Saturday, September 5, 2026
HomeDistrictsBallariಕೋಳೂರು ಕ್ರಾಸ್‌ನಲ್ಲಿ ಬಸ್‌ ನಿಲುಗಡೆಗೆ ಕ್ರಮವಹಿಸಿ: ಶಾಸಕ ಜೆ.ಎನ್. ಗಣೇಶ್ ಕೋಳೂರು ಪಿಡಿಒಗೆ ಸಭೆಯಲ್ಲೇ ಕಟ್ಟುನಿಟ್ಟಿನ...

ಕೋಳೂರು ಕ್ರಾಸ್‌ನಲ್ಲಿ ಬಸ್‌ ನಿಲುಗಡೆಗೆ ಕ್ರಮವಹಿಸಿ: ಶಾಸಕ ಜೆ.ಎನ್. ಗಣೇಶ್ ಕೋಳೂರು ಪಿಡಿಒಗೆ ಸಭೆಯಲ್ಲೇ ಕಟ್ಟುನಿಟ್ಟಿನ ತಾಕೀತು

[ವರದಿ : ಜಿ ಎಂ ಬಸಯ್ಯ]
ಕೋಳೂರು: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಜೆ.ಎನ್. ಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೋಳೂರು ಗ್ರಾಮದಲ್ಲಿ ಶನಿವಾರ ನಡೆದ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿಯೇ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದರು.

ಕೋಳೂರು ಪಿಡಿಒಗೆ ಗರಂ:
ಸಾರ್ವಜನಿಕರ ಸೇವೆ ಹಾಗೂ ಕರ್ತವ್ಯ ನಿರ್ವಹಣೆಯ ವಿಚಾರದಲ್ಲಿ ಕೋಳೂರು ಪಿಡಿಒ ಅವರನ್ನು ಶಾಸಕ ಜೆ.ಎನ್. ಗಣೇಶ್ ಅವರು ಸಭೆಯ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡು, ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು. ಜನರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇಪದೇ ಅಲೆದಾಡುವಂತಾಗಬಾರದು. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

ಕೋಳೂರು ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಸೂಚನೆ:
ಇದೇ ವೇಳೆ ಕೋಳೂರು ಕ್ರಾಸ್‌ನಲ್ಲಿ ಬಸ್‌ಗಳನ್ನು ನಿಲ್ಲಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಶಾಸಕ ಜೆ.ಎನ್. ಗಣೇಶ್ ಸೂಚಿಸಿದರು. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದ್ದು, ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದ ಜನರು:
ಪ್ರಜಾ ಸೇವೆ ಆಂದೋಲನದಲ್ಲಿ ಸಾರ್ವಜನಿಕರು ವೃದ್ಧಾಪ್ಯ ವೇತನ, ಗೃಹಲಕ್ಷ್ಮಿ ಯೋಜನೆ, ಕಂದಾಯ, ಶಾಲೆ, ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಎರಡು-ಮೂರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ. ಈಗಲಾದರೂ ನಮ್ಮ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

ಸಾರ್ವಜನಿಕರ ಮನವಿಗಳನ್ನು ಆಲಿಸಿದ ಶಾಸಕ ಜೆ.ಎನ್. ಗಣೇಶ್, ಅಗತ್ಯ ಕ್ರಮ ಕೈಗೊಂಡು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಅಲ್ಲದೆ, ಐದು ಎಕರೆ ಭೂಮಿಯಲ್ಲಿ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದರು.

‘ಬಾಗಿಲಿಗೆ ಬಂತು ಸರ್ಕಾರ’—ಚನ್ನಪ್ಪ
ಕುರುಗೋಡು ತಾಲೂಕು ಉಸ್ತುವಾರಿ ಕಾರ್ಯದರ್ಶಿ ಚನ್ನಪ್ಪ ಮಾತನಾಡಿ, ‘ಪ್ರಜಾ ಸೇವೆ ಆಂದೋಲನ’ದ ಹೆಸರೇ ಸೂಚಿಸುವಂತೆ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಆಶಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸೋಣ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರೇಡ್‌-2 ತಹಶೀಲ್ದಾರ್ ನರಸಪ್ಪ, ತಾಪಂ ಅಧಿಕಾರಿ ಪಂಪಾಪತಿ ಹಿರೇಮಠ, ಪುರಸಭೆ ಅಧಿಕಾರಿ ದತ್ತಾತ್ರೇಯ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಸಿದ್ದಲಿಂಗಯ್ಯ, ಗ್ಯಾರಂಟಿ ಅಧ್ಯಕ್ಷ ಬಸವನಗೌಡ, ಪುರಸಭೆ ಅಧ್ಯಕ್ಷ ಮಂಜುನಾಥ ಸೇರಿದಂತೆ ಕಂದಾಯ, ವಿದ್ಯುತ್, ಗ್ರಾಮ ಪಂಚಾಯಿತಿ, ನೀರಾವರಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments