ಮೈಸೂರು: ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷಾ ಗೌಡ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಪ್ರಕರಣದ ತನಿಖೆ ವೇಳೆ, ಮೈಸೂರಿನ ಜೂನಿಯರ್ ಟೋಟ್ಸ್ ಪ್ರೀ-ಸ್ಕೂಲ್ ಮಾಲೀಕ ವಿಶ್ವೇಶ್ವರಯ್ಯ ಬಿನ್ ಮುದ್ದಯ್ಯ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ. ವಿಶ್ವೇಶ್ವರಯ್ಯ ಅವರು ಜಿಟಿ ದೇವೇಗೌಡ ಅವರ ಮೊದಲ ಅಳಿಯ ಹಾಗೂ ಶಾಸಕ ಜಿ.ಡಿ. ಹರೀಶ್ ಗೌಡ ಅವರ ಭಾವ ಎಂಬ ಮಾಹಿತಿ ತಿಳಿದುಬಂದಿದೆ.
ವರ್ಷಾ ಗೌಡ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಲಾಗಿದೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ವಿಶ್ವೇಶ್ವರಯ್ಯ ಅವರ ಪಾತ್ರ ಬಹಿರಂಗವಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಡಿ. ಹರೀಶ್ ಗೌಡ, ಸಾಮಾಜಿಕ ಜಾಲತಾಣಗಳನ್ನು ಯಾರನ್ನಾದರೂ ತೇಜೋವಧೆ ಮಾಡಲು ಅಥವಾ ನಿಂದಿಸಲು ಬಳಸಬಾರದು ಎಂದು ಹೇಳಿದರು.
“ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕರ ಹಾಗೂ ಸ್ಪರ್ಧಾತ್ಮಕ ಚರ್ಚೆಗಳು ನಡೆಯುವುದು ತಪ್ಪಲ್ಲ. ಆದರೆ ಯಾರೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಅವಹೇಳನಕಾರಿ ಕಾಮೆಂಟ್ ಮಾಡುವುದು ಸರಿಯಲ್ಲ,” ಎಂದು ಅವರು ಹೇಳಿದರು.
ಈ ಘಟನೆ ಕುಟುಂಬದ ಸದಸ್ಯರಿಂದಲೇ ನಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕಳೆದ ಕೆಲವು ವರ್ಷಗಳಿಂದ ಹರೀಶ್ ಗೌಡ ಮತ್ತು ಅವರ ತಂದೆ ಜಿಟಿ ದೇವೇಗೌಡ ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಕುಟುಂಬದ ಒಳಗಿನ ಬಿರುಕುಗಳ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಈ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಪ್ರಸ್ತುತ ಆರೋಪಿ ವಿಶ್ವೇಶ್ವರಯ್ಯ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
