HomeDistrictsBallariಕೆ.ಪಿ.ಎಂ.ಇ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಕೆ.ಪಿ.ಎಂ.ಇ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ದಂಡ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಬಳ್ಳಾರಿ,ಏ.29.ವೈದ್ಯಕೀಯ ಪದವಿ ಪಡೆದ ನಂತರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದೇ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ಆರಂಭಿಸುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಮಂಗಳವಾರ ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆಗಳ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಕಡ್ಡಾಯ, ಉಲ್ಲಂಘಿಸಿದರೆ ದಂಡ:
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು 2009ರ ತಿದ್ದುಪಡಿ ನಿಯಮಗಳ ಪ್ರಕಾರ, ಯಾವುದೇ ವೈದ್ಯರು ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಪ್ರಯೋಗಾಲಯಗಳನ್ನು ಆರಂಭಿಸುವ ಮೊದಲು ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಕೆ.ಪಿ.ಎಂ.ಇ ನೋಂದಣಿ ಪ್ರಮಾಣಪತ್ರ ಪಡೆಯಬೇಕು. ನೋಂದಣಿ ಮಾಡಿಕೊಳ್ಳದೆ ಅಥವಾ ನವೀಕರಣ ಮಾಡದೆ ಸಂಸ್ಥೆ ನಡೆಸುತ್ತಿದ್ದರೆ, ಅಂತಹ ಕೇಂದ್ರಗಳಿಗೆ ಪ್ರತಿ ವರ್ಷಕ್ಕೆ 25,000 ರೂ.ಗಳಂತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ ಅವರು, ಕಾಯ್ದೆಯ ಕಲಂ 19, 20, 21 ಹಾಗೂ 22 ರಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ನಕಲಿ ವೈದ್ಯರ ವಿರುದ್ಧ ಎಫ್‌ಐಆರ್:
ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ನಕಲಿ ವೈದ್ಯರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಂತಹವರ ವಿರುದ್ಧ ನೇರವಾಗಿ ಎಫ್.ಐ.ಆರ್ ದಾಖಲಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಟ್ಟಡ ಮಾಲೀಕರಿಗೆ ಸೂಚನೆ:
ತಮ್ಮ ಮನೆ ಅಥವಾ ಮಳಿಗೆಗಳನ್ನು ಆಸ್ಪತ್ರೆ, ಕ್ಲಿನಿಕ್ ಅಥವಾ ಲ್ಯಾಬ್‌ಗಳಿಗೆ ಬಾಡಿಗೆ ನೀಡುವ ಮುನ್ನ ಮಾಲೀಕರು ಎಚ್ಚರಿಕೆ ವಹಿಸಬೇಕು. ಬಾಡಿಗೆದಾರರ ಅಧಿಕೃತ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವೇ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯ ಆರೋಗ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments