Friday, July 10, 2026
HomeDistrictsBallariಬಳ್ಳಾರಿ: ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 0.20 ಸೆಂಟ್ಸ್ ಜಮೀನು ಕಾಯ್ದಿರಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ...

ಬಳ್ಳಾರಿ: ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 0.20 ಸೆಂಟ್ಸ್ ಜಮೀನು ಕಾಯ್ದಿರಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶ

ಬಳ್ಳಾರಿ,ಜು.10:
ಬಳ್ಳಾರಿ ನಗರದ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ‘ಜಿಲ್ಲಾ ಸರ್ಕಾರಿ ನೌಕರರ ಭವನ’ ನಿರ್ಮಾಣಕ್ಕೆ ಕನಸು ಈಡೇರಿದ್ದು, ನಗರದ ಪ್ರಮುಖ ಪ್ರದೇಶದಲ್ಲಿ ಭವನ ನಿರ್ಮಾಣಕ್ಕಾಗಿ 0.20 ಸೆಂಟ್ಸ್ ಜಮೀನನ್ನು ಕಾಯ್ದಿರಿಸಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಶಾಖೆಯ ಅಧ್ಯಕ್ಷರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಈ ಭವನವನ್ನು ನಿರ್ಮಿಸಲಾಗುತ್ತಿದೆ.
ಈ ಜಮೀನು ಮಂಜೂರಾತಿಗೆ ರಾಜ್ಯಸಭಾ ಸದಸ್ಯರಾದ ಡಾ. ಸೈಯದ್ ನಾಸೀರ್ ಹುಸೇನ್, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬಿ. ನಾಗೇಂದ್ರ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾರಾ ಭರತ್ ರೆಡ್ಡಿ ಅವರುಗಳು ಪತ್ರದ ಮೂಲಕ ಶಿಫಾರಸು ಮಾಡಿ, ಬೆಂಬಲ ಸೂಚಿಸಿದ್ದರು.

ಜಮೀನಿನ ವಿವರಗಳು:
ಸ್ಥಳ: ಬಳ್ಳಾರಿ ತಾಲ್ಲೂಕು, ಬಳ್ಳಾರಿ ನಗರದ ಟಿ.ಎಸ್. ನಂ. 94 ರ ಪೈಕಿ ವಿಸ್ತೀರ್ಣ 0.20 ಸೆಂಟ್ಸ್.

ಸ್ಥಿತಿಗತಿ: ಎಲ್.ಆರ್ ಪ್ರಕಾರ ಇದು ‘ಗ್ರಾಮಕಂಠA’ ಜಮೀನಾಗಿದ್ದು, ಕೋಟೆ ಮುಖ್ಯ ರಸ್ತೆ ಸಂಪರ್ಕ ಹೊಂದಿದೆ.
ಪ್ರಸ್ತಾಪಿತ ಜಮೀನಿನಲ್ಲಿ ಯಾವುದೇ ಐತಿಹಾಸಿಕ ಸ್ಮಾರಕಗಳು, ಅನಧಿಕೃತ ಕಟ್ಟಡಗಳು, ಗುಡಿ-ಗೋಪುರಗಳು ಅಥವಾ ಹೈ-ಟೆನ್ಷನ್ ವಿದ್ಯುತ್ ಕಂಬಗಳು ಇರುವುದಿಲ್ಲ. ಯಾವುದೇ 94 ಸಿ ಅಥವಾ 94 ಸಿಸಿ ಅರ್ಜಿಗಳು ಇಲ್ಲಿ ಬಾಕಿ ಇರುವುದಿಲ್ಲ.

ಷರತ್ತುಗಳು:
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರ ಅಡಿಯಲ್ಲಿ ಈ ಜಮೀನನ್ನು ಜಿಲ್ಲಾಧಿಕಾರಿಗಳ ಹೆಸರಿಗೆ ಕಾಯ್ದಿರಿಸಲಾಗಿದ್ದು, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ.
ಕಾಯ್ದಿರಿಸಿದ ಜಮೀನನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ, ಅದೇ ಉದ್ದೇಶಕ್ಕೆ (ನೌಕರರ ಭವನ) ಬಳಸಬೇಕು. ಆದೇಶ ಹೊರಡಿಸಿದ ದಿನಾಂಕದಿಂದ ಮೂರು ವರ್ಷದೊಳಗಾಗಿ ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳತಕ್ಕದ್ದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಉದ್ದೇಶಿತ ಕಾರ್ಯಕ್ಕೆ ಬಳಸದಿದ್ದಲ್ಲಿ ಜಮೀನನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಬೇಕು. ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಮುನ್ಸೂಚನೆ ನೀಡದೆಯೇ ಏಕಪಕ್ಷೀಯವಾಗಿ ಆದೇಶವನ್ನು ರದ್ದುಪಡಿಸಲಾಗುವುದು.

ಸಹಾಯಕ ನಿರ್ದೇಶಕರು, ಭೂ ದಾಖಲೆಗಳ ನಗರ ಮಾಪನ ಇಲಾಖೆ ಬಳ್ಳಾರಿ ಇವರಿಗೆ ಆಸ್ತಿ ಪ್ರಕಟಣೆ ಪತ್ರ (ಪಿಆರ್)/ಎಲ್.ಆರ್‌ನಲ್ಲಿ ಮಾಲಿಕತ್ವ ಬದಲಾವಣೆ ಮಾಡಿ ಹಸ್ತಾಂತರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸೂಚನೆ ನೀಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments