆತ್ತಿಗೆ ಸಿದ್ದು ಕೈ

ಕುತೂಹಲದ ಸಂಗತಿ ಎಂದರೆ ಚಲುವರಾಯಸ್ವಾಮಿ ಅವರ ಜತೆ ವಿಮಾನದಲ್ಲಿ ಮಾತನಾಡುತ್ತಾ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ,ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಬಳಿಯೂ ಇದೇ ಧಾಟಿಯಲ್ಲಿ ಮಾತನಾಡಿದ್ದರಂತೆ.
ಮೂಲಗಳ ಪ್ರಕಾರ ದಿಲ್ಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರು ನ್ಯಾಯ ಪಂಚಾಯ್ತಿಯ ಮಾತನಾಡಿದರಂತೆ.
‘ಸಾರ್,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಫೈಟು ನಡೆಯಿತಲ್ಲ?
ಆಗ ನೀವು,ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಏನು ಮಾತುಕತೆ ನಡೆಯಿತು?
ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ,ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ಅಮೈಕಬಲ್ ಸೆಟ್ಲ್ ಮೆಂಟ್ ಆಗಿರಲಿಲ್ವಾ?ಈ ಮಾತುಕತೆಯ ನಂತರ ಸಿದ್ದರಾಮಯ್ಯ ಅವರು ನನ್ನ ನೆತ್ತಿಯ ಮೇಲೆ ಕೈ ಇಟ್ಟು ಏನು ಪ್ರಾಮಿಸ್ಸು ಮಾಡಿದ್ರು?’ಯೇ,ಸುರೇಶ್ ಎರಡೂವರೆ ವರ್ಷ ಆದ ಕೂಡ್ಲೇ ಸಿಎಂ ಹುದ್ದೆ ಬಿಟ್ಟುಕೊಡ್ತೀನಿ.ಬೇಕಿದ್ರೆ ಇನ್ನೂ ಒಂದು ವಾರ ಮುಂಚೆಯೇ ಬಿಟ್ಟು ಕೊಡ್ತೀನಿ ಅಂತ ಹೇಳಿರಲಿಲ್ವಾ?ಇದಾದ ನಂತರವೇ ತಾನೇ ನೀವು ಈ ಕುರಿತು ರಾಹುಲ್ ಗಾಂಧಿವರಿಗೆ ವಿವರಿಸಿದ್ದು?ಈ ವಿಷಯವನ್ನು ಇವತ್ತು ವರಿಷ್ಟರ್ಯಾರು ಮಾತನಾಡದಿದ್ದರೆ ನಾವೇನು ಮಾಡಬೇಕು?ಸಿವಕುಮಾರ್ ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ತಾನೇ?ಹೀಗಾಗಿ ಅವರಿಗೆ ನ್ಯಾಯ ಕೊಡಿಸಿ’ಎಂದು ಪಟ್ಟು ಹಿಡಿದಿದ್ದಾರೆ.
ಆಗೆಲ್ಲ ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು:’ರೀ ಸ್ವಲ್ಪ ದಿನ ಸುಮ್ಮನಿರ್ರೀ.ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ.ಆಗ ಬನ್ರಿ.ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ.ಆಗ ಸಿದ್ಧರಾಮಯ್ಯ ಅವರೂ ಬರಲಿ.ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ’ಎಂದಿದ್ದಾರೆ.
ಆದರೆ ಅವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ಸಮಾಧಾನಗೊಳ್ಳದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕುದಿಯುತ್ತಾ ವಾಪಸ್ಸಾಗಿದ್ದಾರೆ.
ಯಾವಾಗ ಅವರು‌ ಕುದಿಯುತ್ತಾ ವಾಪಸ್ಸಾದರೋ?ಇದಾದ ನಂತರ ಅವರ ಬಣ ನಂಬರ್ ಗೇಮ್ ಆಟಕ್ಕಿಳಿದಿದೆ.ಇದರ ಭಾಗವಾಗಿ ಶಾಸಕರ ಒಂದು ತಂಡ ಮೊನ್ನೆ ದಿಲ್ಲಿಗೆ ಹೋಗಿ ಪೆರೇಡ್ ಮಾಡಿ ಬಂದಿದೆ.

ಸಿದ್ದು ಪಾಳಯದ ಲೇಟೆಸ್ಟ್ ಸುದ್ದಿ

ಯಾವಾಗ ಡಿಕೆಶಿ ಬಣ ನಂಬರ್ ಗೇಮ್ ಆಟಕ್ಕಿಳಿಯಿತೋ?ಇದಾದ ನಂತರ ಸಿಎಂ ಸಿದ್ದರಾಮಯ್ಯ ಅವರ ಬಣ ಧಿಡೀರನೇ ಎಚ್ವೆತ್ತಿದೆ.ಅಷ್ಟೇ ಅಲ್ಲ,ಈ ನಂಬರ್ ಗೇಮ್ ಆಟದ ದ ವಿವರವನ್ನು ಗಮನಿಸುತ್ತಾ ಕುಳಿತಿದೆ.
ಅದಕ್ಕಿರುವ ಸಧ್ಯದ ಮಾಹಿತಿಯ ಪ್ರಕಾರ ‘ಡಿಕೆಶಿ ಕ್ಯಾಂಪಿನಲ್ಲಿ ಇಪ್ಪತ್ತಾರು ಶಾಸಕರಿದ್ದಾರೆ.
ನಾಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಡಿಕೆಶಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರೆ ಇಪ್ಪತ್ತಾರು ಶಾಸಕರ ಪೈಕಿ,ಹದಿಮೂರು ಮಂದಿ ಮಾತ್ರ ಡಿಕೆಶಿಯವರ ಹಿಂದೆ ಹೋಗುತ್ತಾರೆ.
ಹೀಗಾಗಿ ಡಿಕೆಶಿ ವಿಷಯದಲ್ಲಿ ಯಾವ ಆತಂಕದ ಅಗತ್ಯವೂ ಇಲ್ಲ.ನಾಳೆ ರಾಹುಲ್ ಗಾಂಧಿಯವರು ಕರೆಸಿ ಕೇಳಿದರೆ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದರಾಯಿತು.
ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಯಂತಹ ವಿಷಯ ಪ್ರಸ್ತಾಪವಾದರೆ ಈ ಕುರಿತು ವಿವರಿಸಿದರಾಯಿತು.ಅನಂತರ ಡಿಕೆಶಿ ಮುಖ್ಯವೋ?ಸರ್ಕಾರ ಮುಖ್ಯವೋ?ಅಂತ ಅವರೇ ತೀರ್ಮಾನಿಸಲಿ ಎಂಬ ತೀರ್ಮಾನಕ್ಕೆ ಬಂದಿದೆ.
ಕಳೆದ ಶನಿವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಇದೇ ಧಾಟಿಯಲ್ಲಿ ತಮ್ಮ ಅಭಿಪ್ರಾಯ ಹೇಳಿದರಂತೆ.
ಆಗೆಲ್ಲ ಖರ್ಗೆಯವರು:’ಈ ವಿಷಯದಲ್ಲಿ ಹೆಚ್ಚು ಯೋಚಿಸಿ ಮುಂದುವರಿಯೋಣ.ನೀವು ಮಾತ್ರ ಹೈಕಮಾಂಡ್ ಗಮನಕ್ಕೆ ತರದೆ ಯಾವ ನಿರ್ಧಾರನ್ನೂ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂಬುದು ಸಧ್ಯದ ಸುದ್ದಿ

ಪ್ರಧಾನಿ ಪಾಳಯಕ್ಕೆ ತಲುಪಿದ್ದೇನು?

ಹೀಗೆ ಡಿಕೆಶಿ ಕ್ಯಾಂಪಿನ ನಂಬರ್ ಗೇಮ್ ಶುರುವಾದ ನಂತರ ಸಿದ್ದರಾಮಯ್ಯ ಅವರ ಪಾಳಯಕ್ಕೆ ಒಂದು ಮೆಸೇಜ್ ಹೋಗಿದ್ದರೆ,ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಂದು ಮೆಸೇಜು ತಲುಪಿದೆ.
ಅದರ ಪ್ರಕಾರ,ಸಿಎಂ ಹುದ್ದೆಗೆ ಪಟ್ಟು ಹಿಡಿದು ಕುಳಿತಿರುವ ಡಿ.ಕೆ.ಶಿವಕುಮಾರ್ ಅವರ ಜತೆ ಸಧ್ಯಕ್ಕೆ 32 ಶಾಸಕರಿದ್ದಾರೆ.ಅದೇ ರೀತಿ ಸಿಎಂ ಸಿದ್ಧರಾಮಯ್ಯ ಅವರ ಹಿಂದೆ 60 ಶಾಸಕರಿದ್ದಾರೆ.ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಾಳಯದಲ್ಲಿರುವ ಶಾಸಕರನ್ನು ಹೊರತುಪಡಿಸಿಯೂ ನಲವತ್ತು ಮಂದಿ ಶಾಸಕರಿದ್ದಾರಲ್ಲ?
ಈ ಪೈಕಿ ಹತ್ತು ಮಂದಿ ಶಾಸಕರನ್ನು ಡಿಕೆಶಿ ತಮ್ಮ ಕಡೆ ಸೆಳೆದುಕೊಂಡರಾಯಿತು.
ಅಲ್ಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಮುಗಿಸಲು ಅಗತ್ಯವಾದ ಆಟ ಶುರುವಾಗುತ್ತದೆ.
ಅರ್ಥಾತ್,ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ವರಿಷ್ಟರು ಒಪ್ಪದಿದ್ದರೆ ಡಿ.ಕೆ.ಶಿವಕುಮಾರ್ ಪಕ್ಷ ತೊರೆಯುತ್ತಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಡಲು ಕಾಂಗ್ರೆಸ್ ವರಿಷ್ಟರು ತೀರ್ಮಾನಿಸಿದರೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಪಕ್ಷ ತೊರೆಯುತ್ತದೆ.
ಹೀಗೆ ಡಿಕೆಶಿ ಕ್ಯಾಂಪೇ ಆಗಲೀ,ಸಿದ್ದರಾಮಯ್ಯ ಕ್ಯಾಂಪೇ ಆಗಲಿ ಹೊರಬಂದರೆ ಆಟ ಶುರುವಾಗುತ್ತದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಖಲಾಸ್ ಆಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿರುವ ಸಂದೇಶ.

ಲಾಸ್ಟ್ ಸಿಪ್

ಅಂದ ಹಾಗೆ ಕಾಂಗ್ರೆಸ್ ಪಾಳಯದಲ್ಲಿ ಅದಿಕಾರ ಹಂಚಿಕೆಗಾಗಿ ಕದನ ಆರಂಭವಾಗಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಪಿನ ಕಣ್ಣು ‘ಜೀಸಿ-ಜಫ್ರು’ಜೋಡಿಯ ಮೇಲೆ ಬಿದ್ದಿದೆ.
ಅಂದ ಹಾಗೆ ಡಿಕೆಶಿ ಕ್ಯಾಂಪಿನಲ್ಲಿ ಇವತ್ತೇನು ನಡೆಯುತ್ತಿದೆ?ಇದಕ್ಕೆ ಹೈಫು ಕೊಡುತ್ತಿರುವುದೇ ದಿಲ್ಲಿಯಲ್ಲಿರುವ ‘ಜೀಸಿ-ಜಫ್ರು’ಜೋಡಿ ಎಂಬುದು ಸಿದ್ದರಾಮಯ್ತ ಕ್ಯಾಂಪಿನ ಸಿಟ್ಟು.
ದಿಲ್ಲಿಯಲ್ಲೇನೇ ನಡೆಯಲಿ,ಈ ‘ಜೀಸಿ-ಜಫ್ರು’ ಜೋಡಿ ಡಿ.ಕೆ.ಶಿವಕುಮಾರ್ ಅವರಿಗೆ ಮೆಸೇಜು ಕೊಡುತ್ತಾ:ಅಣ್ಣಾ,ಇಲ್ಲಿ ದಿಲ್ಲಿಯಲ್ಲಿ ಎಲ್ಲ ಸೆಟ್ಲಾಗಿದೆ.ಪಕ್ಷದ ವರಿಷ್ಟರು ನಿಮ್ಮ ಪರವಾಗಿದ್ದಾರೆ.ಆದರೆ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ಅಧಿಕಾರ ತ್ಯಾಗಕ್ಕೆ ಸಿದ್ದರಾಗಿ ಎಂದು ಹೇಳಲು ಟೈಮು ಕಾಯುತ್ತಿದ್ದಾರೆ.
ಹಾಗಂತ ನಾವು ಸುಮ್ಮನಿರಬಾರದಲ್ಲ?ಹೀಗಾಗಿ ಈಗಿನಿಂದಲೇ ಒತ್ತಡ ಬಿಲ್ಡ್ ಮಾಡೋಣ’ಅಂತ ಕುಮ್ಮಕ್ಕು ಕೊಡುತ್ತಿರುವುದೇ ಈ ಜೋಡಿ.ಇಲ್ಲಿ ಡಿಕೆಶಿ ಕ್ಯಾಂಪಿನ ಸುದ್ದಿ ಹೈಫಾಗಲೂ ಇದೇ ಜೋಡಿ ಕಾರಣ ಎಂಬುದು ಸಿಎಂ ಸಿದ್ದರಾಮಯ್ಯ ಕ್ಯಾಂಪಿನ ಅನುಮಾನ.

ಆರ್.ಟಿ.ವಿಠ್ಠಲಮೂರ್ತಿ

ದಲಿತ, ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನ ಆಚರಣೆ

0

ವರದಿ : ಶಿವರಾಜ್ ಕನ್ನಡಿಗ

ಕೊಟ್ಟೂರು: ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಮಂಡಳಿ ವತಿಯಿಂದ ನವೆಂಬರ್ ೧೮ರ ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಣೆ ಮಾಡಲಾಯಿತು. ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತಾ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ.

ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕೋಮುಗಲಭೆಗಳುಂಟಾಗಿ ಸಮಾಜದಲ್ಲಿ ಸಾಕಷ್ಟು ನೆತ್ತರು ಹರಿಯುವುದಕ್ಕೆ ಮೇಲು-ಕೀಳು, ಬಹುಸಂಖ್ಯಾ-ಅಲ್ಪಸಂಖ್ಯಾತ, ಹಿಂದೂ-ಮುಸ್ಲಿಂ ಎಂಬ ಭೇದಭಾವಗಳೇ ಈ ನೆಲದಲ್ಲಿ ಇನ್ನೂ ರಾರಾಜಿಸುತ್ತಿವೆ.
ಎಲ್ಲಿಯವರೆಗೆ ಜಾತಿಯ ತಾರತಮ್ಯ ಈ ನೆಲದಲ್ಲಿ ತಾಂಡವವಾಡುತ್ತಿರುತ್ತದೋ ಅಲ್ಲಿಯವರೆಗೆ ಈ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಸಿ.ಪಿ.ಐ. ಪಕ್ಷದ ರಾಜ್ಯ ಮಂಡಳಿ ತಾಲ್ಲೂಕು ಕಾರ್ಯದರ್ಶಿ ಕೆ. ರೇಣುಕಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿಗಳಾದ ಉಮೇಶ.ಎಚ್, ಬಿ.ರೇಣುಕಮ್ಮ, ತಾಲ್ಲೂಕು ಮಂಡಳಿ ಸದಸ್ಯರಾದ ರಸೂಲ್, ಜಲೀಲ್ ಮುಖಂಡರು ಷಂಶದ್, ಶಾಹಿನಾ, ಗೌರಮ್ಮ, ಜ್ಯೋತಿ, ಕಾಳಾಪುರದ ಎಲ್ಲಾ ಮಹಿಳೆಯರು ಭಾಗವಹಿಸಿದ್ದರು.

ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಿಂದ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ

0

ಎಐಸಿಸಿ ಮತ್ತು ಕೆಪಿಸಿಸಿ ನೇತೃತ್ವದಲ್ಲಿ ಈಗಾಗಲೇ ದೇಶಾದ್ಯಂತ ನಡೆಯುತ್ತಿರುವ ಬಿಜೆಪಿ ಪಕ್ಷ ಮತ್ತು ಕೇಂದ್ರ ಚುನಾವಣಾ ಆಯೋಗ ಚುನಾವಣೆಯಲ್ಲಿ ಮತಗಳ್ಳತನ ಮಾಡುತ್ತಿರುವ ಹಿನ್ನೆಲೆಯಲ್ಲಿ “ಓಟ್ ಜೋರ್ ಗದ್ದಿ ಚೋಡ್ “ ಅಭಿಯಾನದ ಸಲುವಾಗಿ ಯುವ ಕಾಂಗ್ರೇಸ್ (ಸಾಮಾಜಿಕ ಜಾಲತಾಣ ವಿಭಾಗ) ಬೃಹತ್ ಸಹಿ ಸಂಗ್ರಹ ಆಂದೋಲನದಲ್ಲಿ ಭಾಗವಹಿಸಿ ವಿಜಯನಗರ ಜಿಲ್ಲೆ ಮತ್ತ ಬಳ್ಳಾರಿ ಜಿಲ್ಲೆಯ ವತಿಯಿಂದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶ್ರೀ ಹೆಚ್.ಎಸ್.ಮಂಜುನಾಥ ಗೌಡರವರ ನಿರ್ದೇಶನದಂತೆ ಹಾಗೂ ಸಾಮಾಜಿಕ ಜಾಲತಾಣ ರಾಜ್ಯಧ್ಯಕ್ಷರಾದ ಶ್ರೀ ಸಿದ್ದುಹಳ್ಳೇ ಗೌಡ ಅವರ ಆದೇಶದಂತೆ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿ ಕೆಪಿಸಿಸಿ ಕಛೇರಿಯಲ್ಲಿ ಆಸೀಫ್ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಯುವ ಕಾಂಗ್ರೆಸ್ ಕಾರ್ಯದರ್ಶಿ ಭರತ್ ಕುಮಾರ್ ಸಿಆರ್, ಸಂಡೂರು ಯುವ ಕಾಂಗ್ರೆಸ್ ಮುಖಂಡರಾದ ಗಣೇಶ್,ಕಂಪ್ಲಿ ಯುವ ಕಾಂಗ್ರೆಸ್ ಮುಖಂಡರಾದ ಆರ್.ಪಿ.ಶಶಿಕುಮಾರ್, ತೋರಣಗಲ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮದರ್ ಭಾಷ ಇದ್ದರು.

ಸಮಾಜಸೇವೆಗೆ ಸಿಕ್ಕ ಗೌರವ: ಶಕುಂತಲಾ ಲಕ್ಷ್ಮೀದೇವಿಗೆ, ‘ವಾಲ್ಮೀಕಿ ರತ್ನ’ ಪ್ರಶಸ್ತಿ

0

ಸಂಡೂರು:ನ:01
ಭಾನುವಾರ, 26-10-2025 ರಂದು ಬೆಳಿಗ್ಗೆ 11 ಗಂಟೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ವಾಲ್ಮೀಕಿ ನೌಕರರ ಒಕ್ಕೂಟ (ರಿ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಒಂದು ಸಾರ್ಥಕ ಹಾಗೂ ಗೌರವಾನ್ವಿತ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಗೋಟೆ ಕ್ರಾಸ್‌ನಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಸೇವಾ ಮನೋಭಾವಿ ನಾಯಕರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು, ಯುವಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಹಾಗೂ ವಾಲ್ಮೀಕಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಶಕುಂತಲಾ ಲಕ್ಷ್ಮಿದೇವಿ.ಕೆ
ರಾಜ್ಯ ಕಾರ್ಯದರ್ಶಿಗಳು ಬಹುಜನ ಸಮಾಜ ಪಾರ್ಟಿ – ಬಳ್ಳಾರಿ & ವಿಜಯನಗರ ಜಿಲ್ಲಾ ಉಸ್ತುವಾರಿಗಳು ಹಾಗೂ
ಬಳ್ಳಾರಿ ಜಿಲ್ಲೆಯ, ಸಂಡೂರು ವಿಧಾನಸಭಾ ಹಾಗೂ ಲೋಕಸಭಾ ಬಿ ಎಸ್ ಪಿ ಅಭ್ಯರ್ಥಿ
ಇವರನ್ನು ಗೌರವಿಸುವ ಮೂಲಕ “ಕರ್ನಾಟಕ ವಾಲ್ಮೀಕಿ ರತ್ನ – 2025” ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಪ್ರಶಸ್ತಿ ಪುರಸ್ಕೃತರು:
ಶಕುಂತಲಾ ಲಕ್ಷ್ಮೀದೇವಿ – ಕೂರಿಗನೂರು, ಶಿರುಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ
ವಾಲ್ಮೀಕಿ ಸಮಾಜದ ಮುಂಚೂಣಿ ಮಹಿಳಾ ಮುಖಂಡೆಯಾಗಿರುವ ಶಕುಂತಲಾ ಲಕ್ಷ್ಮೀದೇವಿ ಅವರು ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಮಹಿಳೆಯರಿಗೆ ಶಿಕ್ಷಣದ ಮಹತ್ವ ತಿಳಿಸುವಲ್ಲಿ, ಯುವತಿಯರ ಸಬಲೀಕರಣ ಹಾಗೂ ಸಮಾಜದ ಏಕತೆಯ ಬಲವರ್ಧನೆಯಲ್ಲಿ ಅವರು ನೀಡಿರುವ ಕೊಡುಗೆ ವಿಶಿಷ್ಟವಾಗಿದೆ.

ಆಧ್ಯಾತ್ಮಿಕ ಸಾನ್ನಿಧ್ಯ:
ಕಾರ್ಯಕ್ರಮವು ನಾಗಶಕ್ತಿ ಶ್ರೀಶ್ರೀಶ್ರೀ ವಾಲ್ಮೀಕಿ ಬ್ರಹ್ಮನಂದ ಗುರುಜಿ, ಪೀಠಾಧ್ಯಕ್ಷರು – ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ದೊಡ್ಡಬಳ್ಳಾಪುರ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.
ಗುರುಜಿಯವರು ಪ್ರಶಸ್ತಿ ಪುರಸ್ಕೃತರಿಗೆ ಶಿರೋಮಣಿ, ಶಾಲು, ಫಲಪುಷ್ಪ, ಪ್ರಮಾಣಪತ್ರ ಹಾಗೂ “ಕರ್ನಾಟಕ ವಾಲ್ಮೀಕಿ ರತ್ನ – 2025” ಸ್ಮಾರಕ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಗುರುಜಿಯವರು ಮಾತನಾಡಿ..
“ವಾಲ್ಮೀಕಿ ಸಮಾಜದಲ್ಲಿ ಸೇವೆಯ ಮಾರ್ಗವನ್ನು ಆರಿಸಿಕೊಂಡು ಜನಹಿತಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವವರು ನಿಜವಾದ ವಾಲ್ಮೀಕಿಯ ಸಂತರ ಪರಂಪರೆಯ ಅನುಯಾಯಿಗಳು. ಸಮಾಜಕ್ಕೆ ನಿಜವಾದ ಸೇವೆ ಮಾಡಿದವರನ್ನು ಗೌರವಿಸುವುದೇ ನಮ್ಮ ಧರ್ಮ.” ಎಂದರು

ಅಭಿನಂದನೆಗಳ ಮಳೆ:
ಈ ಪ್ರಶಸ್ತಿ ಪುರಸ್ಕಾರದಿಂದ ವಾಲ್ಮೀಕಿ ಸಮಾಜದ ವಿವಿಧ ಘಟಕಗಳು, ಮುಖಂಡರು ಹಾಗೂ ಗಣ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು, ಮಹಿಳಾ ಸಂಘಗಳು, ಯುವ ಸಂಘಗಳು ಹಾಗೂ ಸಮುದಾಯದ ಹಿರಿಯರು ಹಾರೈಕೆಗಳನ್ನು ಸಲ್ಲಿಸಿದರು.
ಶಕುಂತಲಾ ಲಕ್ಷ್ಮೀದೇವಿ ಅವರು ಪ್ರಶಸ್ತಿ ಸ್ವೀಕರಿಸಿದ ನಂತರ ಸಮಾಜದ ಏಕತೆಯ ಕಡೆ ತಮ್ಮ ಬದ್ಧತೆಯನ್ನು ಪುನಃ ದೃಢಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಗುರುಪೀಠದ ಆಶೀರ್ವಾದದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮೂಹ ಭೋಜನ ನಡೆಯಿತು.

ಸಾರಾಂಶ:
ವಾಲ್ಮೀಕಿ ಗುರುಪೀಠದಲ್ಲಿ ನಡೆದ ಈ ಕಾರ್ಯಕ್ರಮವು ಸಮಾಜದ ಸೇವೆ, ಶಿಕ್ಷಣ ಮತ್ತು ಹೋರಾಟದ ಮೌಲ್ಯಗಳನ್ನು ಪುನರುಜ್ಜೀವಗೊಳಿಸಿದ ಅರ್ಥಪೂರ್ಣ ಕ್ಷಣವಾಗಿ ಎಲ್ಲರ ಮನದಲ್ಲಿ ನೆಲೆಗೊಂಡಿತು.
“ಕರ್ನಾಟಕ ವಾಲ್ಮೀಕಿ ರತ್ನ – 2025” ಪ್ರಶಸ್ತಿ ಪಡೆದ ಶಕುಂತಲಾ ಲಕ್ಷ್ಮೀದೇವಿ ಇವರ ಸಾಧನೆ ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿ ಎಂಬ ಆಶಯ ಎಲ್ಲರಲ್ಲೂ ಮೂಡಿತು.

ಮಳೆ ಅವಾಂತರದಿಂದ ಮನೆ ಹಾನಿ – ಸಣ್ಣ ರುದ್ರಪ್ಪ ಕುಟುಂಬ ನಿರಾಶ್ರಿತ!

0

ಸಂಡೂರು, ಅಕ್ಟೋಬರ್ 27:
ತೋರಣಗಲು ಹೋಬಳಿಯ ಕುರೆಕುಪ್ಪ ಗ್ರಾಮದಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಗ್ರಾಮದ 5ನೇ ವಾರ್ಡ್‌ನ ನಿವಾಸಿ ಕೆ. ಸಣ್ಣ ರುದ್ರಪ್ಪ (ತಂದೆ ಗಾದಿ ಲಿಂಗಪ್ಪ) ಅವರ ಮನೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಗೋಡೆ ಭಾಗಶಃ ಕುಸಿದು ಬಿದ್ದು ಮನೆ ಹಾನಿಗೊಳಗಾಗಿದೆ.

ಈ ಅವಘಡದಿಂದ ಕುಟುಂಬದವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಪ್ರಾಣಾಪಾಯ ತಪ್ಪಿಸಿಕೊಂಡಿದ್ದಾರೆ. ಮನೆಯು ವಾಸಯೋಗ್ಯವಾಗದ ಪರಿಸ್ಥಿತಿ ಉಂಟಾಗಿರುವುದರಿಂದ ಕುಟುಂಬವು ತಾತ್ಕಾಲಿಕವಾಗಿ ನೆರೆಹೊರೆಯವರ ಮನೆಯಲ್ಲಿ ಆಶ್ರಯ ಪಡೆದಿದೆ. ಕುರುಬ ಸಮುದಾಯಕ್ಕೆ ಸೇರಿದ ಸಣ್ಣ ರುದ್ರಪ್ಪ ಅವರ ಕುಟುಂಬ ಈಗ ದಿಕ್ಕುತೋಚದ ಸ್ಥಿತಿಯಲ್ಲಿದೆ.

ಘಟನೆಯ ನಂತರ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಾನಿಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸ್ಥಳೀಯರು ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ತಕ್ಷಣ ಪರಿಹಾರ ಒದಗಿಸಲು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ, ಹಾನಿ ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಸಂತ್ರಸ್ತರಿಗೆ ಶೀಘ್ರ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಪುನರ್ವಸತಿಗೆ ಕ್ರಮಕೈಗೊಳ್ಳಿ – ಗಣತಿಪಟ್ಟಿಯಿಂದ ಹೊರಗುಳಿದ ವಿಮುಕ್ತ ದೇವದಾಸಿಯರ ಕಳವಳ

0

ಸಂಡೂರು, ಅಕ್ಟೋಬರ್ 24:
ಗಣತಿಪಟ್ಟಿಯಿಂದ ಹೊರಗುಳಿದ ವಿಮುಕ್ತ ದೇವದಾಸಿಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ತಕ್ಷಣ ನ್ಯಾಯ ದೊರಕಿಸುವಂತೆ ಆಗ್ರಹಿಸಿ ವಿಮುಕ್ತ ದೇವದಾಸಿಯರ ಸಂಘದ ಪ್ರತಿನಿಧಿಗಳು ಸಂಡೂರಿನ ಬಾಲ ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಪಿ. ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ನಾಯಕಿ ಎಚ್. ದುರುಗಮ್ಮ ಮಾತನಾಡಿ, “ದೇವದಾಸಿ ಪದ್ಧತಿಯನ್ನು ನಿರ್ಮೂಲಗೊಳಿಸುವ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಅನೇಕ ವರ್ಷಗಳ ತ್ಯಾಗ, ಹೋರಾಟ ಹಾಗೂ ಒತ್ತಾಯದ ಫಲವಾಗಿ ರಾಜ್ಯ ಸರ್ಕಾರ 2025ರಲ್ಲಿ ಹೊಸ ದೇವದಾಸಿ ನಿಷೇಧ ಮಸೂದೆಯನ್ನು ಅಂಗೀಕರಿಸಿದೆ. ಈ ಕಾಯಿದೆಯಡಿ, ಹಿಂದಿನ ಗಣತಿಪಟ್ಟಿಯಿಂದ ಹೊರಗುಳಿದ ಎಲ್ಲ ವಿಮುಕ್ತ ದೇವದಾಸಿಯರು ಹಾಗೂ ಅವರ ಕುಟುಂಬ ಸದಸ್ಯರನ್ನು ಅಧಿಕೃತ ಪಟ್ಟಿಗೆ ಸೇರಿಸಬೇಕೆಂದು ಸರ್ಕಾರ ಆದೇಶ ನೀಡಿದೆ. ಆದರೆ, ಅದೇ ವೇಳೆ ಗಣತಿಯ ಕೆಲಸದಲ್ಲಿ ಅಸ್ಪಷ್ಟತೆ ನಡೆಯುತ್ತಿದೆ. ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಕುಟುಂಬಗಳನ್ನು ಹೊರಗಿಡಲು ಯತ್ನಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದುವರಿದು, “1982ರ ದೇವದಾಸಿ ನಿಷೇಧ ಕಾಯಿದೆ ನಂತರ ಹುಟ್ಟಿದವರನ್ನು ಗಣತಿಯಲ್ಲಿ ಸೇರಿಸಲಾಗದು ಎಂಬ ನೆಪ ತೋರಿಸಿ ಸರ್ಕಾರದ ಕೆಲವು ಅಧಿಕಾರಿಗಳು ಹೊಸ ಕಾಯಿದೆ 2025ರ ಉದ್ದೇಶವನ್ನೇ ಕದಡುವ ಕೆಲಸ ಮಾಡುತ್ತಿದ್ದಾರೆ. ಹೊಸ ಕಾಯಿದೆಯು ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ, ಶಿಕ್ಷಣ, ಆರೋಗ್ಯ ಹಾಗೂ ವಸತಿ ಸೌಲಭ್ಯ ನೀಡುವ ಉದ್ದೇಶ ಹೊಂದಿದೆ. ಆದರೆ ಗಣತಿಪಟ್ಟಿಯಿಂದ ಹೊರಗುಳಿದವರ ಹೆಸರುಗಳು ದಾಖಲಾಗದಿದ್ದರೆ, ಅವರು ಈ ಎಲ್ಲ ಹಕ್ಕುಗಳಿಂದ ವಂಚಿತರಾಗುತ್ತಾರೆ,” ಎಂದು ವಿಷಾದ ವ್ಯಕ್ತಪಡಿಸಿದರು.

ದುರುಗಮ್ಮ ಅವರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ದೇವದಾಸಿಯರಿಗೆ ತಲುಪದಿರುವುದನ್ನು ಉಲ್ಲೇಖಿಸಿ, “ವಿಮುಕ್ತ ದೇವದಾಸಿಯರ ಪ್ರಮಾಣಪತ್ರಗಳು ಸಿಕ್ಕಿಲ್ಲದ ಕಾರಣದಿಂದ ಅನೇಕರು ಪಿಂಚಣಿ, ವಸತಿ, ಶಿಕ್ಷಣ ಸಹಾಯಧನ ಮುಂತಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ತಕ್ಷಣ ತಪಾಸಣೆ ನಡೆಸಿ ಎಲ್ಲರನ್ನು ಗಣತಿ ಪಟ್ಟಿಯಲ್ಲಿ ಸೇರಿಸಬೇಕು. ಪುನರ್ವಸತಿ ಯೋಜನೆಗಳು ಕಾಗದದಲ್ಲೇ ಉಳಿಯಬಾರದು,” ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಹುಲಿಗೆಮ್ಮ, ಸದಸ್ಯೆಯರಾದ ಮಾರೆಮ್ಮ ಹಾಗೂ ಅಂಜೀನಮ್ಮ ಉಪಸ್ಥಿತರಿದ್ದು, ತಮ್ಮ ಜೀವನದ ಕಷ್ಟಸಂಕಷ್ಟಗಳ ಕುರಿತೂ ಸಿಡಿಪಿಒಗೆ ವಿವರಿಸಿದರು. ಅವರು ತಮ್ಮದೇ ಹಳ್ಳಿಗಳಲ್ಲಿ ಅಸಮಾನತೆ, ಸಾಮಾಜಿಕ ದೂರವಿಡುವಿಕೆ, ಹಾಗೂ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಸಿಡಿಪಿಒ ಪಿ. ನಾಗರಾಜ ಅವರು ಮನವಿಯನ್ನು ಸ್ವೀಕರಿಸಿ, ವಿಷಯವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾಮಾಜಿಕ ಕಲ್ಯಾಣ ಇಲಾಖೆಯ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ದೇವದಾಸಿ ನಿಷೇಧ ಕಾಯಿದೆ-2025 ಅಡಿ ಸರಕಾರವು ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರ ಪುನರ್ವಸತಿ, ಶಿಕ್ಷಣ, ಆರೋಗ್ಯ ಹಾಗೂ ಗೌರವಯುತ ಜೀವನದ ಭರವಸೆ ನೀಡಿದರೂ, ನೆಲಮಟ್ಟದಲ್ಲಿ ಅದರ ಅನುಷ್ಠಾನ ಅಸಮರ್ಪಕವಾಗಿದೆ ಎಂದು ಸಂಘದ ಸದಸ್ಯರು ಹೇಳಿದರು. “ಕಾಗದ ಕಾಯಿದೆ ನಮಗೆ ಜೀವ ಕೊಡದು, ಅದನ್ನು ಜಾರಿಗೆ ತರುವವರ ನಿಷ್ಠೆ ಬೇಕು” ಎಂದು ದುರುಗಮ್ಮ ಹೇಳಿದರು.

ಸಾರಾಂಶವಾಗಿ, ದೇವದಾಸಿ ಪದ್ಧತಿಯಿಂದ ಮುಕ್ತರಾದ ಮಹಿಳೆಯರು ಇಂದು ಪುನರ್ವಸತಿ ಹಕ್ಕಿಗಾಗಿ ಮತ್ತೊಮ್ಮೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಗಣತಿ ಪಟ್ಟಿಯಿಂದ ಹೊರಗುಳಿದವರನ್ನು ಸೇರಿಸುವುದರ ಮೂಲಕ ಅವರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಕ್ರಮ ಕೈಗೊಳ್ಳಬೇಕೆಂಬುದು ಸಂಘದ ಪ್ರಮುಖ ಬೇಡಿಕೆ.

“ಶ್ರಮ, ಶ್ರದ್ಧೆ, ಸೇವೆಗೆ ಸಮ್ಮಾನ – ಜೆಎಸ್‌ಡಬ್ಲ್ಯೂ ಫೌಂಡೇಶನ್‌ಗೆ ರೋಟರಿ ಇಂಡಿಯಾ ಗೌರವ”

0

ಬೆಂಗಳೂರು, ಅಕ್ಟೋಬರ್ 20:
ರೋಟರಿ ಇಂಡಿಯಾ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ CSR (Corporate Social Responsibility) ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ, ಜೆಎಸ್‌ಡಬ್ಲ್ಯೂ ಫೌಂಡೇಶನ್ 2025ರ ಅತ್ಯುತ್ತಮ CSR ಸಂಸ್ಥೆಯಾಗಿ ಆಯ್ಕೆಯಾಗಿ ಪ್ರಶಸ್ತಿಯನ್ನು ಗಳಿಸಿದೆ. ಶಿಕ್ಷಣ ಮತ್ತು ಜಲ ನಿರ್ವಹಣೆ ಕ್ಷೇತ್ರದಲ್ಲಿ ಸಂಸ್ಥೆಯು ಕೈಗೊಂಡ ಉಲ್ಲೇಖನೀಯ ಅಭಿವೃದ್ಧಿ ಕಾರ್ಯಗಳು ಈ ಗೌರವಕ್ಕೆ ಕಾರಣವಾಗಿವೆ.

ಬೆಂಗಳೂರು ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತದ ವಲಯ ಮುಖ್ಯಸ್ಥರಾದ ಪೆದ್ದಣ್ಣ ಬೀಡಾಲ ಹಾಗೂ ಹಿರಿಯ ವ್ಯವಸ್ಥಾಪಕರಾದ ರಾಜಶೇಖರ ರಾಜು ಅವರು ಜೆಎಸ್‌ಡಬ್ಲ್ಯೂ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಸಮುದಾಯ ಆಧಾರಿತ ಅಭಿವೃದ್ಧಿಗೆ ಒತ್ತು ನೀಡಿರುವ ಜೆಎಸ್‌ಡಬ್ಲ್ಯೂ ಫೌಂಡೇಶನ್, ಸುಮಾರು 40 ಗ್ರಾಮಗಳಲ್ಲಿ ಜಲ ಸಂರಕ್ಷಣಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇವುಗಳಲ್ಲಿ ಚೆಕ್‌ಡ್ಯಾಮ್‌ಗಳು, ಕೃಷಿ ಹೊಂಡಗಳು, ಮಳೆನೀರು ಸಂಗ್ರಹಣೆ ಮುಂತಾದ ಕ್ರಮಗಳ ಮೂಲಕ ಪ್ರದೇಶದ ಭೂಗರ್ಭ ಜಲಮಟ್ಟವನ್ನು ಪುನರುಜ್ಜೀವನಗೊಳಿಸಲಾಗಿದ್ದು, 1,500 ಕ್ಕೂ ಹೆಚ್ಚು ಕುಟುಂಬಗಳಿಗೆ ಶಾಶ್ವತವಾಗಿ ನೀರಿನ ಲಭ್ಯತೆ ಒದಗಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿಯೂ ಸಂಸ್ಥೆಯು ವಿಶಿಷ್ಟ ಸಾಧನೆ ಮಾಡಿದೆ. ಸಮಗ್ರ ಕಲಿಕೆಗೆ ಉತ್ತೇಜನ, ಜೀವನ ಕೌಶಲ್ಯಗಳ ಅಭಿವೃದ್ಧಿ, ಫಲಿತಾಂಶ ಸುಧಾರಣೆ ಮತ್ತು ಶಾಲಾ ಮೂಲಭೂತ ಸೌಕರ್ಯಗಳ ಬಲವರ್ಧನೆ ಕಾರ್ಯಗಳಿಂದ 1,564 ಶಾಲೆಗಳ, 1,83,749 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇರ ಪ್ರಯೋಜನವಾಗಿದೆ.

ಪ್ರಶಸ್ತಿ ಸ್ವೀಕರಿಸಿ ಪೆದ್ದಣ್ಣ ಬೀಡಾಲ ಅವರು ಮಾತನಾಡಿ…
“ಈ ಪ್ರಶಸ್ತಿ ನಮ್ಮ ತಂಡದ ಶ್ರಮ ಮತ್ತು ಸಮುದಾಯಗಳ ವಿಶ್ವಾಸಕ್ಕೆ ನೀಡಿದ ಮಾನ್ಯತೆ. ಸುಸ್ಥಿರ ಅಭಿವೃದ್ಧಿ ಮತ್ತು ಜನರ ಸಬಲೀಕರಣವೇ ನಮ್ಮ ಕಾರ್ಯದ ಮೂಲ ಉದ್ದೇಶ. ಈ ಗೌರವಕ್ಕಾಗಿ ರೋಟರಿ ಇಂಡಿಯಾಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಮ್ಮ ಎಲ್ಲಾ ಪಾಲುದಾರರು, ಸಿಬ್ಬಂದಿ ಮತ್ತು ಗ್ರಾಮೀಣ ಸಮುದಾಯಗಳ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಗಿದೆ.” ಅವರು ಮುಂದುವರೆದು, “ಜೆಎಸ್‌ಡಬ್ಲ್ಯೂ ಫೌಂಡೇಶನ್ ಶಿಕ್ಷಣ, ಆರೋಗ್ಯ, ಪರಿಸರ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ,”
ಎಂದು ಹೇಳಿದರು.

ರೋಟರಿ ಇಂಡಿಯಾ ರಾಷ್ಟ್ರೀಯ CSR ಪ್ರಶಸ್ತಿ ಕಾರ್ಯಕ್ರಮದಲ್ಲಿ ದೇಶದ ಅನೇಕ ಪ್ರಮುಖ ಕಂಪನಿಗಳ ಸಾಮಾಜಿಕ ಬದ್ಧತೆಯ ಕೆಲಸಗಳಿಗೆ ಗೌರವ ಸಲ್ಲಿಸಲಾಯಿತು. ಈ ಪೈಕಿ ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಕಾರ್ಯಚಟುವಟಿಕೆಗಳು “ಸಮಾಜ ಪರಿವರ್ತನೆಗೆ ಮಾದರಿ” ಎಂದು ಪ್ರಶಂಸಿಸಲ್ಪಟ್ಟವು.

ಮಹಿಳಾ ನೌಕರರಿಗೆ ಋತುಚಕ್ರ ರಜೆ: ರಾಜ್ಯ ಸರ್ಕಾರದ ಅದ್ಭುತ ನಿರ್ಧಾರ: ಟಿ.ಕವಿತಾ

0

ಸಂಡೂರು: ಮಹಿಳಾ ನೌಕರರ ಆರೋಗ್ಯ, ಸುಖಸೌಕರ್ಯ ಮತ್ತು ಕಾರ್ಯನಿಷ್ಠೆ ಕುರಿತು ರಾಜ್ಯ ಸರ್ಕಾರ ವಿಶೇಷ ಗಮನ ನೀಡುತ್ತಿದೆ. ಇದರಲ್ಲಿ ಪ್ರಮುಖ ಹೆಜ್ಜೆಯಾಗಿ, ಪ್ರತಿ ತಿಂಗಳು ಋತುಚಕ್ರದ ಸಮಸ್ಯೆಗಳನ್ನು ಎದುರಿಸುವ ಮಹಿಳಾ ನೌಕರರಿಗೆ ವೇತನ ಸಹಿತ ವರ್ಷಕ್ಕೆ 12 ದಿನ ರಜೆ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.

ಕಾರ್ಯನಿರತ ಮಹಿಳೆಯರು ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವು, ಸೊಂಟ ನೋವು, ಕೈಕಾಲುಗಳಿಗೆ ಹರಿತ, ಮನೋಶಕ್ತಿ ಕುಗ್ಗುವುದು ಮುಂತಾದ ಅನೇಕ ಅಸೌಕರ್ಯಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಕಚೇರಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಸಮಸ್ಯೆಯನ್ನು ಸ್ವಲ್ಪವರೆಗಾದರೂ ಮುಕ್ತವಾಗಿ ಹೇಳುವುದು ಕಷ್ಟಕರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ, ಮಹಿಳೆಯರ ಹಿತಕ್ಕಾಗಿ ಸರ್ಕಾರ ಮುಂದಾಗಿ ನಿರ್ಧಾರ ಕೈಗೊಂಡಿರುವುದು, ವಿಶೇಷವಾಗಿ ಮಹಿಳಾ ನೌಕರರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಗೌರವಿಸುವ ನಿಟ್ಟಿನಲ್ಲಿ ಗಮನಾರ್ಹವಾಗಿದೆ.

ಈ ಉತ್ತಮ ಮತ್ತು ಪ್ರಗತಿಪರ ನಿರ್ಧಾರಕ್ಕೆ, ಕಾರ್ಮಿಕ ಮತ್ತು ಮಹಿಳಾ ಕಲ್ಯಾಣ ಸಚಿವ ಸಂತೋಷ್ ಲಾಡ್ ಅವರನ್ನು ಸಂಡೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಶನ್ (AITUC) ಸಂಘಟನೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದೆ. ಸಂಘಟನೆಯ ಅಧ್ಯಕ್ಷೆ ಮತ್ತು ವಾಲ್ಮೀಕಿ ಮಹಿಳಾ ಪ್ರಧಾನ ಕಾರ್ಯದರ್ಶಿ ಟಿ. ಕವಿತಾ ಅವರು ತಿಳಿಸಿದ್ದಾರೆ, ಈ ನಿರ್ಧಾರವು ರಾಜ್ಯದ ಎಲ್ಲಾ ಕ್ಷೇತ್ರದ ಮಹಿಳಾ ನೌಕರರಿಗೆ ಪ್ರೇರಣೆ ನೀಡುವಂತಿದ್ದು, ಅವರ ದೈನಂದಿನ ಕೆಲಸದ ಮೇಲೆ ಒತ್ತಡವನ್ನು ಕಡಿಮೆ ಮಾಡಲಿದೆ.

ಸಂಘಟನೆಯ ಅಭಿಪ್ರಾಯದ ಪ್ರಕಾರ, ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಅಗತ್ಯವಿರುವ ವಿಶ್ರಾಂತಿ ಮತ್ತು ನೆರವು ನೀಡುವುದು ಅವರ ಕಾರ್ಯದಕ್ಷತೆ, ಆರೋಗ್ಯ ಮತ್ತು ಜೀವನಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಷ್ಟರ ಜೊತೆಗೆ, ಈ ಕ್ರಮವು ಕಚೇರಿ ಹಾಗೂ ಸರ್ಕಾರಿ ಸೇವಾ ಸಂಸ್ಥೆಗಳಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಹೊಸ ಮಾನದಂಡವನ್ನು ರೂಪಿಸಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆ, ಸರ್ಕಾರದ ಈ ನಿರ್ಧಾರವನ್ನು ಮಹಿಳೆಯರ ಹಿತಾಸಕ್ತಿ ಮತ್ತು ಸಮಾನಾವಕಾಶಕ್ಕಾಗಿ ಪ್ರಮುಖ ಪಟ್ಟು ಎಂದು ಮೌಲ್ಯಮಾಪನ ಮಾಡಿದ್ದಾರೆ

ಮಹಿಳಾ ನೌಕರರ ಋತುಚಕ್ರದ ಸಮಸ್ಯೆಗಳನ್ನು ಗೌರವಿಸುವ ಈ ಹೊಸ ನೀತಿ ರಾಜ್ಯದಲ್ಲಿ ಮಹಿಳೆಯರ ಹಿತದೃಷ್ಟಿ ಮತ್ತು ಅವರ ಕರ್ತವ್ಯ ನಿಷ್ಠೆ ನಡುವಿನ ಸಮತೋಲನವನ್ನು ಸಾಧಿಸುವಲ್ಲಿ ಮಹತ್ವಪೂರ್ಣವಾಗಿದೆ. ಸಂಡೂರು ತಾಲೂಕಿನ ಮಹಿಳಾ ಸಂಘಟನೆಗಳ ಹೃದಯಪೂರ್ವಕ ಅಭಿನಂದನೆ, ಈ ನಿರ್ಧಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾ ಸೌಲಭ್ಯಗಳ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಎಐಟಿಯುಸಿ ಅಧ್ಯಕ್ಷರಾದ ಟಿ. ಕವಿತ,ಉಪಾಧ್ಯಕ್ಷರಾದ ಬಿ.ಮಹಾಲಕ್ಷ್ಮಿ, ಎನ್. ನಾಗರತ್ನ , ಪ್ರಧಾನ ಕಾರ್ಯದರ್ಶಿ ಜಿ. ಈರಮ್ಮ, ಕಾರ್ಯದರ್ಶಿ ಜೆ. ಲಕ್ಷ್ಮಿ, ಹೆಚ್.ಮೀನಾಕ್ಷಿ, ಯಲ್ಲಮ್ಮ, ಖಜಾಂಚಿ ಅನುರಾಧ, ಸಂಘಟನಾ ಕಾರ್ಯದರ್ಶಿ ಎನ್. ಪೂರ್ಣಿಮ, ಕೆ.ಶಾಂತ, ಯು.ಬಸಮ್ಮ,
ಕಾರ್ಯಕಾರಿ ಸಮಿತಿಯ ಸದಸ್ಯರಾದ ಓರಳ್ಳಿ ಚೈತ್ರ, ಪಿ.ಸುನಿತಾ, ಬಿ ಪೂರ್ಣಿಮಾ, ಪಿ. ಪದ್ಮ, ಪಿ.ನೇತ್ರ,ಎಸ್ ಶಿವಲಿಂಗಮ್ಮ, ದೊಡ್ಡ ಬಸಮ್ಮ, ಶಿವರುದ್ರಮ್ಮ, ಡಿ ಎಚ್ ಯಶೋಧ, ಎಂ ಸರಿತಾ, ಬಿ.ಕಲಾವತಿ, ವಿಜಯಲಕ್ಷ್ಮಿ,
ಎಂ.ನಿರ್ಮಲ, ಎನ್. ನೇತ್ರ, ಮಂಜಮ್ಮ,ಉಪಸ್ಥಿತರಿದ್ದರು

ಒಂದು ಸರ್ಕಾರ ನಡೆಸುವ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆ ನಡೆಸುತ್ತಿದೆ ಶಾಸಕ ನೇಮಿರಾಜ್ ನಾಯಕ್

0

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು :ಪಟ್ಟಣದ ಚಾನುಕೋಟಿ ಮಠದ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಧರ್ಮಸ್ಥಳ ಕೇವಲ ಯಾತ್ರಾ ಕ್ಷೇತ್ರವಾಗದೆ ಸರ್ವರನ್ನು ಸಮನಾಗಿ ಕಾಣುವ ಧರ್ಮ ಕ್ಷೇತ್ರವಾಗಿ ಬೆಳೆದು ನಿಂತಿದೆ ಸಹಿಸಲಾಗದ ಕೆಲವು ಕುತಂತ್ರಗಳು ಮಾಡುವ ಷಡ್ಯಂತರಗಳಿಗೆ ಕಿವಿ ಕೊಡದೆ ಸಮಾಜದ ಎಲ್ಲ ಮಹಿಳೆಯರು ಸತ್ಯವನ್ನು ಅರಿತುಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುವುದಕ್ಕೆ ದಾರಿ ದೀಪವಾದ ಶ್ರೀ ಕ್ಷೇತ್ರದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಉಪಯೋಗಗಳನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ ನಾಯ್ಕ ಹೇಳಿದರು.

ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಇಂತಹ ಮಹಿಳಾ ವಿಚಾರಗೋಷ್ಠಿಗಳು ಮಹಿಳಾ ಸಮಾರಂಭಗಳು ನಡೆಯುವುದರಿಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿ ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಮತ್ತು ಸ್ವಾವಲಂಬಿ ಜೀವನ ನಡೆಸಲು ಅನುಕೂಲಕರವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿನ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಮಾತನಾಡಿ ಯೋಚನೆಯ ಸಂಪೂರ್ಣ ವಿವರಗಳನ್ನು ಹಾಗೂ ಯೋಜನೆಯ ಕಾರ್ಯವೈಕರಿಗಳನ್ನ ವಿಶ್ಲೇಷಿಸಿ ಪ್ರಾಸ್ತಾವಿಕ ನುಡಿಗಳ ನಾಡಿದರು.

ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಕೆ ಎಸ್ ವೀಣಾ ವಿವೇಕಾನಂದ ಗೌಡ ದಾವಣಗೆರೆಯ ನಾರಾಯಣ ಹೃದಯಾಲಯದ ಶ್ರೀ ಡೇವಿಡ್ ಹೃದಯ ಸಂಬAಧಿ ಕಾಯಿಲೆಗಳ ಬಗ್ಗೆ ಹಾಗೂ ಅವುಗಳ ಸುರಕ್ಷತೆಯ ಬಗ್ಗೆ ಉಪನ್ಯಾಸ ನೀಡಿದರು ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯರಾದ ಕೊಟ್ಟೂರಿನ ಮಲ್ಲಿಕಾರ್ಜುನ್ ಮಠದ್ ಶ್ರೀಮತಿ ನೇತ್ರಾವತಿ ಮಲ್ಲಿಕಾರ್ಜುನ್ ಎಂ ಉಜ್ಜಯಿನಿ ಇನ್ನಿತರರು ಹಾಜರಿದ್ದರು ಯೋಜನೆಯ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಯುತ ನವೀನ್ ಕುಮಾರ್ ಎಚ್ ಡಿ ಸರ್ವರನ್ನು ಸ್ವಾಗತಿಸಿ ಅಭಿನಂದಿಸಿದರು ಇದೇ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಪುಷ್ಪಗುಚ್ಛ ಸ್ಪರ್ಧೆ ಇನ್ನಿತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು