◆ಅರ್.ಟಿ.ವಿಠ್ಠಲಮೂರ್ತಿ◆
ಕರ್ನಾಟಕದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಸಂಘರ್ಷ ದಿಲ್ಲಿಯ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.ಕಾರಣ?ಇಂತಹ ಸಂಘರ್ಷ ಅಹಿಂದ ಮತ ಬ್ಯಾಂಕನ್ನು ಛಿದ್ರಗೊಳಿಸಬಹುದೇ ಎಂಬ ಅನುಮಾನ.
ಅಂದ ಹಾಗೆ ಕಾಂಗ್ರೆಸ್ ವರಿಷ್ಟರ ಅನುಮಾನಕ್ಕೆ ಪುಷ್ಟಿ ಕೊಡುವ ಕಾರಣಗಳೂ ಇವೆ.ಅದೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಈ ಸ್ಟಿಂಗ್ ಸಂಘರ್ಷದಲ್ಲಿ ಎಳೆ ತಂದಿರುವುದು.
ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು:’ಈ ಸ್ಟಿಂಗ್ ಆಪರೇಷನ್ ಮೂಲಕವೇ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದರಲ್ಲ?ಅವರ ಈ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಲಿಲ್ಲವಾದರೂ ರಾಜ್ಯದ ಪ್ರಬಲ ಕುರುಬ ಮತ ಬ್ಯಾಂಕಿಗೆ ಕುಮಾರಸ್ವಾಮಿ ಅವರ ಸಂದೇಶ ಬಲವಾಗಿಯೇ ತಲುಪಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸಿದ್ಧರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ ಬೆಳವಣಿಗೆಯನ್ನೇ ಕುರುಬ ಮತ ಬ್ಯಾಂಕು ಅಸಹನೆಯಿಂದ ನೋಡಿತ್ತು.ಆದರೆ ಯಾವಾಗ ಇದು ಸ್ಟಿಂಗ್ ಆಪರೇಷನ್ನಿನ ಫಲ ಅಂತ ಕುಮಾರಸ್ವಾಮಿ ಆರೋಪಿಸಿದರೋ?ಆಗ ಕುರುಬ ಮತ ಬ್ಯಾಂಕು ಮತ್ತಷ್ಟು ಅಸಹನೆಯಿಂದ ಕನಲುತ್ತಿದೆ.
ಗಮನಿಸಬೇಕಾದ ಸಂಗತಿ ಎಂದರೆ ಈ ಎಪಿಸೋಡಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮೌನಕ್ಕೆ ಜಾರಿರಬಹುದು ಮತ್ತು ಕಾಂಗ್ರೆಸ್ ವರಿಷ್ಟರ ವಿರುದ್ಧ ಮಾತನಾಡದೆ ಇರಬಹುದು.ಆದರೆ ಅವರ ಸಧ್ಯದ ಸ್ಥಿತಿ ಕುರುಬ ಮತ ಬ್ಯಾಂಕಿನ ಪಲ್ಲಟಕ್ಕೆ ಹದವಾದ ವಾತಾವರಣ ಸೃಷ್ಟಿಸಿದಂತೆ ಕಾಣುತ್ತಿದೆ.
ಅಂದ ಹಾಗೆ ಹೀಗೆ ಪಲ್ಲಟಗೊಳ್ಳುವ ಕುರುಬ ಮತ ಬ್ಯಾಂಕು ಎರಡು ನೆಲೆಗಳಲ್ಲಿ ಚೆದುರಬಹಯದು ಎಂಬುದು ಕಾಂಗ್ರೆಸ್ ವರಿಷ್ಟರ ಆತಂಕ.ಮೊದಲನೆಯದಾಗಿ ಹಳೆ ಮೈಸೂರು ಭಾಗದಲ್ಲಿ ಕುರುಬ ಮತ ಬ್ಯಾಂಕಿನ ಗಣನೀಯ ಶೇರು ಜೆಡಿಎಸ್ ಕಡೆ ವಾಲಬಹುದು ಮತ್ತು ಒಕ್ಕಲಿಗ ಪ್ಲಸ್ ಕುರುಬ ಕಾಂಬಿನೇಷನ್ನು ವರ್ಕ್ ಔಟ್ ಆಗಬಹುದು.ಎರಡನೆಯದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಮತ ಬ್ಯಾಂಕಿನ ಗಣನೀಯ ಶೇರು ಬಿಜೆಪಿ ಕಡೆ ವಾಲಬಹುದು ಮತ್ತು ಲಿಂಗಾಯತ ಪ್ಲಸ್ ಕುರುಬ ಕಾಂಬಿನೇಷನ್ನು ವರ್ಕ್ ಔಟ್ ಆಗಬಹುದು.ಹಾಗೇನಾದರೂ ಆದರೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೊಡೆತ ಗ್ಯಾರಂಟಿ ಎಂಬುದು ಕಾಂಗ್ರೆಸ್ ವರಿಷ್ಟರ ಆತಂಕ.
ದಿಲ್ಲಿ ಮೂಲಗಳ ಪ್ರಕಾರ,ಕಾಂಗ್ರೆಸ್ ವರಿಷ್ಟರ ಅತಂಕಕ್ಕೆ ಪುಷ್ಟಿ ನೀಡುವ ಮತ್ತಷ್ಟು ಕಾರಣಗಳಿವೆ.ಅದರಲ್ಲಿ ಮುಖ್ಯವಾದುದು ವಾಲ್ಮೀಕಿ ಮತ ಬ್ಯಾಂಕು.
ಅದರಲ್ಲೂ ಈಗಾಗಲೇ ನಡೆದ ಬಿ.ನಾಗೇಂದ್ರ ರಾಜೀನಾಮೆ ಎಪಿಸೋಡು ವಾಲ್ಮೀಕಿ ಮತ ಬ್ಯಾಂಕಿನ ಅಸಹನೆಗೆ ಕಾರಣವಾಗಿದ್ದು,ಅದೇ ಕಾಲಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ದುರ್ಬಲಗೊಳಿಸಿರುವ ಯತ್ನವೂ ವಾಲ್ಮೀಕಿ ಮತ ಬ್ಯಾಂಕನ್ನು ಕೆರಳಿಸಿವೆ.
ಇನ್ನು ತುಮಕೂರು,ಚಿತ್ರದುರ್ಗ ಸೇರಿದಂತೆ ಹಳೆ ಮೈಸೂರು ಪಾಕೀಟಿನಲ್ಲಿ ಪ್ರಬಲರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ಮೂಲೆಗುಂಪು ಮಾಡಿದ ಪ್ರಕರಣವೂ ಸೇರಿ ಇಡೀ ವಾಲ್ಮೀಕಿ ಮತ ಬ್ಯಾಂಕು ಅಸಹನೆಯಿಂದ ಕುದಿಯುತ್ತಿದೆ.
ಪರಿಣಾಮ?ಕುರುಬ ಮತ ಬ್ಯಾಂಕಿನ ಜತೆ ವಾಲ್ಮೀಕಿ ಮತ ಬ್ಯಾಂಕಿನ ಅಸಹನೆಯೂ ಸೇರಿದರೆ,ಇದುವರೆಗೂ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿದ್ದ ಅಹಿಂದ ಸೈನ್ಯದ ಬಾವುಟ ಕಳಚಿ ಬೀಳುತ್ತದೆ.ಹಾಗೇನಾದರೂ ಆದರೆ ಮುಂದೇನು?ಎಂಬುದು ಕಾಂಗ್ರೆಸ್ ಪಾಳಯದ ಚಿಂತೆ.
ಗೇಮ್ ಪ್ಲಾನು
ಬದಲಾದರೆ?
ಈ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಚಿಂತೆಯೂ ಶುರುವಾಗಿದೆ.ಅದರ ಈ ಚಿಂತೆಗೆ ಸಧ್ಯಕ್ಕೆ ಪುಷ್ಟಿ ಸಿಗುತ್ತಿಲ್ಲವಾದರೂ ಸನ್ನಿವೇಶದ ಸಾಕ್ಷ್ಯಾಧಾರಗಳು ಅದರ ಅನುಮಾನಕ್ಕೆ ಕಾರಣವಾಗುವೆ.
ಅಂದ ಹಾಗೆ ಅದರ ಚಿಂತೆ ಎಂದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ-ಜೆಡಿಎಸ್ ಮೈತ್ರಿ ಕಡಿದುಕೊಳ್ಳಬಹುದೇ?ಎಂಬುದು.
ಅದರ ಇಂತಹ ಅನುಮಾನಕ್ಕೆ ಪುಷ್ಟಿ ನೀಡುವ ಕೆಲಸ ಮೋದಿ,ಅಮಿತ್ ಶಾ ಅವರಿಂದಾಗಲೀ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಂದಾಗಲೀ ಆಗಿಲ್ಲ.ಇನ್ನು ಮೈತ್ರಿಯ ವಿಷಯದಲ್ಲಿ ರಾಜ್ಯ ಬಿಜೆಪಿಯ ಒಂದು ಬಣ ಅಸಹನೆ ವ್ಯಕ್ತಪಡಿಸುತ್ತಿದೆಯಾದರೂ ಕುಮಾರಸ್ವಾಮಿ ಅವರು ಮಾತ್ರ ಚಕಾರವೆತ್ತುತ್ತಿಲ್ಲ.
ಹಾಗೆ ನೋಡಿದರೆ ಬಿಜೆಪಿ ನಾಯಕರ ಈ ವರ್ತನೆಯ ಬಗ್ಗೆ ಸ್ವಪಕ್ಷದ ನಾಯಕರು ಅಸಹನೆ ವ್ಯಕ್ತಪಡಿಸುತ್ತಲೇ ಇದ್ದಾರಾದರೂ ಕುಮಾರಸ್ವಾಮಿ ಅವರು ಮಾತ್ರ:’ಪ್ರಧಾನಿ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರು ನಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು.ರಾಜ್ಯ ಬಿಜೆಪಿ ನಾಯಕರು ಏನೇ ಅಪಸ್ವರ ಎತ್ತಿದರೂ ನಾವು ಮೈತ್ರಿ ಧರ್ಮಕ್ಕೆ ವಿರುದ್ದವಾಗಿ ಹೋಗಬಾರದು’ಎನ್ನುತ್ತಲೇ ಬಂದಿದ್ದಾರೆ.
ಆದರೆ ಮುಂದಿನ ದಿನಗಳಲ್ಲಿ ಈ ಬಿರುಕು ಹೆಚ್ಚಾದರೆ ಬಿಜೆಪಿ-,ಜೆಡಿಎಸ್ ಗೇಮ್ ಪ್ಲಾನು ಬದಲಾಗಬಹುದು.ಮತ್ತು ಚುನಾವಣಾ ಪೂರ್ವ ಹೊಂದಾಣಿಕೆ ಬೇಡ.ಬದಲಿಗೆ ಚುನಾವಣೆಯಲ್ಲಿ ಇಂಡಿಪೆಂಡೆಂಟ್ ಅಗಿಯೇ ಹೋರಾಡೋಣ ಎಂಬ ಲೆಕ್ಕಾಚಾರಕ್ಕೆ ಬರಬಹುದು.
ಹೀಗೆ ಬಿಜೆಪಿ-,ಜೆಡಿಎಸ್ ಗೇಮ್ ಪ್ಲಾನು ಬದಲಾದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಅಪಾಯ ಎಂಬುದು ಕೈ ನಾಯಕರ ಲೆಕ್ಕಾಚಾರ.
ಯಾಕೆಂದರೆ ಬಿಜೆಪಿ-ಜೆಡಿಎಸ್ ಒಟ್ಟಿಗೆ ಸೇರಿ ಚುನಾವಣೆ ಎದುರಿಸಿದರೆ ಮುಸ್ಲಿಂ ಮತ ಬ್ಯಾಂಕು ಒಡೆಯುವುದಿಲ್ಲ.ಆದರೆ ಎರಡೂ ಪಕ್ಷಗಳು ಸ್ವಂತ ಶಕ್ತಿಯ ಮೇಲೆ ಚುನಾವಣೆಗೆ ಹೋದರೆ ಮುಸ್ಲಿಂ ಮತ ಬ್ಯಾಂಕಿನ ಒಂದಷ್ಟು ಶೇರು ಜೆಡಿಎಸ್ ಗೆ ದಕ್ಕಬಹುದು.
ಹಾಗೇನಾದರೂ ಅದರೆ ಜೆಡಿಎಸ್ ಗೆ ಒಕ್ಕಲಿಗ,ಕುರುಬ ಪ್ಲಸ್ ಮುಸ್ಲಿಂ ಕಾಂಬಿನೇಷನ್ ದಕ್ಕುತ್ತದೆ.ಹಾಗೇನಾದರೂ ಅಗಿ ಬಿಟ್ಟರೇ?ಎಂಬುದು ಕೈ ಪಾಳಯದ ಮತ್ತೊಂದು ಚಿಂತೆ.
ಕುಮಾರಣ್ಣನ
‘ವಾರ್’ ಮೀಟಿಂಗು
ಕಳೆದ ಶುಕ್ರವಾರ ಬೆಂಗಳೂರಿನ ಜೆ.ಪಿ.ಭವನದಲ್ಲಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ‘ಯುದ್ಧಕ್ಕೆ ತಯಾರಾಗಿ’ ಅಂತ ಸೂಚನೆ ಕೊಟ್ಟಿದ್ದಾರೆ.
ಬಿಡದಿ ಟೌನ್ ಶಿಪ್,ನೈಸ್ ವಿವಾದ ಮತ್ತು ಸ್ಟಿಂಗ್ ಆಪರೇಷನ್ನುಗಳ ಬಗ್ಗೆ ಒಂದೇ ಸಮನೆ ಬೆಂಕಿ ಉಗುಳುತ್ತಿರುವ ಕುಮಾರಸ್ವಾಮಿ,ಪಕ್ಷದ ನಾಯಕರಿಗೆ ಇಂತಹ ಕರೆ ಕೊಡಲು ಅವರಿಗೆ ಬಂದ ಫೀಡ್ ಬ್ಯಾಕುಗಳೇ ಕಾರಣ.
‘ಸಾರ್,ನೀವು ಒಂದೇ ಸಮನೆ ಇಂತಹ ಮಹತ್ವದ ಅಸ್ತ್ರಗಳನ್ನು ಹಿಡಿದು ಪ್ರಯೋಗಿಸುತ್ತಿದ್ದೀರಿ.ಆದರೆ ನೀವೊಬ್ಬರೇ ಇದರ ಬಗ್ಗೆ ಮಾತನಾಡುತ್ತಿದ್ದರೆ ನಿಮ್ಮ ಪಕ್ಷದವರೇನು ಮಾಡುತ್ತಿದ್ದಾರೆ?
ಇವತ್ತು ಜೆಡಿಎಸ್ ನಲ್ಲೂ ಶಾಸಕರು,ಸಂಸದರು,ಮಾಜಿ ಸಚಿವರ ಪಡೆ ಇದೆ.ನಾಳೆ ಇವರು ಕೂಡಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ,ಜಿಲ್ಲೆಗಳಲ್ಲಿ ಈ ವಿಷಯಗಳನ್ನಿಟ್ಟುಕೊಂಡು ಬೀದಿ ಹೋರಾಟಕ್ಕಿಳಿಯಲಿ.
ಇವತ್ತು ನೀವು ಇಷ್ಟೆಲ್ಲ ವಿಷಯಗಳನ್ನಿಟ್ಟುಕೊಂಡು ಹೋರಾಡುತ್ತಿದ್ದರೆ ಮಿತ್ರ ಪಕ್ಷದ ನಾಯಕರು ನಿಮ್ಮ ಭುಜಕ್ಕೆ ಭುಜ ಕೊಟ್ಟು ನಿಲ್ಲುತ್ತಿಲ್ಲ.ಹೀಗಿರುವಾಗ ನಿಮ್ಮ ಪಕ್ಷದವರಾದರೂ ಬೀದಿಗಿಳಿಯಲಿ.ಬೀದರ್ ಟು ಚಾಮರಾಜನಗರದವರೆಗೆ ಹೋರಾಟ ಶುರುವಾದರೆ ರಾಜ್ಯದ ಜನರಿಗೆ ಒಂದು ಮೆಸೇಜು ಹೋಗುತ್ತದೆ.ಅಷ್ಟೇ ಅಲ್ಲ,ಬಿಜೆಪಿ ವರಿಷ್ಟರಿಗೂ ಒಂದು ಮೆಸೇಜು ಹೋಗುತ್ತದೆ ಅಂತ ಈ ಆಪ್ತರು ಕೊಟ್ಟ ಫೀಡ್ ಬ್ಯಾಕು ಕುಮಾರಸ್ವಾಮಿಯವರ ಮನಸ್ಸನ್ನು ತಟ್ಟಿದೆ.ಮತ್ತದರ ಪಲವಾಗಿ ಪಕ್ಷದ ಕಛೇರಿಯಲ್ಲಿ ನಡೆದ ಮೀಟಿಂಗಿನಲ್ಲಿ ಬಿ ರೆಡಿ ಟು ವಾರ್ ಅಂತ ಹೇಳುವಂತೆ ಮಾಡಿವೆ.
ಹೀಗೆ ಯಾವಾಗ ಅವರು ಕರೆ ಕೊಟ್ಟರೋ?ಇದಾದ ನಂತರ ಜೆಡಿಎಸ್ ಪಾಳಯದಲ್ಲಿ ಹೊಸ ಉಮೇದು ಶುರುವಾಗಿದ್ದು ಪೋಲೀಸ್ ಮಹಾ ನಿರ್ದೇಶಕರಿಗೆ ಕಂಪ್ಲೇಂಟು ಕೊಡಲು ಹೋದ ಸಂದರ್ಭದಲ್ಲಿ ಈ ಉಮೇದು ಭರ್ಜರಿಯಾಗಿಯೇ ಕಾಣಿಸಿದೆ.
ಬಿಜೆಪಿಯಲ್ಲಿ ಅಚ್ಚರಿಯ
ವಿದ್ಯಮಾನ
ಇನ್ನು ರಾಜ್ಯ ಬಿಜೆಪಿಯಲ್ಲಿ ನಡೆದ ಒಂದು ವಿದ್ಯಮಾನ ಹಲವರ ಅಚ್ಚರಿಗೆ ಕಾರಣವಾಗಿತ್ತು.
ಅದೆಂದರೆ ಪಕ್ಷದ ಉಸ್ತುವಾರಿಯಾಗಿ ಹರೀಶ್ ಚಂದ್ರ ದ್ವಿವೇದಿ ಮತ್ತು ಸಹ ಉಸ್ತುವಾರಿಯನ್ನಾಗಿ ಕಾಸಂ ವೆಂಕಟೇಶ್ವರಲು ಅವರನ್ನು ನೇಮಕ ಮಾಡಲಾಗಿದ್ದೇ ಈ ವಿದ್ಯಮಾನ.
ಅಂದ ಹಾಗೆ ಅಚ್ಚರಿ ಏಕೆಂದರೆ ಈ ಇಬ್ಬರೂ ತುಂಬ ಅನುಭವಿಗಳಲ್ಲ.ಕರ್ನಾಟಕದ ರಾಜಕಾರಣದ ಬಗ್ಗೆ ಆಳವಾಗಿ ಅರಿತವರೂ ಅಲ್ಲ.ಈ ಹಿಂದಿದ್ದ ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ರಾಜ್ಯ ಬಿಜೆಪಿಯ ಒಳಸುಳಿಗಳು ಚೆನ್ನಾಗಿಯೇ ಗೊತ್ತಿದ್ದವು.2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಸಾಧಿತವಾಗಿತ್ತಲ್ಲ?ಈ ಮೈತ್ರಿಗೆ ಧಕ್ಕೆ ತರಲು ಸ್ವಪಕ್ಷದ ಯಾವ ನಾಯಕರು ಯತ್ನಿಸುತ್ತಿದ್ದಾರೆ?ಇದಕ್ಕಾಗಿ ಎಲ್ಲೆಲ್ಲಿ ಗುನ್ನ ಹಾಕುತ್ತಿದ್ದಾರೆ?ಎಂಬುದನ್ನು ಬಹುಬೇಗ ಪತ್ತೆ ಹಚ್ಚುತ್ತಿದ್ದ ಅಗರ್ವಾಲ್ ತಕ್ಷಣ ಪ್ರತಿಯೇಟು ನೀಡಿ ಅಂತವರನ್ನು ತಣ್ಣಗಾಗಿಸುತ್ತಿದ್ದರು.ಆ ಮೂಲಕ ಅಗರ್ವಾಲ್ ರಾಜ್ಯದಲ್ಲಿ ಬಿಜೆಪಿಯ ಬಲವರ್ಧನೆಗೆ ಮಾರ್ಗೋಪಾಯ ಹುಡುಕಬಲ್ಲರು ಎಂಬ ನಂಬಿಕೆ ಬಂದಿತ್ತು.
ಅದರೆ ಯಾವಾಗ ಲೋಕಸಭಾ ಚುನಾವಣೆ ಮುಗಿಯಿತೋ?ಇದಾದ ನಂತರ ಅಗರ್ವಾಲ್ ಅವರ ಚಹರೆ ಪಟ್ಟಿಯೇ ಬದಲಾಗಿ ಹೋಯಿತು.ಅರ್ಥಾತ್,ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬಣ ಸಂಘರ್ಷಕ್ಕೆ ಮದ್ದು ಹುಡುಕುವ ಬದಲು ಅವರೇ ಒಂದು ಬಣದ ಪರವಾಗಿ ನಿಂತು ಬಿಟ್ಟರು
ರಿಣಮ?ರಾಜ್ಯ ಬಿಜೆಪಿಯ ಹಲವರು ವರಿಷ್ಟರಿಗೆ ಸಂದೇಶಗಳನ್ನು ಕಳಿಸುತ್ತಾ:’ರಾಧಾ ಮೋಹನದಾಸ್ ಅಗರ್ವಾಲ್ ಅವರನ್ನು ಬದಲಿಸಿ,ತಟಸ್ಥರಾಗಿ ಎಲ್ಲವನ್ನೂ ಗಮನಿಸುವವರನ್ನು ಉಸ್ತುವಾರಿಯನ್ನಾಗಿ ನೇಮಿಸಿ’ಅಂತ ಒತ್ತಡ ಹೇರತೊಡಗಿದರು.
ಇಂತಹ ಒತ್ತಡಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಉಸ್ತುವಾರಿಯಾಗಿ ಬಂದವರು ಉತ್ತರ ಪ್ರದೇಶದ ಹರೀಶ್ ಚಂದ್ರ ದ್ವಿವೇದಿ.ಇದೇ ರೀತಿ ಸಹ ಉಸ್ತುವಾರಿಯಾಗಿ ಬಂದವರು ಕಾಸಂ ವೆಂಕಟೇಸ್ವರಲು.
ಹಾಗೆ ನೋಡಿದರೆ ನೇಮಕವಾದ ದಿನದಿಂದ ಈ ಇಬ್ಬರು ನಾಯಕರು ವಿಶೇಷವಾಗಿ ಗಮನ ಸೆಳೆದಿಲ್ಲ.ಆದರೆ ಆಳಕ್ಕಿಳಿದು ನೋಡಿದರೆ ಈ ಇಬ್ಬರ ನೇಮಕದ ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಒತ್ತಾಸೆ ಇದೆ.
ಮೂಲಗಳ ಪ್ರಕಾರ:’ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಸಂಘರ್ಷಕ್ಕೆ ಮದ್ದು ಹುಡುಕುವವರು ವರಿಷ್ಟರಿಗೆ ಬೇಕಾಗಿಲ್ಲ.ಬದಲಿಗೆ ವಸ್ತುಸ್ಥಿತಿಯ ವಿವರ ಕೊಡುವವರು ಬೇಕು.
ಅನುಭವಿಗಳಾದರೆ ತಮ್ಮ ದೃಷ್ಟಿಕೋನವನ್ನು ಮುಖ್ಯವಾಗಿಸಿ ವರದಿ ನೀಡುತ್ತಾರೆ.ಅರ್ಥಾತ್,ಅಲ್ಲಿ ಪೂರ್ವಾಗ್ರಹವಿರುತ್ತದೆ.ಆದರೆ ತುಂಬ ಅನುಭವಿಗಳಲ್ಲವಾದರೆ ನೇರಾನೇರವಾಗಿ ವರದಿ ನೀಡುತ್ತಾರೆ ಎಂಬುದು ನಿತಿನ್ ನಬಿನ್ ಲೆಕ್ಕಾಚಾರ.
ಇದೇ ಮೂಲಗಳ ಪ್ರಕಾರ,ಹರೀಶ್ ಚಂದ್ರ ದ್ವಿವೇದಿ ಮತ್ತು ಕಾಸಂ ವೆಂಕಟೇಶ್ವರಲು ಅಬ್ಬರ ಮಾಡುತ್ತಿಲ್ಲವಾದರೂ ಆಳದಲ್ಲಿ ರಾಜ್ಯ ಬಿಜೆಪಿಯ ಪ್ರಮುಖರನ್ನು ಸಂಪರ್ಕಿಸಿ ಅವರ ಬಳಿ ವಸ್ತುಸ್ಥಿತಿಯ ವಿವರ ಪಡೆಯುತ್ತಿದ್ದಾರೆ.
ಹೀಗೆ ಅವರು ಪಡೆಯುತ್ತಿರುವ ವಿವರ ಸಧ್ಯದಲ್ಲೇ ಬಿಜೆಪಿ ವರಿಷ್ಟರಿಗೆ ತಲುಪಲಿದ್ದು ಅದರ ಆಧಾರದ ಮೇಲೆ ರಾಜ್ಯಾಧ್ಯಕ್ಷರ ವಿಷಯ ಸೆಟ್ಲ್ ಆಗಲಿದೆ.
ಅಂದರೆ,ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪುನ: ಅಧ್ಯಕ್ಷರಾಗಿ ಮುಂದುವರಿಯುತ್ತಾರೋ?ಅಥವಾ ಅವರ ಜಾಗಕ್ಕೆ ಬೇರೊಬ್ಬರು ಬರುತ್ತಾರೋ?ಎಂಬುದು ನಿರ್ಧಾರವಾಗಲಿದೆ.
ಲಾಸ್ಟ್ ಸಿಪ್
ಇನ್ನು ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಒಂದು ಬೆಳವಣಿಗೆ ಹಲವರ ಅಚ್ಚರಿಗೆ ಕಾರಣವಾಗಿದೆ.ಅದೆಂದರೆ ದಲಿತ ನಾಯಕ,ಕಂದಾಯ ಸಚಿವ ಜಿ.ಪರಮೇಶ್ವರ್ ಅವರ ಬಗ್ಗೆ ದಿಲ್ಲಿಯ ಕಾಂಗ್ರೆಸ್ ನಾಯಕರು ತೋರಿಸುತ್ತಿರುವ ಕಕ್ಕುಲತೆ.
ಅದು ಕೆ.ಸಿ.ವೇಣುಗೋಪಾಲ್ ಇರಬಹುದು,ರಣದೀಪ್ ಸಿಂಗ್ ಸುರ್ಜೇವಾಲಾ ಅವರಿರಬಹುದು.ಮತ್ತಿನ್ಯಾರೇ ಇರಬಹುದು.ಒಟ್ಟಿನಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳೇನೇ ಇದ್ದರೂ ಆ ಬಗ್ಗೆ ಪರಮೇಶ್ವರ್ ಅವರ ಜತೆ ಚರ್ಚಿಸುವ ಸಂಪ್ರದಾಯ ಶುರುವಾಗಿದೆ.
ಈ ಸಂಪ್ರದಾಯದ ಹಿಂದೆ ಯಾವ ಲೆಕ್ಕಾಚಾರವಿದೆಯೋ ಗೊತ್ತಿಲ್ಲ.ಆದರೆ ಕಳೆದ ಕೆಲ ದಿನಗಳಿಂದ ಪರಮೇಶ್ವರ್ ಅವರಿಗೆ ಸಿಗುತ್ತಿರುವ ಪ್ರಾಮಿನೆನ್ಸು ಹಲವರ ಅಚ್ಚರಿಗೆ ಕಾರಣವಾಗಿರುವುದಂತೂ ನಿಜ.
ಅರ್.ಟಿ.ವಿಠ್ಠಲಮೂರ್ತಿ
