ಬಳ್ಳಾರಿ,ಅ.01:ಮಕ್ಕಳು ಕೇವಲ ಆಸ್ತಿಗಾಗಿ ಹಿರಿಯರನ್ನು ಬಳಸಿಕೊಳ್ಳದೆ, ವೃದ್ಧಾಪ್ಯದಲ್ಲಿ ಅವರಿಗೆ ಪ್ರೀತಿ, ಗೌರವ ನೀಡಿ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ದೀರ್ಘಾಯುಷ್ಯದ ಯುಗ: ಸುದೀರ್ಘ ಜೀವನಕ್ಕಾಗಿ ಜೀವನ ಕ್ರಮಗಳ ಮರುಚಿಂತನೆ’ ಎಂಬ ಘೋಷವಾಕ್ಯದೊಂದಿಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಮಕ್ಕಳು ತಂದೆ-ತಾಯಿಯ ಬಳಿ ಆಸ್ತಿ ಅಥವಾ ಪಿಂಚಣಿ ಇದ್ದರೆ ಮಾತ್ರ ಅವರನ್ನು ಗೌರವಿಸುವ ಮತ್ತು ನೋಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಹೆಣ್ಣುಮಕ್ಕಳು ಅಥವಾ ಗಂಡುಮಕ್ಕಳು ಪೋಷಕರಿಗೆ ಆಶ್ರಯ ನೀಡಲು ಆಸ್ತಿಯನ್ನೇ ಮಾನದಂಡವನ್ನಾಗಿ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯರು ಬದುಕಿರುವವರೆಗೂ ತಮ್ಮ ಆಸ್ತಿಯನ್ನು ಉಡುಗೊರೆ ಅಥವಾ ವಿಲ್ ಮೂಲಕ ಮಕ್ಕಳಿಗೆ ಬಿಟ್ಟುಕೊಡಲು ಆತುರಪಡಬಾರದು. ಪೋಷಕರ ಜೀವಿತಾವಧಿಯ ನಂತರ ಕಾನೂನುಬದ್ಧವಾಗಿಯೇ ಆಸ್ತಿ ವಾರಸುದಾರರಿಗೆ ಸೇರುವುದರಿಂದ, ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ಬರೆದುಕೊಡಬೇಡಿ ಎಂದು ಅವರು ತಿಳಿಸಿದರು.
ಕೇವಲ ಆರ್ಥಿಕ ಸಹಾಯ ಅಥವಾ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ, ಹಿರಿಯರೊಂದಿಗೆ ಕಾಲ ಕಳೆಯುವುದು, ಅವರ ಮಾತುಗಳನ್ನು ಆಲಿಸುವುದು ಮತ್ತು ಅವರ ಭಾವನೆಗಳನ್ನು ಗೌರವಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಿದೆ. ಇಂದಿನ ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮುಳುಗಿದ್ದು, ಹಿರಿಯರ ಅನುಭವದ ಮಾತುಗಳನ್ನು ಆಲಿಸಲು ಸಮಯ ನೀಡುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ಹಿತರಕ್ಷಣೆ ಮತ್ತು ನಿರ್ವಹಣಾ ಕಾಯ್ದೆಯಡಿ ಹಿರಿಯರ ಆಸ್ತಿ ರಕ್ಷಣೆಗೆ ಕಾನೂನು ನೆರವು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ನೆರವು ಲಭ್ಯವಿದೆ. ಹಾಗಾಗಿ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಉತ್ಸಾಹದಿಂದ ಇರಬೇಕು ಮತ್ತು ಅವರ ಜೀವನಾನುಭವವನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿ ನೀಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಸಮಾಜ ಹಾಗೂ ಕುಟುಂಬದ ಆಧಾರಸ್ತಂಭವಾಗಿರುವ ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಮತ್ತು ಪೋಷಿಸುವುದು ಪ್ರತಿಯೊಬ್ಬರ ಹೊಣೆ ಎಂದು ಕರೆ ನೀಡಿದರು.
ಬೇರಿಲ್ಲದೆ ಮರ ಬದುಕಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ತಂದೆ-ತಾಯಿ ಹಾಗೂ ಹಿರಿಯರ ಆಶೀರ್ವಾದವಿಲ್ಲದೆ ಯಶಸ್ಸು ಅಪೂರ್ಣ. ಹಿರಿಯರ ಅನುಭವ ಯುವಪೀಳಿಗೆಗೆ ದೊಡ್ಡ ಮಾರ್ಗದರ್ಶಿಯಾಗಿದೆ. ಕೇವಲ ಪಿಂಚಣಿ ಅಥವಾ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರಿಗೆ ಪ್ರೀತಿ ಮತ್ತು ಗೌರವ ನೀಡುವುದು ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
2007ರ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆ ಕಾಯ್ದೆಯನ್ವಯ ಮಕ್ಕಳು ಅಥವಾ ಸಂಬAಧಿಕರು ಹಿರಿಯರನ್ನು ಕಡ್ಡಾಯವಾಗಿ ಪಾಲನೆ-ಪೋಷಣೆ ಮಾಡಬೇಕು; ತಪ್ಪಿದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವಾಗ ‘ನನ್ನನ್ನು ಸರಿಯಾಗಿ ನೋಡಿಕೊಳ್ಳಬೇಕು’ ಎಂಬ ಷರತ್ತನ್ನು ನಮೂದಿಸಬೇಕು. ಒಂದು ವೇಳೆ ಮಕ್ಕಳು ಪೋಷಿಸದಿದ್ದರೆ, ಸಹಾಯಕ ಆಯುಕ್ತರು ಆ ವರ್ಗಾವಣೆ ಪತ್ರವನ್ನು ರದ್ದುಗೊಳಿಸುವ ಅಧಿಕಾರ ಹೊಂದಿರುತ್ತಾರೆ. ಹಿರಿಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಮಾಸಿಕ ನಿರ್ವಹಣಾ ವೆಚ್ಚವನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮವೂ ಇದೆ ಎಂದು ತಿಳಿಸಿದರು.
ಗ್ರಂಥಾಲಯದಲ್ಲಿ ವಿಶೇಷ ಮೀಸಲಾತಿ:
ಹಿರಿಯ ನಾಗರಿಕರ ವಿಶ್ರಾಂತಿ, ವಾಚನ ಮತ್ತು ಚರ್ಚೆಗಳಿಗೆ ಅನುಕೂಲವಾಗುವಂತೆ ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ ನೂತನ ಗ್ರಂಥಾಲಯದ ನೆಲಮಹಡಿಯನ್ನು ಸಂಪೂರ್ಣವಾಗಿ ಹಿರಿಯ ನಾಗರಿಕರಿಗೆ ಮೀಸಲಿಡಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ತಿಳಿಸಿದ ಅವರು, ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಎದುರಾದರೂ ನೇರವಾಗಿ ಜಿಲ್ಲಾಡಳಿತ ಅಥವಾ ಸಂಬAಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿರುವ ಶತಾಯುಷಿಗಳಿಗೆ ಸನ್ಮಾನಿಸಲಾಯಿತು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ಗೋವಿಂದರಾಜುಲು, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ/ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಅಧ್ಯಕ್ಷ ಉಮಾಪತಿ ಗೌಡ್ರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ., ಕೃಷ್ಣಾ ಸನ್ನಿಧಿಯ ವೈದ್ಯರು ಹಾಗೂ ಮುಖ್ಯಸ್ಥರಾದ ನಾಗರತ್ನ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ್, ಹಿರಿಯ ಸಾಹಿತಿಗಳಾದ ಎನ್.ಡಿ. ವೆಂಕಮ್ಮ, ಅನುಗ್ರಹ ಸಂಸ್ಥೆಯ ಪ್ರೇಮಾ ಸೇರಿದಂತೆ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
