【ವರದಿ: ಶಿವರಾಜ್ ಕನ್ನಡಿಗ】
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ಪದವಿ ಕಾಲೇಜಿನಲ್ಲಿ ದಿನಾಂಕ 16-04-2026 ರಂದು ಬೆಳಿಗ್ಗೆ 10:30 ಗಂಟೆಗೆ ರೆಡ್ ಕ್ರಾಸ್, ಎನ್.ಸಿ.ಸಿ., ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಶಿಸ್ತಿನೊಂದಿಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸಿ. ಮೋಹನ ರೆಡ್ಡಿ ಉದ್ಘಾಟಿಸಿ, ರಕ್ತದಾನದ ಮಹತ್ವ ಹಾಗೂ ಅದರ ಉಪಯೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ, ಆರೋಗ್ಯ ಸುಧಾರಿಸುತ್ತದೆ ಹಾಗೂ ಅನೇಕ ಜೀವಗಳನ್ನು ಉಳಿಸಲು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಇಂತಹ ಮಾನವೀಯ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಮಾತನಾಡಿ, ರಕ್ತದಾನದ ಕುರಿತು ಸಮಾಜದಲ್ಲಿ ಇರುವ ಮೂಢನಂಬಿಕೆಗಳನ್ನು ದೂರ ಮಾಡುವುದು ಅಗತ್ಯವೆಂದು ಹೇಳಿದರು. ರಕ್ತದಾನವು ಸಂಪೂರ್ಣ ಸುರಕ್ಷಿತವಾಗಿದ್ದು, ಜೀವ ಉಳಿಸುವ ಮಹತ್ತರ ಸೇವೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕಮಶೆಟ್ಟಿ ಕೊಟ್ರೇಶ್ ಅವರು 19ನೇ ಬಾರಿ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದರು. ಜಾತಿ, ಧರ್ಮ, ಮತಭೇದಗಳನ್ನು ಮೀರಿ ಮಾನವೀಯತೆಯನ್ನು ಬೆಳೆಸುವ ಉತ್ತಮ ಕಾರ್ಯವೆಂದು ಅವರು ರಕ್ತದಾನವನ್ನು ಪ್ರೋತ್ಸಾಹಿಸಿದರು. ಮತ್ತೋರ್ವ ಸದಸ್ಯರಾದ ಶ್ರೀ ಪಿ. ಭರಮಣ ಗೌಡ ಪಾಟೀಲ್ ಅವರು ಮೂರನೇ ಬಾರಿ ರಕ್ತದಾನ ಮಾಡಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಶಿಬಿರದಲ್ಲಿ ಶ್ರೀ ಸಿ. ಬಸವರಾಜ್, ಡಾ. ಶಿವಕುಮಾರ್, ಶಿವ ಪ್ರಕಾಶ್, ಡಾ. ವೀರೇಶ್, ಶ್ರೀ ಹೆಚ್. ಮೈಲಾರಗೌಡ, ಶ್ರೀಮತಿ ರಶ್ಮಿ, ಶ್ರೀಮತಿ ವಿಜಯಲಕ್ಷ್ಮಿ, ಕೊಟ್ರೇಶ್ ವಿ., ಕುಮಾರಿ ನಂದಿತಾ, ಕುಮಾರಿ ಗಗನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾಗಿ ಡಾ. ಪೃಥ್ವಿರಾಜ್ ಸಿ. ಬೆಡ್ಜರ್ಗಿ (ರೆಡ್ ಕ್ರಾಸ್), ಶ್ರೀ ಉಮೇಶ್ ಕೆ (ಎನ್ಎಸ್ಎಸ್ ಅಧಿಕಾರಿ), ಶ್ರೀ ಬಸವರಾಜ್ ಬಣಕಾರ್ (ಎನ್ಸಿಸಿ ಅಧಿಕಾರಿ) ಕಾರ್ಯನಿರ್ವಹಿಸಿದರು.
ಈ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
