ವರದಿ : ಜಿ ಎಂ ಬಸಯ್ಯ
ಕುರುಗೋಡು: ಮೊಹರಂ ಹಬ್ಬದ ಅಂಗವಾಗಿ ಅಲಾಯಿ ಕುಣಿಗೆ ಬೆಂಕಿ ಹಚ್ಚುವ ವೇಳೆ ನಡೆದ ದುರ್ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕುರುಗೋಡು ತಾಲೂಕಿನ ಸಮೀಪದ ಕ್ಯಾದಿಗೆಹಾಳು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೇವರಾಜ್ ಮಾಡಿವಾಳ (28) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಅಲಾಯಿ ಕುಣಿಗೆ ಬೆಂಕಿ ಹಚ್ಚುವ ವೇಳೆ ದೇವರಾಜ್ ಅವರ ಕೈಯಲ್ಲಿ ಡೀಸೆಲ್ ಕ್ಯಾನ್ ಇತ್ತು. ಈ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅವರ ದೇಹದ ಬಹುತೇಕ ಭಾಗ ಸುಟ್ಟು ಗಂಭೀರ ಗಾಯಗಳಾಗಿವೆ.
ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದೇವರಾಜ್ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಿಎಸ್‌ಐ ಸುಪ್ರೀತ್ ವಿರುಪಕ್ಷಪ್ಪ ತಿಳಿಸಿದ್ದಾರೆ.
