[ವರದಿ : ಜಿ ಎಂ ಬಸಯ್ಯ]
ಕುರುಗೋಡು, ಆ.25: ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ಹಾಗೂ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಮಂಗಳವಾರ ಕುಡಿತಿನಿ ಪಟ್ಟಣಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಹೈದರಾಬಾದ್ನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು, ಬಳ್ಳಾರಿ ಜಿಲ್ಲೆಗೆ ತೆರಳುವ ಮಾರ್ಗಮಧ್ಯೆ ಕುಡಿತಿನಿ ಪಟ್ಟಣಕ್ಕೆ ಭೇಟಿ ನೀಡಿದರು.
ಈ ವೇಳೆ ಕುಡಿತಿನಿ ಕಮ್ಮಂ ಸಂಘದ ವತಿಯಿಂದ ನಾರಾ ಲೋಕೇಶ್ ಅವರಿಗೆ ಅದ್ದೂರಿ ಸ್ವಾಗತ ನೀಡಿ ಗೌರವಿಸಲಾಯಿತು.
ಕರ್ನಾಟಕ–ಆಂಧ್ರ ಅಭಿವೃದ್ಧಿಗೆ ಒಗ್ಗಟ್ಟಿನ ಸಂಕಲ್ಪ:
ಸಂದರ್ಭದಲ್ಲಿ ಮಾತನಾಡಿದ ನಾರಾ ಲೋಕೇಶ್, ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಜನರು ಹಿಂದಿನಿಂದಲೂ ಸಹೋದರರಂತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಸಂಬಂಧ ಇತ್ತೀಚಿನದಲ್ಲ, ರಾಜ್ಯಗಳ ಉದಯದ ಕಾಲದಿಂದಲೂ ಮುಂದುವರಿದಿದೆ ಎಂದು ಹೇಳಿದರು.
ಚಂದ್ರಬಾಬು ನಾಯ್ಡು ಹಾಗೂ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪರಸ್ಪರ ಪೈಪೋಟಿಯಿಂದ ಕೆಲಸ ಮಾಡುವ ಮೂಲಕ ಹೈದರಾಬಾದ್ ಹಾಗೂ ಬೆಂಗಳೂರಿನಂತಹ ರಾಷ್ಟ್ರದ ಪ್ರಮುಖ ನಗರಗಳ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ. ಇದೇ ಪ್ರೀತಿ, ವಿಶ್ವಾಸ ಹಾಗೂ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇಡೀ ದಕ್ಷಿಣ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ನಾರಾ ಲೋಕೇಶ್ ಹೇಳಿದರು.
ಬಳ್ಳಾರಿ ಜಿಲ್ಲೆಯೊಂದಿಗೆ ನಮ್ಮ ಕುಟುಂಬದ ಅವಿನಾಭಾವ ಸಂಬಂಧ:
ಬಳ್ಳಾರಿ ಜಿಲ್ಲೆ ಹಾಗೂ ತಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನರು ತಮ್ಮ ಕುಟುಂಬದ ಮೇಲೆ ತೋರಿಸುತ್ತಿರುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಮ್ಮ ಕುಟುಂಬ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಜನರು ಧೈರ್ಯ ತುಂಬಿ ಬೆಂಬಲವಾಗಿ ನಿಂತಿದ್ದರು. ಮುಂದಿನ ದಿನಗಳಲ್ಲಿ ತಮ್ಮಿಂದ ಯಾವುದೇ ಸಹಾಯ ಬೇಕಾದರೂ ಕೇಳಬಹುದು, ಸದಾ ಜೊತೆಯಾಗಿ ನಿಲ್ಲುವುದಾಗಿ ನಾರಾ ಲೋಕೇಶ್ ಭರವಸೆ ನೀಡಿದರು.
ಕುಡಿತಿನಿ ಪಟ್ಟಣದ ಕಮ್ಮಂ ಸಂಘದ ವತಿಯಿಂದ ತೋರಿದ ಪ್ರೀತಿ ಮತ್ತು ಆತ್ಮೀಯತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಕುಡಿತಿನಿಗೆ ಭೇಟಿ ನೀಡಿರುವುದು ತುಂಬಾ ಸಂತಸ ತಂದಿದೆ ಎಂದು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಅನಂತಪುರಂ ಸಂಸದರು, ವಿವಿಧ ರಾಜಕೀಯ ನಾಯಕರು ಹಾಗೂ ಟಿಡಿಪಿ ಮುಖಂಡರು, ಕುಡಿತಿನಿ ಪಟ್ಟಣದ ಕಮ್ಮಂ ಸಂಘದ ಅಧ್ಯಕ್ಷ ವಿ. ರಾಮು, ಉಪಾಧ್ಯಕ್ಷ ಸೂರ ವೆಂಕಟರಮಣಪ್ಪ, ಪಟ್ಟಣದ ಮುಖಂಡರಾದ ವಿ. ರಾಜಶೇಖರ, ವೆಂಕಟರಾಣ ಬಾಬು ಸೇರಿದಂತೆ ಕಮ್ಮಂ ಸಂಘದ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
