(ವರದಿ: ಬಸಯ್ಯ ಜಿ.ಎಂ.)
ಕುರುಗೋಡು: ಪಟ್ಟಣದ ಹೊರವಲಯದ ಯಲ್ಲಾಪುರ ಕ್ರಾಸ್ ಬಳಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪ ಗುರುವಾರ ಬೆಳಿಗ್ಗೆ ಸುಮಾರು 5.30ರ ವೇಳೆ ಟಿಟಿ ಮಿನಿ ಬಸ್ ಮತ್ತು ಟ್ರಾಕ್ಟರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಐದು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಕೊಪ್ಪಳ ಜಿಲ್ಲೆಯ ಚಾಳರಿ ಗ್ರಾಮದಿಂದ ಸುಮಾರು ಹದಿನೈದು ಮಂದಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳಿದ್ದವರು ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ಬರುತ್ತಿದ್ದರು. ಈ ವೇಳೆ ರಾಜ್ಯ ಹೆದ್ದಾರಿ 132ರಲ್ಲಿ, ಎಮ್ಮಿಗನೂರು (ಕಂಪ್ಲಿ ರಸ್ತೆ) ದಿಂದ ಸಗಣಿ ಗೊಬ್ಬರವನ್ನು ಹೊತ್ತು ಬರುತ್ತಿದ್ದ ಟ್ರಾಕ್ಟರ್ ಚಾಲಕನ ಅಜಾಗರೂಕತೆಯಿಂದ ಎದುರಿಗೆ ಬರುತ್ತಿದ್ದ ಟಿಟಿ ಮಿನಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಬಸ್‌ನ ಸೀಟುಗಳು ಹಾಗೂ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳದಲ್ಲೇ ರತ್ನಮ್ಮ (70) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಐದು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇತರ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಬಳಿಕ ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದು, ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಕುರಿತು ಪಿಎಸ್ಐ ಸುಪ್ರೀತ್ ವಿರುಪಕ್ಷಪ್ಪ ಮಾಹಿತಿ ನೀಡಿದ್ದಾರೆ.
