Wednesday, June 24, 2026
HomeDistrictsBallariಎಮ್ಮಿಗನೂರಿನಲ್ಲಿ ಮೊಹರಂ ಸಂಭ್ರಮ: ತಾಳ-ತಮಟೆ ಸದ್ದಿಗೆ ಹುಲಿ ವೇಷಧಾರಿಗಳ ಭರ್ಜರಿ ಕುಣಿತ

ಎಮ್ಮಿಗನೂರಿನಲ್ಲಿ ಮೊಹರಂ ಸಂಭ್ರಮ: ತಾಳ-ತಮಟೆ ಸದ್ದಿಗೆ ಹುಲಿ ವೇಷಧಾರಿಗಳ ಭರ್ಜರಿ ಕುಣಿತ

ವರದಿ :ಜಿ ಎಂ ಬಸಯ್ಯ

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಂಭ್ರಮ ದಿನೇದಿನೇ ಕಳೆಗಟ್ಟಿದ್ದು, ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮೊಹರಂ ಹಬ್ಬವನ್ನು ಗ್ರಾಮಸ್ಥರು ಭಕ್ತಿಭಾವದಿಂದ ಹಾಗೂ ವೈಭವದಿಂದ ಆಚರಿಸುತ್ತಿದ್ದಾರೆ.

ಮೊಹರಂ ಹಬ್ಬದ ಅಂಗವಾಗಿ ಕಳೆದ ಮೂರು ದಿನಗಳಿಂದ ಮಸೀದಿಗಳಲ್ಲಿ ಪೀರಲ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಬ್ಬದ ಪ್ರಮುಖ ಘಟ್ಟವಾದ ಕತಲ್ ರಾತ್ರಿ ಕಾರ್ಯಕ್ರಮವನ್ನು ಗುರುವಾರ ರಾತ್ರಿ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗ್ರಾಮದ ಮಸೀದಿಗಳನ್ನು ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಅಲಂಕಾರಗಳಿಂದ ಶೃಂಗಾರಗೊಳಿಸಲಾಗಿದೆ.
ಹಿಂದೂ ಹಾಗೂ ಮುಸ್ಲಿಂ ಬಾಂಧವರು ತಮ್ಮ ಮನೆಗಳನ್ನು ಶುಚಿಗೊಳಿಸಿ ಹಬ್ಬಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕೆಲ ಮಸೀದಿಗಳಲ್ಲಿ ಐದು ಹಾಗೂ ಏಳು ದಿನಗಳ ಸವಾರಿಗಳು ನಡೆಯುತ್ತಿದ್ದು, ಭಕ್ತರು ಮಸೀದಿಗಳಿಗೆ ತೆರಳಿ ಕೆಂಪು ಸಕ್ಕರೆ, ಬೆಲ್ಲದ ಹಾಲು ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಮರ್ಪಿಸಲಿದ್ದಾರೆ. ಇದೇ ಜೂನ್ 26ರಂದು ಸಂಜೆ ಪೀರಲ ದೇವರುಗಳ ದಫನ್ ಕಾರ್ಯಕ್ರಮ ಜರುಗಲಿದೆ.

ಮೊಹರಂ ಹಬ್ಬದ ವಿಶೇಷ ಆಕರ್ಷಣೆಯಾಗಿ ಹರಕೆ ಹೊತ್ತ ಭಕ್ತರು ಮೈಗೆ ಹುಲಿ ಬಣ್ಣ ಬಳಿದು ಹುಲಿ ವೇಷಧಾರಿಗಳಾಗಿ ಕುಣಿಯುವುದು ಕಂಡುಬಂದಿದೆ. ಅಲ್ಲದೇ ಅಚ್ಚಳ್ಳಿ, ಬಿಚ್ಚಳ್ಳಿ ಹಾಗೂ ಫಕ್ಕೀರರ ವೇಷ ತೊಟ್ಟು ಭಕ್ತರು ಸಂಭ್ರಮಿಸಿದ್ದಾರೆ. ತಾಳ, ತಮಟೆ ಹಾಗೂ ಡೊಳ್ಳಿನ ಸದ್ದಿಗೆ ತಕ್ಕಂತೆ ಎಲ್ಲ ವಯೋಮಾನದವರು ಹೆಜ್ಜೆ ಹಾಕಿ ಕುಣಿದ ದೃಶ್ಯಗಳು ಜನರ ಗಮನ ಸೆಳೆದವು.
ಇನ್ನೂ ಕೆಲ ಭಕ್ತರು ಮೈಗೆ ಗಂಧ ಲೇಪಿಸಿಕೊಂಡು ಹರಕೆ ತೀರಿಸುತ್ತಿದ್ದು, ಕತಲ್ ರಾತ್ರಿಯಂದು ಮಸೀದಿ ಮುಂದೆ ಸಿದ್ಧಪಡಿಸಿರುವ ಅಲಾಯಿ ಕುಣಿಯ ಬೆಂಕಿಗೆ ಉಪ್ಪು ಸುರಿದು ತಮ್ಮ ಕಷ್ಟಗಳು ದೂರವಾಗಲೆಂದು ಪ್ರಾರ್ಥಿಸುವ ಸಂಪ್ರದಾಯವೂ ವಿಶೇಷವಾಗಿ ಆಚರಿಸಲಾಗುತ್ತಿದೆ.

ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಮಾರುಕಟ್ಟೆಗಳಲ್ಲಿ ತಮಟೆಗಳ ಮಾರಾಟ ಜೋರಾಗಿದೆ. ಮಸೀದಿಗಳಲ್ಲಿ ಪ್ರತಿಷ್ಠಾಪಿಸಿರುವ ಪೀರಲ ದೇವರುಗಳಿಗೆ ಬೆಳ್ಳಿ ಕುದುರೆ, ಬೆಳ್ಳಿಯ ಏಳು ಹೆಡೆ ನಾಗಪ್ಪ, ಛತ್ರಿ, ಹೊಸ ಬಟ್ಟೆ ಹಾಗೂ ಕೆಂಪು ಸಕ್ಕರೆ ಸಮರ್ಪಿಸುವುದರ ಜೊತೆಗೆ ಹೂವಿನ ಅಲಂಕಾರ ಮಾಡಲಾಗುತ್ತಿದೆ ಎಂದು ಭಕ್ತರು ತಿಳಿಸಿದ್ದಾರೆ.

ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂಕೇತವಾಗಿ ನಡೆಯುತ್ತಿರುವ ಎಮ್ಮಿಗನೂರಿನ ಮೊಹರಂ ಹಬ್ಬವು ಈ ಭಾಗದಲ್ಲಿ ವಿಶಿಷ್ಟ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಾಗಿ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments