ಸಂಡೂರು:ಸೆ:04: ಭ್ರಷ್ಟಾಚಾರ ಹಾಗೂ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ “ಬಳ್ಳಾರಿ ಚಲೋ” ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಡೂರು ಮಂಡಲ ಬಿಜೆಪಿ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಸಂಡೂರಿನಲ್ಲಿ ನಡೆದ ಸಭೆಯಲ್ಲಿ ಪಾದಯಾತ್ರೆಯ ಸಿದ್ಧತೆ, ಸಂಘಟನಾತ್ಮಕ ಕಾರ್ಯಯೋಜನೆ, ನೀಲನಕ್ಷೆ, ಮಾರ್ಗಮಧ್ಯೆ ಎದುರಾಗಬಹುದಾದ ಕುಂದು-ಕೊರತೆಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಭಾಗವಹಿಸುವಂತೆ ಮಾಡುವ ಕುರಿತು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಗರಣಗಳ ಆರೋಪಗಳಿಂದ ತುಂಬಿರುವ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಟೀಕಿಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ಪಡೆದು ಲೋಕಸಭಾ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, “ತುಕಾರಾಂ ನೀನು ಗೆದ್ದಿದ್ದು ವಾಲ್ಮೀಕಿ ಜನರ ದುಡ್ಡಿನಿಂದ, ನಿಮ್ಮ ಅಪ್ಪನ ದುಡ್ಡಿನಿಂದಲ್ಲ” ಎಂದು ಕಿಡಿಕಾರಿದರು.
ನಾಗೇಂದ್ರ ಅವರ ಸಚಿವ ಸ್ಥಾನ ಹಾಗೂ ರಾಜೀನಾಮೆಯನ್ನು ಬಿಜೆಪಿ ಕಿತ್ತುಕೊಂಡಿಲ್ಲ. ಕಾಂಗ್ರೆಸ್ ಪಕ್ಷವೇ ಅವರ ರಾಜೀನಾಮೆಯನ್ನು ಪಡೆದಿದೆ ಎಂದು ಹೇಳಿದ ಬಂಗಾರು ಹನುಮಂತ, ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನೂ ಪ್ರಸ್ತಾಪಿಸಿದರು. ಈ ಕುರಿತು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
“ಭಾರತೀಯ ಜನತಾ ಪಕ್ಷ ದಲಿತ ವಿರೋಧಿಯಲ್ಲ. ನಾಗೇಂದ್ರ ಅವರಂತಹ ದಲಿತ ನಾಯಕರನ್ನು ಗೆಲ್ಲಿಸುವಲ್ಲಿಯೂ ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ. ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷವು ದಲಿತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
ಶ್ರೀರಾಮುಲು ಸೋಲಿಸಲು ಹಗರಣದ ಹಣ ಬಳಕೆ ಆರೋಪ:
ನಂತರ ಮಾತನಾಡಿದ ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ಬಳಕೆಯ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ₹187 ಕೋಟಿ ಹಣವನ್ನು ಬಳಸಿಕೊಂಡು ಅದೇ ಸಮುದಾಯದ ಧೀಮಂತ ನಾಯಕ ಬಿ. ಶ್ರೀರಾಮುಲು ಅವರನ್ನು ಸೋಲಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.
ತಾವು ಯಡಿಯೂರಪ್ಪ ಸರ್ಕಾರದಲ್ಲಿ ಮೂಲಭೂತಸೌಕರ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗ, ಬಳ್ಳಾರಿ ಸೇರಿದಂತೆ ಹಲವು ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ತಿಳಿಸಿದ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಜನಪರ ಕಾರ್ಯಗಳನ್ನು ಉಲ್ಲೇಖಿಸಿದರು.
“ಶ್ರೀರಾಮುಲು ಅವರು ಇಲ್ಲಿಯವರೆಗೆ ಒಂದಾದರೂ ಸಣ್ಣ ತಪ್ಪು ಮಾಡಿದ್ದಾರೆ ಎಂದು ತೋರಿಸಿ” ಎಂದು ಸವಾಲು ಹಾಕಿದ ಅವರು, ರಾಜ್ಯದ ವಿವಿಧ ಭಾಗಗಳ ಜನರಿಗೆ ಅನುಕೂಲವಾಗುವಂತೆ 510 ಆಂಬುಲೆನ್ಸ್ಗಳ ವ್ಯವಸ್ಥೆ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಶ್ರೀರಾಮುಲು ಮಾಡಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನಾಗೇಂದ್ರ ಅವರ ಮುಂಬೈನಲ್ಲಿರುವ ಆಪ್ತರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
“ಜಿಲ್ಲೆಯ ಶಾಸಕರು ರಾಜೀನಾಮೆ ನೀಡಲಿ”:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣದ ವಿಚಾರದಲ್ಲಿ ರಾಜಕೀಯವಾಗಿ ಲಾಭ ಪಡೆದಿದ್ದಾರೆಂದು ಆರೋಪಿಸಿದ ಜನಾರ್ದನ ರೆಡ್ಡಿ, ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಜನರ ಮುಂದೆ ಹೋಗಲಿ ಎಂದು ಸವಾಲು ಹಾಕಿದರು.
ತುಕಾರಾಂ ಅವರು ತಮ್ಮ ವಿರುದ್ಧ ಆರೋಪಗಳು ಕೇಳಿಬಂದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದರೆ, ಅವರನ್ನು ಸಮರ್ಥಿಸಿಕೊಳ್ಳಬಹುದಿತ್ತು ಎಂದು ಹೇಳಿದ ಅವರು, ರಾಜಕೀಯದಲ್ಲಿ ಸ್ವಾಭಿಮಾನ ಮತ್ತು ಹೊಣೆಗಾರಿಕೆ ಮುಖ್ಯ ಎಂದರು.
ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಿದ್ದೇ ಅದಲ್ಲಿ, ನಾಗೇಂದ್ರ ಅವರ ರಾಜೀನಾಮೆಗಾಗಿ ವಿಧಾನಸಭಾ ಒಳಗೆ ಮತ್ತು ಹೊರಗೆ ಬಿಜೆಪಿ ನಡೆಸಿದ ಹೋರಾಟಕ್ಕಿಂತ ಹತ್ತು ಪಟ್ಟು ದೊಡ್ಡ ಮಟ್ಟದ ಹೋರಾಟವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಮ್ಮ ರಾಜಕೀಯ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಅವರು, “ದೇವೇಗೌಡರಂತೆ ನಾನು ಜೀವ ಇರುವವರೆಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ” ಎಂದರು. ತಮ್ಮನ್ನು ‘ರಿಜೆಕ್ಟ್ ಪೀಸ್’ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ರಿಜೆಕ್ಟ್ ಪೀಸ್ ಆದರೆ ನೀವು ಗುಜರಿ ಪೀಸ್” ಎಂದು ತಿರುಗೇಟು ನೀಡಿದರು.
“ತುಕಾರಾಂ, ದುರಂಕಾರದ ಮಾತುಗಳು ಬೇಡ. ಕಾಲದ ಮುಂದಿನ ದಿನಗಳೇ ನಿನಗೆ ಉತ್ತರ ನೀಡಲಿವೆ” ಎಂದು ಅವರು ಎಚ್ಚರಿಸಿದರು.
ದಾಖಲೆಗಳ ಸಮೇತ ಬಹಿರಂಗಪಡಿಸುವುದಾಗಿ ಘೋಷಣೆ:
ಸೆಪ್ಟೆಂಬರ್ 10ರ ನಂತರ ಮತ್ತೆ ಸಂಡೂರಿಗೆ ಆಗಮಿಸುವುದಾಗಿ ತಿಳಿಸಿದ ಜನಾರ್ದನ ರೆಡ್ಡಿ, ತುಕಾರಾಂ, ಅನ್ನಪೂರ್ಣ ತುಕಾರಾಂ ಸೇರಿದಂತೆ ಅವರ ಕುಟುಂಬದವರು ಯಾವ್ಯಾವ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸುವುದಾಗಿ ಘೋಷಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, “ಜನಾರ್ದನ ರೆಡ್ಡಿಯವರ ಆಟ ಈಗ ಶುರುವಾಗಿದೆ. ಕಾರ್ಯಕರ್ತರು ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಇರಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ “ಬಳ್ಳಾರಿ ಚಲೋ” ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಸಕ್ರಿಯವಾಗಿ ಭಾಗವಹಿಸಿ ಪಾದಯಾತ್ರೆಗೆ ಹೆಚ್ಚಿನ ಜನಬೆಂಬಲ ದೊರಕುವಂತೆ ಕಾರ್ಯನಿರ್ವಹಿಸಬೇಕು ಎಂದು ಮುಖಂಡರು ಕರೆ ನೀಡಿದರು.
ಸಭೆಯಲ್ಲಿ ಗಾಲಿ ಜನಾರ್ದನ ರೆಡ್ಡಿ – ಮಾಜಿ ಸಚಿವರು ಹಾಗೂ ಗಂಗಾವತಿ ಶಾಸಕ, ಬಂಗಾರು ಹನುಮಂತ – ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ, ಜಿ.ಟಿ. ಪಂಪಾಪತಿ – ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಹುಡೇದ್ ಸುರೇಶ್ – ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಅಶೋಕ್ ಕುಮಾರ್ – ಸಂಡೂರು ಮಂಡಲ ಬಿಜೆಪಿ ಅಧ್ಯಕ್ಷ, ದಮ್ಮೂರು ಶೇಖರ್ – ಮಾಜಿ ಬುಡಾ ಅಧ್ಯಕ್ಷ, ಹನುಮಂತಪ್ಪ – ಸಫಾಯಿ ಕರ್ಮಚಾರಿಗಳ ನಿಗಮದ ಮಾಜಿ ಅಧ್ಯಕ್ಷ, ತಿರುಮಲ – ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ, ಧರಪ್ಪ ನಾಯಕ – ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ, ಶರಣುಗೌಡ – ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ನರಸಿಂಹ – ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ, ಪ್ರವೀಣ್ – ಮಂಡಲ ಪ್ರಧಾನ ಕಾರ್ಯದರ್ಶಿ, ಜೆ.ಸಿ.ಬಿ. ರಾಮಕೃಷ್ಣ – ಬಿಜೆಪಿ ಮುಖಂಡ, ಪ್ರಭುಗೌಡ – ಬಿಜೆಪಿ ಮುಖಂಡ, ರಮೇಶ್ – ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
