Tuesday, July 14, 2026
HomeDistrictsBallariತುಂಗಭದ್ರಾ ನದಿಗೆ ನೀರು ಹರಿಸುವಂತೆ ರೈತರ ಪ್ರತಿಭಟನೆ

ತುಂಗಭದ್ರಾ ನದಿಗೆ ನೀರು ಹರಿಸುವಂತೆ ರೈತರ ಪ್ರತಿಭಟನೆ

ವರದಿ : ಜಿ ಎಂ ಬಸಯ್ಯ….
ಕಂಪ್ಲಿ: ತುಂಗಭದ್ರಾ ನದಿ ಸಂಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಅವರ ನೇತೃತ್ವದಲ್ಲಿ ರೈತರು ಹಾಗೂ ಸಾರ್ವಜನಿಕರು ನದಿಯಲ್ಲಿಯೇ ಪ್ರತಿಭಟನೆ ನಡೆಸಿ, ಕುಡಿಯುವ ನೀರಿಗಾಗಿ ತಕ್ಷಣವೇ ತುಂಗಭದ್ರಾ ನದಿಗೆ ನೀರು ಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಗಣಿನಾಡಿನ ಜೀವನಾಡಿಯಾಗಿರುವ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿರುವುದರಿಂದ ಜನರು, ಜಾನುವಾರುಗಳು ಹಾಗೂ ಜಲಪಕ್ಷಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಮಳೆ ತೀವ್ರ ಅಭಾವದಿಂದ ಅಂತರ್ಜಲ ಮಟ್ಟವೂ ಕುಸಿದಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾನವೀಯ ದೃಷ್ಟಿಯಿಂದಾದರೂ ನದಿಗೆ ನೀರು ಹರಿಸಿ ಜನರ ದಾಹ ನೀಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಂಪ್ಲಿ ತಾಲೂಕಿನ ಇಟಗಿ, ಸಣಾಪುರ, ಮಣ್ಣೂರು, ಸೂಗೂರು ಹಾಗೂ ವಿವಿಧ ಕ್ಯಾಂಪ್ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿದ್ದಾರೆ. ಆದರೆ ನದಿ ಸಂಪೂರ್ಣ ಬತ್ತಿರುವುದರಿಂದ ಜನ-ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಿಗೆ ನೀರು ಸಿಗದಿದ್ದರೂ ಪರವಾಗಿಲ್ಲ, ಕನಿಷ್ಠ ಕುಡಿಯಲು ನೀರನ್ನಾದರೂ ಒದಗಿಸಿ ಎಂದು ರೈತರು ಹಾಗೂ ಸಾರ್ವಜನಿಕರು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನದಿಯಲ್ಲಿಯೇ ನಿಂತು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಕ್ಷಣವೇ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ, “ತುಂಗಭದ್ರಾ ಜಲಾಶಯ ರೈತರ ಜೀವನಾಡಿಯಾಗಿದೆ. ಆದರೆ ಕಂಪ್ಲಿ ತಾಲೂಕು ವ್ಯಾಪ್ತಿಯ ಇಟಗಿ ಸಮೀಪದ ತುಂಗಭದ್ರಾ ನದಿ ಸಂಪೂರ್ಣ ಬತ್ತಿದೆ. ಈ ಬಾರಿ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಜನರು, ಜಾನುವಾರುಗಳು ಮತ್ತು ಪರಿಸರದ ಜೀವಸಂಕುಲವನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರ ಕೂಡಲೇ ನದಿಗೆ ನೀರು ಹರಿಸಬೇಕು” ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments