(ವರದಿ: ಪುಷ್ಪವತಿ ಜಿಎಂ):
ಕುರುಗೋಡು, ಏ.18 ತಾಲೂಕಿನ ಕೋಳೂರು ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಕೆ.ಎಸ್. ವಸಿಗೇರಪ್ಪ ಅವರಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಸುಮಾರು ಮೂರು ದಶಕಗಳಿಗೂ ಅಧಿಕ ಅವಧಿ ಸೇವೆ ಸಲ್ಲಿಸಿರುವುದು ತಮ್ಮ ಜೀವನದಲ್ಲಿ ಅಪಾರ ತೃಪ್ತಿಯನ್ನು ತಂದಿದೆ ಎಂದು ಹೇಳಿದರು. ಸೇವಾ ಅವಧಿಯಲ್ಲಿ ಎಲ್ಲಾ ಸಹೋದ್ಯೋಗಿಗಳು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸಹಕರಿಸಿದ್ದು, ಅದು ತಮ್ಮ ಕಾರ್ಯನಿರ್ವಹಣೆಗೆ ದೊಡ್ಡ ಬೆಂಬಲವಾಗಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಅವರ ಸೇವೆ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಸಹೋದ್ಯೋಗಿಗಳ ಜೊತೆಗೆ ಕೆಲಸ ಮಾಡಿರುವುದು ತಮಗೆ ತುಂಬಾ ತೃಪ್ತಿದಾಯಕವಾಗಿದ್ದು, ಈ ಕ್ಷಣಗಳು ತಮ್ಮ ಜೀವನದ ಮರೆಯಲಾರದ ನೆನಪಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಾದ ಮಂಜುನಾಥ್ ಎಸ್.ಎನ್., ಕೆಂಗೆಗೌಡ, ಗರ್ಜಪ್ಪ, ಎಒ ಅರುಣ್, ಬಸವರಾಜ್, ಸೋಮಶೇಖರ್, ಕುರುಗೋಡು ದೇವರಾಜ್, ಮನೋಹರ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
