(ವರದಿ : ಬಸಯ್ಯ ಜಿಎಂ)
ಕುರುಗೋಡು, ಏಪ್ರಿಲ್ 18: ಯುವಕರು ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಶ್ರೀಧರಗಡ್ಡೆ ಶ್ರೀ ಕೊಟ್ಟೂರುಸ್ವಾಮಿ ಶಾಖಾ ವಿರಕ್ತ ಮಠದ ಪೂಜ್ಯ ಶ್ರೀ ಮರಿಕೊಟ್ಟೂರು ದೇಶಕರು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ವತಿಯಿಂದ ಬಸವ ಜಯಂತಿ ಅಂಗವಾಗಿ ಏಪ್ರಿಲ್ 20ರವರೆಗೆ ಹಮ್ಮಿಕೊಳ್ಳಲಾದ ಪ್ರಥಮ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಶ್ರೇಷ್ಠ ವಿದ್ಯೆಯನ್ನು ಬೆಳೆಸುವುದು ಅತ್ಯಂತ ಮುಖ್ಯ ಎಂದರು.
ಮಕ್ಕಳಲ್ಲಿ ದೇವರು, ಗುರು ಹಾಗೂ ಹಿರಿಯರ ಗೌರವಭಾವನೆ ಮೂಡಿಸುವುದರ ಜೊತೆಗೆ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪುಣ್ಯಕ್ಷೇತ್ರಗಳಲ್ಲಿ ನಡೆಯುವ ಪುರಾಣ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ವಾದಕರಾಗಿ ಮುಂಡರಗಿ ಬಸವರಾಜ, ತಬಲಾ ವಾದಕರಾಗಿ ಎಚ್.ಎಂ. ಶೇಖರಯ್ಯ ಭಾಗವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಚಾನಳ್ ಆನಂದಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಸಿ. ಆಂಜನೇಯಲು, ಸದಸ್ಯರಾದ ಕಗ್ಗಲ್ ಬಸವರಾಜ, ಸಿ. ಪವನಕುಮಾರಿ, ಜಿ. ನಾಗರತ್ನ, ಸಿ. ಪಲ್ಲವಿ, ಕೆ. ಗಿರೀಶ, ಎಸ್. ನಾಡಸಿದ್ದನಗೌಡ ಹಾಗೂ ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
