Monday, June 15, 2026
HomeDistrictsBengaluru Cityಪೊಲೀಸರಿಂದ ಹೈಕೋರ್ಟ್ ಮಾರ್ಗಸೂಚಿ ಉಲ್ಲಂಘನೆ – ಸೈಲೆಂಟ್‌ ಸುನೀಲ್‌ ಸೇರಿ 66 ಮಂದಿಗೆ ರೌಡಿಶೀಟ್‌ನಿಂದ ಮುಕ್ತಿ!

ಪೊಲೀಸರಿಂದ ಹೈಕೋರ್ಟ್ ಮಾರ್ಗಸೂಚಿ ಉಲ್ಲಂಘನೆ – ಸೈಲೆಂಟ್‌ ಸುನೀಲ್‌ ಸೇರಿ 66 ಮಂದಿಗೆ ರೌಡಿಶೀಟ್‌ನಿಂದ ಮುಕ್ತಿ!

ಬೆಂಗಳೂರು : ಕರ್ನಾಟಕ ಪೊಲೀಸರು ಹೈಕೋರ್ಟ್‌ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ, ಭೂಗತ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್, ರೋಹಿತ್‌ ಅಲಿಯಾಸ್‌ ಒಂಟೆ ರೋಹಿತ್‌ ಸೇರಿದಂತೆ 66 ಮಂದಿಗೆ ರೌಡಿಶೀಟ್‌ನಿಂದ ರಿಲೀಫ್ ಸಿಕ್ಕಿದೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಮ್ಮ ಹೆಸರಿನಲ್ಲಿ ತೆರೆಯಲಾಗಿರುವ ರೌಡಿಶೀಟ್ ಅನ್ನು ರದ್ದುಗೊಳಿಸುವಂತೆ ಕೋರಿ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್‌ ಸುನಿಲ್‌, ರೋಹಿತ್‌ ಅಲಿಯಾಸ್‌ ಒಂಟೆ ರೋಹಿತ್‌ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ದೂರುಗಳ ಕುರಿತು ಕೂಲಂಕಷ ವಿಚಾರಣೆ ನಡೆಸಿರುವ ಪ್ರಾಧಿಕಾರವು ಮಹತ್ವದ ಆದೇಶ ಹೊರಡಿಸಿದೆ.

ಮೇ 19ರಂದು ನಡೆದ ವಿಚಾರಣೆಯಲ್ಲಿ(ಸಭೆ) ಸೈಲೆಂಟ್‌ ಸುನಿಲ್‌ ಹೆಸರನ್ನು ಅಮೃತಹಳ್ಳಿ ಠಾಣೆ ಪೊಲೀಸರ ರೌಡಿಪಟ್ಟಿಯಿಂದ ತೆಗೆಯಲಾಗಿದೆ. ಮೇ 25ರಂದು ಸುನಿಲ್‌ ಸಹಚರ ಒಂಟೆ ರೋಹಿತ್‌ ಹಾಗೂ ಕೆಲವು ರೌಡಿಗಳ ಹೆಸರು ತೆಗೆಯಲಾಗಿದೆ. ಇದೇ ರೀತಿ 2025ರಲ್ಲಿ 38 ರೌಡಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ರೌಡಿಪಟ್ಟಿ ತೆರೆಯುವ ಹಾಗೂ ಮುಕ್ತಾಯ ಪ್ರಕ್ರಿಯೆ ಕುರಿತು 2022ರಲ್ಲಿ ಹೈಕೋರ್ಟ್‌ ರೂಪಿಸಿದ್ದ ಮಾರ್ಗಸೂಚಿಗಳನ್ನು ಪೊಲೀಸರು ಪಾಲಿಸಿಲ್ಲ. ಪ್ರಾಧಿಕಾರದ ವಿಚಾರಣಾ ಹಂತದ ದಾಖಲೆಗಳಲ್ಲಿ ಇದು ದೃಢಪಟ್ಟಿದೆ. ಈ ಕಾರಣಕ್ಕೆ 66 ರೌಡಿಗಳ ದೂರುಗಳನ್ನು ಮೇಲ್ಮನವಿ ಪುರಸ್ಕರಿಸಿದ್ದು, ಅವರ ಹೆಸರುಗಳನ್ನು ರೌಡಿಪಟ್ಟಿಯಿಂದ ಕೈ ಬಿಡುವ ಆದೇಶ ಮಾಡಲಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಿಂದ ರೌಡಿಗಳು ಸಲ್ಲಿಸಿರುವ 40ಕ್ಕೂ ಹೆಚ್ಚು ದೂರುಗಳು ಪ್ರಾಧಿಕಾರದ ಮುಂದೆ ವಿಚಾರಣಾ ಹಂತದಲ್ಲಿವೆ ಎಂದು ತಿಳಿದುಬಂದಿದೆ.

ಹೈಕೋರ್ಟ್‌ ಮಾರ್ಗಸೂಚಿಗಳೇನು.?

•ಯಾವುದೇ ವ್ಯಕ್ತಿಯ ವಿರುದ್ಧ ಆಯಾ ವ್ಯಾಪ್ತಿಯ ಠಾಣೆಯಲ್ಲಿ ರೌಡಿಶೀಟ್‌ ತೆರೆಯುವ ಮುನ್ನ ಸಂಬಂಧಿತ ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಬೇಕು. ಬಳಿಕ ರೌಡಿಪಟ್ಟಿ ತೆರೆಯುವ ಪ್ರಕ್ರಿಯೆ ಆರಂಭಿಸಬೇಕು.

•ರೌಡಿಶೀಟ್‌ ತೆಗೆಯುತ್ತಿರುವ ವ್ಯಕ್ತಿಗೆ ಈ ಕುರಿತು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಬೇಕು. ಈ ಕುರಿತು ಆಕ್ಷೇಪಣೆಗಳಿದ್ದರೆ ಎರಡು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಬೇಕು. ಇದರಲ್ಲಿ ಖುದ್ದು ವ್ಯಕ್ತಿಯ ವಿಚಾರಣೆಯ ಅಗತ್ಯವಿರುವುದಿಲ್ಲ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮುಂಚಿತವಾಗಿ ನೋಟಿಸ್‌ ನೀಡುವ ಪ್ರಕ್ರಿಯೆ ಕೈ ಬಿಡಬಹುದು. ಆದರೆ, ಯಾಕೆ ನೋಟಿಸ್‌ ನೀಡಿಲ್ಲ ಎಂಬುದರ ಬಗ್ಗೆ ರೌಡಿ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು.

•ಪೊಲೀಸ್‌ ಅಧೀಕ್ಷಕರು (ಎಸ್ಪಿ), ಉಪವಿಭಾಗದ ಅಧಿಕಾರಿಗಳು ರೌಡಿಶೀಟ್‌ಗೆ ಯಾವುದೇ ವ್ಯಕ್ತಿಯ ಹೆಸರನ್ನು ರೌಡಿಪಟ್ಟಿಗೆ ಸೇರಿಸಲು ಅನುಮೋದನೆ ನೀಡುವ ಮುನ್ನ ದಾಖಲೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುವುದು ಕಡ್ಡಾಯ. ಜತೆಗೆ, ಅನುಮೋದನೆಯ ಸ್ಪಷ್ಟ ಕಾರಣ ದಾಖಲಿಸಬೇಕು. ಜತೆಗೆ, ಸಂಬಂಧಪಟ್ಟ ವ್ಯಕ್ತಿಗೆ ಆದೇಶದ ಪ್ರತಿ ನೀಡಬೇಕು. ಈ ಪ್ರತಿಯಲ್ಲಿ ಆದೇಶದ ವಿರುದ್ಧ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂಬ ಉಲ್ಲೇಖ ಮಾಡಿರಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments