ಬೆಂಗಳೂರು, ಸೆ. 9: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ₹19.23 ಕೋಟಿಗೂ ಅಧಿಕ ದಂಡದ ಮೊತ್ತ ಬಾಕಿ ಉಳಿದಿದೆ. ಈ ದಂಡದ ಮೊತ್ತವನ್ನು ಕೂಡಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.


ಒಳಾಡಳಿತ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2023ರಿಂದ 2026ರ ಜುಲೈ ಅಂತ್ಯದವರೆಗೆ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳ ವಿರುದ್ಧ ಒಟ್ಟು 82,478 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ವಾಹನಗಳ ಮೇಲೆಯೇ 3,366 ಪ್ರಕರಣ:
ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸುವ ಪೊಲೀಸ್ ಇಲಾಖೆಯ ವಾಹನಗಳ ಮೇಲೆಯೇ ಈ ಅವಧಿಯಲ್ಲಿ 3,366 ಪ್ರಕರಣಗಳು ದಾಖಲಾಗಿರುವುದು ಗಮನಾರ್ಹವಾಗಿದೆ.
2023: 21 ಪ್ರಕರಣ
2024: 1,494 ಪ್ರಕರಣ
2025: 1,251 ಪ್ರಕರಣ
2026ರ ಜುಲೈ ಅಂತ್ಯಕ್ಕೆ: 600 ಪ್ರಕರಣಗಳು
ಇದೇ ಅವಧಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳ ವಿರುದ್ಧ 82,478 ಪ್ರಕರಣಗಳು ದಾಖಲಾಗಿವೆ.
2023: 1,055 ಪ್ರಕರಣ
2024: 35,832 ಪ್ರಕರಣ
2025: 38,282 ಪ್ರಕರಣ
2026ರ ಜುಲೈ ಅಂತ್ಯಕ್ಕೆ: 7,309 ಪ್ರಕರಣಗಳು
ಈ ಎಲ್ಲಾ ಪ್ರಕರಣಗಳ ದಂಡದ ಮೊತ್ತದಲ್ಲಿ ₹19,23,72,500 ಪಾವತಿಸದೇ ಬಾಕಿ
ಉಳಿದಿರುವುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ.
ಮೈಸೂರಿನ ಪೊಲೀಸ್ ಗಸ್ತು ವಾಹನದ ವಿರುದ್ಧ 71 ಪ್ರಕರಣ:
ಇತ್ತೀಚೆಗೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯ ತುರ್ತು ಸೇವೆಯ ಗಸ್ತು ವಾಹನದ ವಿರುದ್ಧವೂ ನಿರಂತರವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿತ್ತು. 2024ರ ಜುಲೈನಿಂದ 2026ರ ಜೂನ್ 10ರವರೆಗೆ 23 ತಿಂಗಳ ಅವಧಿಯಲ್ಲಿ ಸೀಟ್ಬೆಲ್ಟ್ ಧರಿಸದ ಹಿನ್ನೆಲೆಯಲ್ಲಿ ಆ ವಾಹನದ ವಿರುದ್ಧ 71 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹36,500 ದಂಡ ವಿಧಿಸಲಾಗಿತ್ತು ಎಂಬ ವರದಿಗಳು ಪತ್ರಿಕಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಹಿನ್ನೆಲೆಯಲ್ಲಿ ಸರ್ಕಾರಿ ವಾಹನಗಳು, ಅದರಲ್ಲೂ ಪೊಲೀಸ್ ಇಲಾಖೆಯ ವಾಹನಗಳು ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
‘ಸಾರ್ವಜನಿಕರಿಗೆ ಒಂದು ಕಾನೂನು, ಸರ್ಕಾರಿ ವಾಹನಗಳಿಗೆ ಮತ್ತೊಂದು ಕಾನೂನೇ?’
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ದಂಡ ವಿಧಿಸಿ ಕ್ರಮ ಕೈಗೊಳ್ಳುವ ಪೊಲೀಸ್ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳ ವಾಹನಗಳೇ ನಿಯಮ ಉಲ್ಲಂಘಿಸಿದರೆ ದಂಡ ಪಾವತಿಸದೇ ಬಾಕಿ ಉಳಿಸಿಕೊಳ್ಳುತ್ತಿರುವುದು ಪ್ರಶ್ನಾರ್ಹವಾಗಿದೆ.
“ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸರಿಗೆ ಮತ್ತು ಸರ್ಕಾರಕ್ಕೆ, ಪೊಲೀಸರು ಹಾಗೂ ಸರ್ಕಾರಿ ವಾಹನಗಳಿಂದ ದಂಡ ವಸೂಲಿ ಮಾಡುವವರು ಯಾರು?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಎತ್ತುತ್ತಿದ್ದಾರೆ.
ಕಾನೂನು ಮತ್ತು ಸಂಚಾರ ನಿಯಮಗಳನ್ನು ಜಾರಿಗೊಳಿಸುವ ಪೊಲೀಸ್ ಇಲಾಖೆ ಮೊದಲು ತಾನೇ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಕಾನೂನು ಜಾರಿಗೊಳಿಸುವವರೇ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕರಲ್ಲಿ ಕಾನೂನು ಪಾಲನೆಯ ಬಗ್ಗೆ ನಕಾರಾತ್ಮಕ ಸಂದೇಶ ಮೂಡುವ ಸಾಧ್ಯತೆ ಇದೆ ಎಂದು ಮೋಹನ್ ಕುಮಾರ್ ದಾನಪ್ಪ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಎಲ್ಲಾ ಸರ್ಕಾರಿ ವಾಹನಗಳ ಪರಿಶೀಲನೆಗೆ ಒತ್ತಾಯ:
ಸರ್ಕಾರಿ ವಾಹನಗಳ ಮೇಲಿನ ಬಾಕಿ ದಂಡದ ಮೊತ್ತವನ್ನು ನಿಯಮಾನುಸಾರ ಕೂಡಲೇ ವಸೂಲಿ ಮಾಡುವಂತೆ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಎಲ್ಲಾ ವರ್ಗದ ಸರ್ಕಾರಿ ವಾಹನಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ.
ಯಾವುದೇ ಸರ್ಕಾರಿ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದರೆ, ಬಾಕಿ ಇರುವ ದಂಡದ ಮೊತ್ತವನ್ನು ತಕ್ಷಣ ಪಾವತಿಸಲು ಸಂಬಂಧಿಸಿದ ಇಲಾಖೆಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
