ಸಂಡೂರು:ನ:11: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಡೂರು ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಸಭಾಭವನದ ಶಂಕುಸ್ಥಾಪನೆ ಸಮಾರಂಭವು ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಇ. ತುಕಾರಾಂ ಅವರು, ಕನ್ನಡ ಸಾಹಿತ್ಯ ಸಭಾಭವನ ನಿರ್ಮಾಣಕ್ಕೆ ಈಗಾಗಲೇ ₹1.25 ಕೋಟಿ ಕೊಡುಗೆ ನೀಡಿದ್ದು, ಈ ಕಾರ್ಯಕ್ರಮ ಸಂಡೂರಿನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಕಾರ್ಯಕ್ರಮವಾಗಿದೆ. ಇದಕ್ಕೆ ಪ್ರಮುಖ ಕಾರಣ ಡಾ. ನಾಗನಗೌಡ ಅವರ ನಿರಂತರ ಪ್ರಯತ್ನ ಮತ್ತು ಕಾಳಜಿ ಎಂದು ಶ್ಲಾಘಿಸಿದರು.
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಅದೇ ರೀತಿ ಸಂಡೂರು ಕೂಡ ಸಂಸ್ಕಾರ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದ ಮೇಲ್ಚಾವಣಿ ನಿರ್ಮಾಣಕ್ಕಾಗಿ ಸಿಎಂಐಡಿಪಿ ಹಾಗೂ ಶಾಸಕರ ಅನುದಾನದಡಿ ₹1.25 ಕೋಟಿ ನೀಡುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಂ ಅವರು, “ನಾವು ಕೇವಲ ಒಂದು ಕಟ್ಟಡದ ಉದ್ಘಾಟನೆಗೆ ಆಗಮಿಸಿಲ್ಲ, ಬದಲಾಗಿ ಭಾವನಾತ್ಮಕ ಸಂಬಂಧ ಹೊಂದಿರುವ ಸಾಂಸ್ಕೃತಿಕ ಭವನದ ಉದ್ಘಾಟನೆಗೆ ಆಗಮಿಸಿದ್ದೇವೆ ಎಂಬ ಭಾವನೆ ನನ್ನಲ್ಲಿದೆ. ಇಂದು ನಮ್ಮ ಕ್ಷೇತ್ರದ ಪಾಲಿಗೆ ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ದಿನವಾಗಿದೆ” ಎಂದರು.
ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಕಲೆಯ ಬೆಳವಣಿಗೆಗೆ ಶಾಶ್ವತ ವೇದಿಕೆಯಾಗುವ ಉದ್ದೇಶದಿಂದ ಈ ಸಾಂಸ್ಕೃತಿಕ ಭವನ ಲೋಕಾರ್ಪಣೆಗೊಂಡಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಹಲವು ವರ್ಷಗಳಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಈ ಭವನ ಕೇವಲ ಇಟ್ಟಿಗೆ ಮತ್ತು ಸಿಮೆಂಟ್ನಿಂದ ನಿರ್ಮಿಸಿದ ಕಟ್ಟಡವಾಗದೆ, ನಮ್ಮ ನೆಲದ ಸಂಸ್ಕೃತಿ, ಜಾನಪದ, ನಾಟಕ ಹಾಗೂ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವ ಜ್ಞಾನದ ದೇಗುಲವಾಗಬೇಕು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಲು ಇದು ಸಹಕಾರಿಯಾಗಬೇಕು. ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಉದಯೋನ್ಮುಖ ಬರಹಗಾರರಿಗೆ ಸೂಕ್ತ ವೇದಿಕೆ ದೊರೆಯಬೇಕು ಎಂದು ಆಶಿಸಿದರು.
ಕ್ಷೇತ್ರದ ಶಾಸಕಿಯಾಗಿ ಕನ್ನಡದ ಕೆಲಸಗಳಿಗೆ ಹಾಗೂ ಭವನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಅನುದಾನದ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು. ಭವನದ ನಿರ್ಮಾಣಕ್ಕೆ ಶ್ರಮಿಸಿದ ಪರಿಷತ್ತಿನ ಪದಾಧಿಕಾರಿಗಳು, ದಾನಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡ ಸಾಹಿತ್ಯವನ್ನು ಮೇರುಮಟ್ಟಕ್ಕೆ ಕೊಂಡೊಯ್ದ ಮಹಾಕವಿಗಳು ಹಾಗೂ ಅವರ ಕಥನಕಾವ್ಯಗಳನ್ನು ಸ್ಮರಿಸಿದರು. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನ ನೀಡಬೇಕು. ಮುಂದಿನ ಪೀಳಿಗೆಗೆ ಕನ್ನಡದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಡಾ. ನಾಗನಗೌಡ ನೆರವೇರಿಸಿದರು. ಜಿ. ವೀರೇಶ್ ಸ್ವಾಗತ ಭಾಷಣ ಮಾಡಿದರು. ಡಾ. ತಿಪ್ಪೇರುದ್ರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ನಾಗನಗೌಡ, ಶಾಸಕಿ ಅನ್ನಪೂರ್ಣ ತುಕಾರಾಂ, ಸಂಸದ ಇ. ತುಕಾರಾಂ, ವಿರಕ್ತಮಠದ ಪ್ರಭುಮಹಾಸ್ವಾಮಿಗಳು, ಡಾ. ಮೃತ್ಯುಂಜಯ ರುಮಾಲೆ, ಡಾ. ನಿಷ್ಟಿ ರುದ್ರಪ್ಪ, ಬಿಇಒ ಡಾ. ಐ.ಆರ್. ಅಕ್ಕಿ, ನಾಡೋಜ ಚಿತ್ರಕಲಾವಿದ ವಿ.ಟಿ. ಕಾಳೆ, ಸಿ.ಎಂ. ಶಿಗ್ಗಾವಿ, ಡಾ. ವೃಷಬೆಂದ್ರ ಆಚಾರ್, ಡಾ. ವಸುಂಧರಾ ಭೂಪತಿ, ಡಾ. ಚಂದ್ರಕಾಂತ್ ವಡ್ಡು, ಶಂಕ್ರಪ್ಪ ತೋರಣಗಲ್ಲು, ತುಮಟಿ ಲಕ್ಷ್ಮಣ, ಬಿ.ಆರ್. ಮಸೂತಿ, ಮಹಮ್ಮದ್ ಅಯೂಬ್, ಡಾ. ಪಿ. ಹುಚ್ಚುಸಾಬ್, ಪ್ರಕಾಶ್ ಮೂರ್ತಿ, ಡಾ. ಕೆ. ಶಿವಲಿಂಗಪ್ಪ ಹಂದಿಹಾಳ್ ಸೇರಿದಂತೆ ಹಲವು ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
