ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್, ಫೋಟೋ ಶೂಟ್, ವಿವಾಹ ಪೂರ್ವ ಭಾವಚಿತ್ರ ಮತ್ತು ದೃಷ್ಯಗಳನ್ನು (ಪ್ರಿವೆಡ್ಡಿಂಗ್ ಶೂಟ್) ಆಯುಧಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕವುದನ್ನು (ಖಾಕಿ ಸ್ವಾಗ್) ಕಟ್ಟುನಿಟ್ಟಾಗಿ ನಿಷೇಧಿಸುವ ಬಗ್ಗೆ ಶ್ರೀ ಮೋಹನ್ ಕುಮಾರ್ ದಾನಪ್ಪ, ಸದಸ್ಯರು, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಇವರಿಗೆ ಪತ್ರವನ್ನು ಬರೆದಿದ್ದಾರೆ



ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ಅಧಿಕಾರಿ ಮತ್ತು ಸಿಬ್ಬಂದಿಯ ವೇಷಭೂಷಣ, ಸಮಯಪಾಲನೆ, ಸಾರ್ವಜನಿಕರೊಂದಿಗೆ ವರ್ತನೆ ಹಾಗೂ ಕರ್ತವ್ಯನಿರ್ವಹಣೆಯಲ್ಲಿ ಪ್ರತಿಫಲಿಸುತ್ತದೆ, ಶಿಸ್ತಿನಿಂದ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಸಾರ್ವಜನಿಕ ಸುರಕ್ಷತೆ ಕಾಪಾಡುವಲ್ಲಿ ಶಿಸ್ತು ವರ್ತನೆ ಪ್ರಮುಖ ಪಾತ್ರವಹಿಸುವುದಲ್ಲದೆ ಯಶಸ್ಸಿನ ಮೂಲವಾಗಿದೆ, ಪೊಲೀಸ್ ಇಲಾಖೆಯು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದೆ. ಈ ಇಲಾಖೆಯ ಘನತೆ ಗೌರವ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುವ ಪ್ರಮುಖ ಅಂಶಗಳಲ್ಲಿ ಸಮವಸ್ತ್ರವು ಒಂದು, ಪೊಲೀಸ್ ಸಮವಸ್ತ್ರವು ಕೇವಲ ಉಡುಪು ಮಾತ್ರವಲ್ಲ ಅದು ಕರ್ತವ್ಯ ನಿಷ್ಠೆ, ಶಿಸ್ತು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದ ಸಂಕೇತವಾಗಿದೆ, ಸಾರ್ವಜನಿಕ ನಂಬಿಕೆಯ ಸಂಕೇತವಾಗಿದೆ, ಪೊಲೀಸ್ ಇಲಾಖೆಯಲ್ಲಿ ಸಮವಸ್ತ್ರ ಶಿಸ್ತಿಗೆ ವಿಶೇಷ ಮಹತ್ವವಿದೆ, ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಯು ಇಲಾಖೆಯಿಂದ ನಿಗದಿಪಡಿಸಲಾದ ಸಮವಸ್ತ್ರವನ್ನು ಸ್ವಚ್ಚವಾಗಿ, ಅಚ್ಚುಕಟ್ಟಾಗಿ ಮತ್ತು ನಿಯಮಾನುಸಾರ ಧರಿಸಬೇಕು, ಸಮವಸ್ತ್ರ ಶಿಸ್ತು ಸಿಬ್ಬಂದಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಪೊಲಿಸ್ ಇಲಾಖೆಯ ಬಗ್ಗೆ ಗೌರವ ಮತ್ತು ನಂಬಿಕೆಯನ್ನು ಮೂಢಿಸುತ್ತದೆ. ಕರ್ತವ್ಯದ ವೇಳೆಯಲ್ಲಿ ಅಚ್ಚುಕಟ್ಟಾದ ಸಮವಸ್ತ್ರ ಧರಿಸಿರುವ ಸಿಬ್ಬಂದಿ ಇಲಾಖೆಯ ಉತ್ತಮ ಪ್ರತಿನಿಧಿಗಳಾಗಿರುತ್ತಾರೆ, ಇದು ಇಲಾಖೆಯ ಘನತೆಯನ್ನು ಹೆಚ್ಚಿಸುವುದಲ್ಲದೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಸಹಕಾರಿಯಾಗಿದ್ದು ಈ ಎಲ್ಲಾ ಗುಣಗಳು ಒಬ್ಬ ಉತ್ತಮ ಪೊಲೀಸ್ ಸಿಬ್ಬಂದಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಆಧುನಿಕ ಯುಗದಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬದಲಾಗುತ್ತಿದ್ದರೂ, ಸಮವಸ್ತ್ರ ಶಿಸ್ತಿನ ಮಹತ್ವ ಮಾತ್ರ ಕಡಿಮೆಯಾಗಿರುವುದಿಲ್ಲಾ ಇಂತಹ ಶಿಸ್ತನ್ನು ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಘನತೆ ಗೌರವವನ್ನು ಕಾಪಾಡಿಕೊಂಡು ಬಂದಿರುತ್ತಾರೆ,
ಆದರೆ ಇತ್ತಿಚ್ಚೆಗೆ ಇಲಾಖೆಯ ಕೆಲವು ಅಧಿಕಾರಿ ಸಿಬ್ಬಂದಿಗಳು ಸಮವಸ್ತ್ರದಲ್ಲಿ ದಿನ ನಿತ್ಯ ರೀಲ್ಸ್ ಮಾಡುವುದು, ಸಮವಸ್ತ್ರದಲ್ಲಿ ವಿವಾಹ ಪೂರ್ವ ಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತಿರುವುದು (ಪ್ರಿವೆಡ್ಡಿಂಗ್ ಶೂಟ್) ಸಮವಸ್ತ್ರದಲ್ಲಿ ಹಾಡು, ನೃತ್ಯ, ನಟನೆ, ಸಾಹಸ, ಕಥೆ, ಕವನ, ಬ್ಲಾಗ್, ಸಂದೇಶ, ನೀತಿ ಪಾಠ, ವಿಚಾರ, ಉಪನ್ಯಾಸ, ಇಲಾಖೆಯ ಸರ್ಕಾರಿ ವಾಹನ, ಆಯುಧಗಳ ಪ್ರದರ್ಶನ ಮಾಡುವಂತಹ ರೀಲ್ಸ್ ಗಳು, ಫೋಟೊಗಳು, ವಿಡಿಯೋಗಳನ್ನು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ಗಳನ್ನು ಮಾಡುತ್ತಿದ್ದು ಇನ್ನು ಕೆಲವು ಹಿರಿಯ (ಜಿಲ್ಲಾ ಮಟ್ಟ ಮತ್ತು ಅದಕ್ಕಿಂತ ಉನ್ನತ ದರ್ಜೆ) ಅಧಿಕಾರಿಗಳು ಸರ್ಕಾರಿ ವಾಹನದಿಂದ ಇಳಿಯುತ್ತಿರುವಂತೆ ಸಾರ್ವಜನಿಕರ ಜೊತೆ ಬೆರೆತಂತೆ, ಬಂದೋಬಸ್ತ್ ಡ್ಯೂಟಿ, ಜಾತ್ರೆ ಮಹೋತ್ಸವ, ಸರ್ಕಾರಿ ಕರ್ತವ್ಯದ ನಿರ್ವಹಣೆ, ಮೇಲ್ವಿಚಾರಣೆ, ವಾರದ ಕವಾಯತ್ತು, ಬಂದೂಕು ತರಬೇತಿ, ಪರಿಶೀಲನೆ, ಸೇರಿದಂತೆ ದಾಖಲಾಗುವ ಘಟನೆ ಪ್ರಕರಣಗಳ ಸ್ಥಳ ವೀಕ್ಷಣೆಯಂತಹ ಕರ್ತವ್ಯಗಳನ್ನು ನಿರ್ವಹಿಸುವಾಗ ನಾನಾ ರೀತಿ ಭಂಗಿಯಲ್ಲಿ ವಿಡೀಯೋ, ಪೋಟೋಗಳನ್ನು ಸೆರೆಹಿಡಿಯುವುದು ಮತ್ತು ಸೆರೆಯಿಡಿಲಿಕ್ಕಾಗಿಯೇ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಇತರೆ ವ್ಯಕ್ತಿಗಳನ್ನು ನೇಮಿಸಿಕೊಂಡು ವಿಡೀಯೋ ಚಿತ್ರಿಕರಿಸಿ ಬಿಜಿಎಂ ಸೌಂಡ್ಸ್ ಗಳನ್ನು(ಹಿನ್ನಲೆ ಧ್ವನಿ) ಸೇರಿಸಿ ತಮಗೆ ಬೇಕಾದಂತೆ ಎಡಿಟ್ ಮಾಡಿಸಿ ತಮ್ಮ ವೈಯಕ್ತಿಕ ಖಾತೆಯಲ್ಲದೆ ತಮ್ಮ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಗಳನ್ನು ಸಹ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸಿ ಚಿತ್ರ ನಟರಂತೆ, ಜನಪ್ರತಿನಿಧಿಗಳಂತೆ ಸಮಾಜದಲ್ಲಿ ವೈಭವಿಸಿಕೊಳ್ಳುತ್ತಿದ್ದು ಇನ್ನೂ ಕೆಲವು ಹಿರಿಯ ಅಧಿಕಾರಿಗಳು ತಾವು ಇನ್ನಷ್ಟು ಖ್ಯಾತಿ ಪಡೆಯಲು ರಾಜ್ಯದಲ್ಲಿ ಅತಿಹೆಚ್ಚು ಖ್ಯಾತಿ ಪಡೆದಿರುವ ಯೂಟೂಬರ್ಸ್ ಸೋಶಿಯಲ್ ಮೀಡಿಯಾ ಸ್ಟಾರ್ಸ್, ಪ್ರಮೋಷನರ್ಸ್ ಗಳನ್ನು ತಮ್ಮ ಕಛೇರಿಗಳಿಗೆ ಆಹ್ವಾನಿಸಿ ಅವರುಗಳಿಗೆ ಗೌರವಿಸುವ ನೆಪದಲ್ಲಿ ಪ್ರಚಾರ ಪಡಿಸಿಕೊಳ್ಳುತ್ತಿರುವ ಘಟನೆಗಳು ಮತ್ತು ಆರೋಪಗಳು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುತ್ತವೆ,
ಪೊಲೀಸ್ ಇಲಾಖೆಯಲ್ಲಿನ ಬಹಳಷ್ಟು ಜನ ಅಧಿಕಾರಿಗಳು, ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದರು ಯಾವುದೇ ವೈಯಕ್ತಿಕವಾಗಲೀ ಸಮವಸ್ತ್ರದಲ್ಲಿರುವ ಪೋಟೊಗಳನ್ನಾಗಲೀ ಹಾಕದೇ ವೃತ್ತಿಯ ಘನತೆ ಎತ್ತಿ ಹಿಡಿದು ಶಿಸ್ತನ್ನು ಕಾಪಾಡಿಕೊಂಡು ಬಂದಿರುತ್ತಾರೆ, ಆದರೆ ಈ ರೀಲ್ಸ್ ಕ್ರೇಜ್ ನಲ್ಲಿ ಇಲಾಖೆಯ ಕೆಲವು ಅಧಿಕಾರಿಗಳು ಸಿಬ್ಬಂದಿಗಳು ಸೋಶಿಯಲ್ ಮೀಡಿಯಾ ವ್ಯಸನಿಗಳಾಗಿ ಕರ್ತವ್ಯದ ಸಮಯದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಫೋಟೊ-ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಜನಪ್ರತಿನಿಧಿಗಳು, ಖ್ಯಾತ ಸಿನಿಮಾ ನಟರನ್ನೆ ಮೀರಿಸುವಷ್ಟು ಅನುಯಾಯಿಗಳನ್ನು ಹೊಂದಿರುತ್ತಾರೆ, ಶಿಸ್ತಿನ ಇಲಾಖೆಯಲ್ಲಿ ಪ್ರಚಾರದ ಗೀಳಿಗಿಳಿದ ಅಧಿಕಾರಿ ಸಿಬ್ಬಂದಿಗಳಿಂದ ಇಲಾಖೆಯ ಘನತೆ ಗೌರವವನ್ನು ಹಾಳು ಮಾಡುತ್ತಿರುವದರಿಂದ ಎಲ್ಲಿಯೂ ತೋರಿಸಿಕೊಳ್ಳದೆ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ದಕ್ಷ, ಪ್ರಾಮಾಣಿಕ ಅಧಿಕಾರಿ, ಸಿಬ್ಬಂದಿಗಳಿಗೆ ಇರಸು ಮುರಸಾಗುತ್ತಿದ್ದು ಇವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿರುತ್ತದೆ, ಸಮವಸ್ತ್ರದಲ್ಲಿನ ಪೋಟೋಗಳನ್ನು ಹಾಕುವುದರಿಂದ ಆ ಪೋಟೋಗಳನ್ನು ವಂಚಕರು ಹೆಚ್ಚಾಗಿ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣಗಳು ರಾಜ್ಯ ಮತ್ತು ದೇಶದಲ್ಲಿ ವರದಿಯಾಗುತ್ತಿರುತ್ತವೆ, ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಮವಸ್ತ್ರದ ಭಾವಚಿತ್ರಗಳನ್ನು ವಂಚಕರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ ಪ್ರಕರಣಗಳು ವರದಿಯಾಗಿರುತ್ತವೆ, (ಪತ್ರಿಕಾ ವರದಿಗಳನ್ನು ಲಗತ್ತಿಸಿದೆ) ಅಧಿಕಾರಿ ಸಿಬ್ಬಂದಿಗಳು ತಾವು ಖ್ಯಾತಿ ಹೊಂದಲು ವೈಯಕ್ತಿಕ ಖಾತೆಗಳ ಮುಖಾಂತರ ವೈಯಕ್ತಿಕ ಪ್ರಚಾರ, ಮನೋರಂಜನೆ ಉದ್ದೇಶಗಳಿಗೆ ಸಮವಸ್ತ್ರವನ್ನು ಬಳಸುತ್ತಿರುವುದು ಭಾರತೀಯ ಪೊಲೀಸ್ ಸೇವೆ (ಸಮವಸ್ತ್ರ) ನಿಯಮಗಳು-1954, ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳು-2021ರ ವಿರುದ್ಧವಾಗಿರುತ್ತವೆ, ಇಲಾಖೆಯ ಸಮವಸ್ತದೊಂದಿಗೆ ಆಯುಧಗಳನ್ನು ಹಿಡಿದು ಪ್ರದರ್ಶನ ಮಾಡುವ ಪೋಸ್ಟ್ ಮಾಡುತ್ತಿರುವುದು ಪೊಲೀಸ್ ನಿಯಮಗಳಿಗೆ ವಿರುದ್ದವಾಗಿದ್ದು ಇಲಾಖೆಯ ಸಕಾರಾತ್ಮಕ ಚಿತ್ರಣವನ್ನು ಬಿಂಬಿಸುವುದಿಲ್ಲವಾದ್ದರಿಂದ ಘನತೆಗೆ ವಿರುದ್ಧವಾಗಿದೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮವಸ್ತ್ರದಲ್ಲಿ ಮಾಡುವ ಚಿತ್ರ, ವಿಡಿಯೋಗಳು ಹೆಚ್ಚಾಗಿ ಅಜಾಗರೂಕರತೆಯಿಂದ ಕೂಡಿದ್ದು ಕಛೇರಿ ಆವರಣಗಳು, ಸರ್ಕಾರಿ ವಾಹನೆಗಳು, ಆಯುಧಗಳು ಉಪಕರಣಗಳು ಮತ್ತು ಕರ್ತವ್ಯಕ್ಕೆ ಸಂಬಂದಿಸಿದ ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ಸರ್ಕಾರಿ ರಹಸ್ಯಗಳ ಅಧಿನಿಯಮ-1923ನ್ನು ಸಂಪೂರ್ಣ ಉಲ್ಲಂಘನೆ ಮಾಡುತ್ತಿರುವುದು ಇಲಾಖೆಯ ಗೌಪ್ಯತೆ ಮತ್ತು ಭದ್ರತೆಯ ಬಗ್ಗೆ ಕಳವಳ ಉಂಟಾಗುತ್ತಿರುತ್ತದೆ. ಈ ಅನಧಿಕೃತ ಚಟುವಟಿಕೆಗಳನ್ನು ಭಾರತೀಯ ಸೇನೆ ತನ್ನ ಎಲ್ಲಾ ಸೇನೆಯ ಅಧಿಕಾರಿ ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣ ಉಪಯೋಗಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿತ್ತಾದರೂ ಇತ್ತಿಚ್ಚೆಗೆ ಸಾಮಾಜಿಕ ಜಾಲತಾಣ ಬಳಸಲು ನಿಯಮ ಸಡಿಲಿಸಿದ್ದು ಯಾವುದೇ ಪೋಸ್ಟ್ ಮತ್ತು ಕಾಮೆಂಟ್‌ಗಳನ್ನು ಮಾಡದೇ ಕೇವಲ ಬ್ರೌಸ್ ಮಾಡಲು ಮಾತ್ರ ಅನುಮತಿ ನೀಡಲಾಗಿದ್ದು ಇಂತಹ ಖಾಕಿ ಸ್ವಾಗ್ ವಿರುದ್ಧ ದೇಶದ ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ತಮಿಳುನಾಡು, ಸಿಕ್ಕಿಂ, ಹಿಮಾಚಲ ಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳು ಗಂಭೀರವಾಗಿ ಪರಿಗಣಿಸಿ ಕಡ್ಡಾಯವಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವುದನ್ನು ಫೋಟೋಗಳನ್ನು ಪೋಸ್ಟ್ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿ ನಿಷೇಧಿಸಿ ಅಂತವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಂಡಿರುತ್ತದೆ, ಬಿಹಾರ್ ರಾಜ್ಯ ಪೊಲೀಸ್ ಇಲಾಖೆಯು ಈ ಖಾಕಿ ಸ್ವಾಗ್ ನ್ನು ನಿಷೇಧಿಸಿದ ನಂತರ ಕೆಲವು ಅಧಿಕಾರಿ ಸಿಬ್ಬಂದಿಗಳು ಆದೇಶವನ್ನು ಉಲ್ಲಂಘಿಸಿ ರೀಲ್ಸ್ ಮಾಡಿದ ಅಧಿಕಾರಿ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಇಲಾಖೆ ವಿಚಾರಣೆ ಕೈಗೊಂಡಿದ್ದಲ್ಲದೆ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳನ್ನು ಗುರುತಿಸಲು ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಪೋಸ್ಟ್‌ಗಳನ್ನು ಮಾಡುವುದು ಕಂಡು ಬಂದಲ್ಲಿ ಶಿಕ್ಷೆ ವಿಧಿಸಲಾಗುವುದಾಗಿ ಎಚ್ಚರಿಕೆ ಸಹ ನೀಡಲಾಗಿರುತ್ತದೆ, ನಮ್ಮ ರಾಜ್ಯದಲ್ಲಿಯು ಸಹ ಈ ಹಿಂದೆ ಈ ಖಾಕಿ ತೋರಣದ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯಿಂದ ದಿನಾಂಕ: 22-07-2024ರಂದು ಸ್ಥಾಯಿ ಆದೇಶವನ್ನು ಹೊರಡಿಸಲಾಗಿರುತ್ತದೆ ಆದಾಗ್ಯೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಆದೇಶವನ್ನು ಗಂಭೀರವಾಗಿ ಪಾಲಿಸದೇ ಖಾಕಿ ಸ್ವಾಗ್ ನ್ನು ಮುಂದುವರೆಸಿರುವುದು ಶಿಸ್ತಿನ ಇಲಾಖೆಗೆ ಅಪಕೀರ್ತಿ ಉಂಟು ಮಾಡುತ್ತಿರುತ್ತದೆ,
ಪ್ರಸ್ತುತ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸಮವಸ್ತ್ರದಲ್ಲಿ ವಿವಾಹ ಪೂರ್ವ ಚಿತ್ರ ಮತ್ತು ದೃಷ್ಯಗಳು (ಶ್ರೀ ವೆಡ್ಡಿಂಗ್ ಶೂಟ್) ಮೂಗುದಾರವಿಲ್ಲದೆ ಹೆಚ್ಚಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದು, ಸಮವಸ್ತ್ರದಲ್ಲಿ ಹಾಡು, ನೃತ್ಯ, ನಟನೆ, ಸಾಹಸ, ಕಥೆ, ಕವನ, ಬ್ಲಾಗ್, ಇಲಾಖೆಯ ಸರ್ಕಾರಿ ವಾಹನ, ಆಯುಧಗಳ ಪ್ರದರ್ಶನ ಮಾಡುವಂತಹ ರೀಲ್ಸ್ಗಳು ಎಗ್ಗಿಲ್ಲದೆ ಪ್ರತಿದಿನ ಕರ್ತವ್ಯವದ ಸಮಯದಲ್ಲಿ ಪೋಸ್ಟ್‌ಗಳನ್ನು ನಿರಂತರವಾಗಿ ಮಾಡುತ್ತಿರುವುದು ಇಲಾಖೆಯ ಘನತೆ ಗೌರವಕ್ಕೆ ಧಕ್ಕೆ ಉಂಟಾಗುತ್ತಿರುತ್ತದಲ್ಲದೆ ತಾವು ಖ್ಯಾತಿ ಹೊಂದಲು ಪೊಲೀಸ್ ಸಮವಸ್ತ್ರವನ್ನು ಫ್ಯಾಷನ್ ವಸ್ತವನ್ನಾಗಿ ಬಳಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿರುತ್ತದೆ,
ಶಿಫಾರಸ್ಸುಗಳು
1.ಎಲ್ಲಾ ದರ್ಜೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರ ಸಾಮಾಜಿಕ ಜಾಲತಾಣ “ಫೇಸ್ ಬುಕ್, ಇನ್ಸಾಗ್ರಾಮ್, ಯೂಟ್ಯೂಬ್ ನಲ್ಲಿನ ವೈಯಕ್ತಿಕ ಖಾತೆಗಳಲ್ಲಿ ಇನ್ಮುಂದೆ ಕಡ್ಡಾಯವಾಗಿ ಸಮವಸ್ತ್ರದಲ್ಲಿರುವ ಯಾವುದೇ ರೀಲ್ಸ್, ವಿಡಿಯೋ, ಪೋಟೋಗಳನ್ನು ಪೋಸ್ಟ್ ಮಾಡದಂತೆ ಹಾಗೂ ವಾಟ್ಸಾಪ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಮವಸ್ತ್ರದಲ್ಲಿನ ಪೋಟೋಗಳನ್ನು ಡಿಪಿ, ಸ್ಟೇಟಸ್‌ಗಳಾಗಿ ಹಾಕದಂತೆ ನಿಷೇಧಿಸುವುದು
2.ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್, ಇನ್ಸಾಗ್ರಾಮ್, ಯೂಟ್ಯೂಬ್ ನಲ್ಲಿ ತೆರೆದಿರುವ ವೈಯಕ್ತಿಕ ಖಾತೆಗಳಲ್ಲಿ ಹಾಗೂ ಫ್ಯಾನ್ಸ್ ಪೇಜ್ ಗಳಲ್ಲಿ ಈಗಾಗಲೇ ಹಾಕಿರುವ ಸಮವಸ್ತ್ರದಲ್ಲಿರುವ ಎಲ್ಲಾ ಭಾವಚಿತ್ರಗಳು, ವಿವಾಹ ಪೂರ್ವ (ಪ್ರೀ ವೆಡ್ಡಿಂಗ್ ಶೂಟ್) ಚಿತ್ರ, ದೃಷ್ಯಗಳು, ವಿಡೀಯೋ,ಪೋಟೋಗಳನ್ನು ಸ್ವಂಪ್ರೇರಿತವಾಗಿ ಕೂಡಲೇ ಅಳಿಸುವುದು ಅಳಿಸಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವುದು,
3.ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಮಾಧ್ಯಮ ಘಟಕವು ರಾಜ್ಯದ ಎಲ್ಲಾ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳ ಮೇಲೆ ನಿಗಾವಹಿಸುವುದು, ಸಮವಸ್ತ್ರದಲ್ಲಿನ ಪೋಟೋ ವಿಡಿಯೋಗಳನ್ನು ಹಾಕಿರುವುದು ಕಂಡು ಬಂದಲ್ಲಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದು.
4.ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗೆ ನೇಮಕವಾಗುವ ಅಧಿಕಾರಿ ಸಿಬ್ಬಂದಿಗಳು ತರಬೇತಿ ಅವಧಿಯಲ್ಲಿ ಸಮವಸ್ತ್ರದಲ್ಲಿ ಸೆರೆಯಿಡಿಯುವ ವಿಡಿಯೋ, ರೀಲ್ಸ್ ಪೋಟೋಗಳನ್ನು ಮತ್ತು ಆಯುಧಗಳ ಪ್ರದರ್ಶನದಂತಹ ಚಿತ್ರಗಳನ್ನು ಸಾಮಾಜಿಕ ಖಾತೆಗಳಲ್ಲಿ ಹರಡದಂತೆ ರಾಜ್ಯದ ಎಲ್ಲಾ ಪೊಲೀಸ್ ಅಕಾಡೆಮಿ ಮತ್ತು ಪೊಲೀಸ್ ತರಬೇತಿ ಕೇಂದ್ರಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡುವುದು ಹಾಗೂ ಬೋದಕರು ತರಬೇತಿಯಲ್ಲಿರುವ ಅಧಿಕಾರಿ ಸಿಬ್ಬಂದಿಗಳಿಗೆ ನಿರಂತರ ಎಚ್ಚರಿಕೆ ನೀಡುವುದು.
5.ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ ಹಾಗೂ ಪೊಲೀಸ್ ಸಮವಸ್ತ್ರದ ಘನತೆ ಕಾಪಾಡುವ ಕುರಿತು ಎಲ್ಲಾ ಸಿಬ್ಬಂದಿಗೆ ಜಾಗೃತಿ ಮೂಢಿಸುವುದು ಮತ್ತು ಎಲ್ಲಾ ಮೇಲ್ವಿಚಾರಣಾಧಿಕಾರಿಗಳು ತಮ್ಮ ಅಧೀನದ ಅಧಿಕಾರಿ ಸಿಬ್ಬಂದಿಗಳ ಅಂತಹ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ನಿಯಮ ಉಲ್ಲಂಘಿಸುವ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಇಲಾಖೆ ವಿಚಾರಣೆಯೊಂದಿಗೆ ಸೂಕ್ತ ಶಿಸ್ತು ಕ್ರಮ ಜರುಗಿಸುವುದು,
6.ಈ ಕುರಿತು ರಾಜ್ಯದ ಎಲ್ಲಾ ಘಟಕದ ಮುಖ್ಯಸ್ಥರು, ಪೊಲೀಸ್ ಆಯುಕ್ತರುಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಸದರಿ ಆದೇಶ/ನಿರ್ದೇಶನವನ್ನು ಇಲಾಖೆಯ ಎಲ್ಲಾ ದರ್ಜೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ವಯ ಎನ್ನುವದನ್ನು ಸ್ಪಷ್ಟವಾಗಿ ಎಚ್ಚರಿಕೆ ನೀಡುವುದು.
ಆದ್ದರಿಂದ ಸದರಿ ವಿಷಯ ಮತ್ತು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ದರ್ಜೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಮಾಜಿಕ ಜಾಲತಾಣ (ಫೇಸ್ ಬುಕ್, ಇನ್ಸಾಗ್ರಾಮ್, ಯೂಟ್ಯೂಬ್ ಸೇರಿದಂತೆ ಇತರೆ ಎಲ್ಲಾ) ದಲ್ಲಿನ ತಮ್ಮ ವೈಯಕ್ತಿಕ ಖಾತೆಗಳಲ್ಲಿ ಪೊಲೀಸ್ ವೃತ್ತಿ, ಕರ್ತವ್ಯಗಳಿಗೆ ಸಂಬಂದಿಸಿದ ಮತ್ತು ಸಂಬಂದಿಸದ ವಿಷಯಗಳ ಕುರಿತು ಪೊಲೀಸ್ ಸಮವಸ್ತ್ರದಲ್ಲಿನ ಯಾವುದೇ ಪೋಟೊ, ರೀಲ್ಸ್, ವಿಡಿಯೋ,ಬ್ಲಾಗ್ ಗಳನ್ನು ಕಡ್ಡಾಯವಾಗಿ ಹಾಕದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಹಾಗೂ ಆದೇಶ ಹೊರಡಿಸುವಲ್ಲಿ ಈ ಮೇಲ್ಕಂಡ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಮತ್ತು ಈ ಕುರಿತು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಕಛೇರಿಗೆ ಮಾಹಿತಿ ನೀಡುವಂತೆ ತಮ್ಮಲ್ಲಿ ಕೋರಿದೆ.
