ಮೊಳಕಾಲ್ಮುರು, ಜು. 15: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಕೆ.ಓ. ನಂದೀಶ್ ನಾಯಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾನಗಲ್ ಪ್ರವಾಸಿ ಮಂದಿರದಲ್ಲಿ ಜುಲೈ 15ರಂದು ನಡೆದ ಸಭೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ. ಶಿವಪೂಜೆ ಅವರ ಸೂಚನೆ ಮೇರೆಗೆ ರಾಜ್ಯ ಕಾರ್ಯದರ್ಶಿ ಗೋಪಾಲ್ ಅವರ ನೇತೃತ್ವದಲ್ಲಿ ಹಾಗೂ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಮೋಹನ್ ಅವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ವೇಳೆ ತಾಲೂಕು ಅಧ್ಯಕ್ಷರಾಗಿ ಕೆ.ಓ. ನಂದೀಶ್ ನಾಯಕ, ಉಪಾಧ್ಯಕ್ಷೆಯಾಗಿ ಅನ್ನಪೂರ್ಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಿರುಮಲೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಗೋಪಾಲ್, ಪತ್ರಕರ್ತರು ಹಲವಾರು ಸಂಕಷ್ಟಗಳ ನಡುವೆಯೂ ಸಮಾಜಮುಖಿ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಸಂಘದ ಪದಾಧಿಕಾರಿಗಳು ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸರ್ಕಾರ ಪತ್ರಕರ್ತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪ್ರತಿಯೊಬ್ಬ ಪತ್ರಕರ್ತರಿಗೂ ತಲುಪಿಸುವ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್, ಜಿಲ್ಲಾ ಅಧ್ಯಕ್ಷ ಮೋಹನ್, ನಿಕಟಪೂರ್ವ ತಾಲೂಕು ಅಧ್ಯಕ್ಷ ಚಂದ್ರಪ್ರಕಾಶ್, ಉಪಾಧ್ಯಕ್ಷೆ ಅನ್ನಪೂರ್ಣ, ಸದಸ್ಯರಾದ ಹನುಮೇಶ್, ಗೋವಿಂದ, ಮುಕ್ಕಣ್ಣ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.
