Sunday, September 6, 2026
HomeDistrictsBallariಗ್ಯಾರಂಟಿ ಪ್ರಚಾರದಲ್ಲೇ ಕಾಂಗ್ರೆಸ್ ಕಾಲಹರಣ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮ - ಬಿ.ವೈ. ವಿಜಯೇಂದ್ರ

ಗ್ಯಾರಂಟಿ ಪ್ರಚಾರದಲ್ಲೇ ಕಾಂಗ್ರೆಸ್ ಕಾಲಹರಣ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮ – ಬಿ.ವೈ. ವಿಜಯೇಂದ್ರ

[ವರದಿ : ಜಿ ಎಂ ಬಸಯ್ಯ]
ಕಂಪ್ಲಿ: ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆ 6ನೇ ದಿನವಾದ ಭಾನುವಾರ ಕಂಪ್ಲಿ ಪಟ್ಟಣಕ್ಕೆ ಪ್ರವೇಶಿಸಿತು. ಮಾಜಿ ಶಾಸಕ ಟಿ.ಎಚ್. ಸುರೇಶ್‌ ಬಾಬು ನೇತೃತ್ವದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಕಂಪ್ಲಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ರೈತರು ಹಾಗೂ ಜನಸಾಮಾನ್ಯರು ಸಂಕಷ್ಟದಲ್ಲಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಜನರೇ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ಈ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಒದಗಿಸುವಲ್ಲಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. ಬಡವರ ಬಿಪಿಎಲ್‌ ಕಾರ್ಡ್‌ಗಳ ವಿಚಾರ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಕ್ರಮ ಹಾಗೂ ರಾಜ್ಯದ ಆಡಳಿತದ ಕುರಿತು ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.
ಗಣೇಶ್ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕಂಪ್ಲಿ ಜನರ ಪ್ರೀತಿ, ವಿಶ್ವಾಸಕ್ಕೆ ತಾವು ಋಣಿಯಾಗಿದ್ದು, ಅದನ್ನು ತೀರಿಸುವುದಾಗಿ ಭಾವುಕರಾಗಿ ಹೇಳಿದರು.

ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆರೋಪಿಸಿದ ಅವರು, ಹಾಲಿ ಶಾಸಕ ಜೆ.ಎನ್. ಗಣೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮುಂದಿನ ಚುನಾವಣೆಯಲ್ಲಿ ಜೆ.ಎನ್. ಗಣೇಶ್ ಅವರನ್ನು ಸೋಲಿಸಿ, ಕಂಪ್ಲಿ ಕ್ಷೇತ್ರದಿಂದ ಟಿ.ಎಚ್. ಸುರೇಶ್‌ ಬಾಬು ಅವರನ್ನು ಗೆಲ್ಲಿಸುವುದಾಗಿ ಜನಾರ್ದನ ರೆಡ್ಡಿ ಘೋಷಿಸಿದರು. ಮುಂದಿನ ದಿನಗಳಲ್ಲಿ ಬಿಜೆಪಿ 10 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ರೈತರ ಸಮಸ್ಯೆ ಪ್ರಸ್ತಾಪಿಸಿದ ಶ್ರೀರಾಮುಲು:
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ತುಂಗಭದ್ರಾ ನೀರಿನ ಸಮಸ್ಯೆ, ರೈತರ ಬೆಳೆ ನಷ್ಟ ಹಾಗೂ ನೀರಾವರಿ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಈ ಭಾಗದ ರೈತರಿಗೆ ಎರಡು ಬೆಳೆಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಸಮಾನಾಂತರ ಜಲಾಶಯ ಸೇರಿದಂತೆ ಹಲವು ಕ್ರಮಗಳ ಅಗತ್ಯವಿದೆ ಎಂದರು.

ಸುರೇಶ್‌ ಬಾಬು ಆರೋಪ:
ಮಾಜಿ ಶಾಸಕ ಟಿ.ಎಚ್. ಸುರೇಶ್‌ ಬಾಬು ಮಾತನಾಡಿ, ‘ಬಳ್ಳಾರಿ ಚಲೋ’ ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ ಎಂದು ಹೇಳಿದರು. ವಿದ್ಯುತ್ ಸಮಸ್ಯೆ, ಎಸ್‌ಸಿ–ಎಸ್‌ಟಿ ಅನುದಾನ ಹಾಗೂ ತಮ್ಮ ಬೆಂಬಲಿಗರ ವಿರುದ್ಧ ಪ್ರಕರಣಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಕ್ಷೇತ್ರದ ಶಾಸಕ ಸೇರಿದಂತೆ ಕೆಲವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು.

ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ:
ಕಂಪ್ಲಿಗೆ ಆಗಮಿಸಿದ ಬಿಜೆಪಿ ನಾಯಕರು ಹಾಗೂ ಪಾದಯಾತ್ರಿಕರನ್ನು ಮಾಜಿ ಶಾಸಕ ಸುರೇಶ್‌ ಬಾಬು ನೇತೃತ್ವದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಕಂಪ್ಲಿ-ಕೋಟೆಯಿಂದ ಆರಂಭಗೊಂಡ ಮೆರವಣಿಗೆ ಗಂಡುಗಲಿ ಕುಮಾರರಾಮನ ಕೋಟೆ, ಜೋಗಿ ಕಾಲುವೆ, ಹಳೇ ಪೊಲೀಸ್ ಠಾಣೆ, ನಡುವಲ ಮಸೀದಿ, ಡಾ. ರಾಜಕುಮಾರ್ ರಸ್ತೆ, ಮಾರೆಮ್ಮ ಗುಡಿ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತಲುಪಿತು. ಬಳಿಕ ಬೃಹತ್ ಬಹಿರಂಗ ಸಭೆ ನಡೆಯಿತು.

ಕಲಾ ತಂಡಗಳ ಮೆರಗು, ರಾರಾಜಿಸಿದ ಬಿಜೆಪಿ ಧ್ವಜ:
ಪಾದಯಾತ್ರೆಗೆ ವಿವಿಧ ಕಲಾ ತಂಡಗಳು ವಿಶೇಷ ಮೆರುಗು ನೀಡಿದವು. ಹಗಲು ವೇಷ, ಕಹಳೆ ವಾದ್ಯ, ತಾಷಾ–ರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಧ್ವಜಗಳು ಹಾಗೂ ಬ್ಯಾನರ್‌ಗಳು ರಾರಾಜಿಸಿದವು.

ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಜನಸಾಗರವೇ ಹರಿದು ಬಂದಂತೆ ಕಂಡುಬಂತು. ಕ್ರೇನ್ ಮೂಲಕ ಪುಷ್ಪವೃಷ್ಠಿ ಮಾಡಿ ಬಿಜೆಪಿ ನಾಯಕರಿಗೆ ಸ್ವಾಗತಿಸಲಾಯಿತು.
ವಾಹನ ದಟ್ಟಣೆ: ಸುಮಾರು 1–2 ಕಿ.ಮೀ. ಟ್ರಾಫಿಕ್ ಜಾಮ್

ಬೃಹತ್ ಪಾದಯಾತ್ರೆ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಜನರು ಹಾಗೂ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಸಂಜೆ ವೇಳೆ ಸುಮಾರು 1–2 ಕಿಲೋಮೀಟರ್‌ವರೆಗೆ ವಾಹನ ದಟ್ಟಣೆ ಕಂಡುಬಂತು. ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದ್ದರೂ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್:
‘ಬಳ್ಳಾರಿ ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಾದಯಾತ್ರೆಯ ವಿವಿಧ ಹಂತಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಹಾಗೂ ಭದ್ರತೆಯನ್ನು ನಿಯಂತ್ರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣಾ ಲಕ್ಷ್ಮೀ, ಸಿ.ಡಿ. ಮಹಾದೇವ, ರಾಮಲಿಂಗಾರೆಡ್ಡಿ, ಆನೆಕಲ್ ನಾರಾಯಣಸ್ವಾಮಿ, ಮುರಾರಿಗೌಡ, ಗುತ್ತಿಗೆನೂರು ವಿರುಪಾಕ್ಷಿಗೌಡ, ಪಕ್ಕೀರಪ್ಪ, ಅಳ್ಳಳ್ಳಿ ವೀರೇಶ್, ಡಾ. ವಿ.ಎಲ್. ಬಾಬು, ರಾಮಾಂಜಿನೇಯಲು, ಕಡೆಮನೆ ಪಂಪಾಪತಿ, ಸುದರ್ಶನರೆಡ್ಡಿ, ಮನೋಜ್‌ಗೌಡ, ಬಡಿಗೇರ್ ವೀರೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments