[ವರದಿ : ಭೀಮಾಶಂಕರ್ ಹುಗಾರ್]
ಜೇವರ್ಗಿ: ಬರಪೀಡಿತ ತಾಲೂಕು ಘೋಷಣೆ ಮಾಡಿ, ರೈತರಿಗೆ ಮಧ್ಯಂತರ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಒತ್ತಾಯಿಸಿದರು.
ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ನಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಹಿಂದಿನ ವರ್ಷ ಅತವೃಷ್ಟಿಯಿಂದ ರೈತರು ನೋವು ಅನುಭವಿಸಿದ್ದರು. ಈ ವರ್ಷ ಮಳೆ ಬಾರದೆ ಬರದಿಂದ ಕಂಗಾಲಾಗಿದ್ದಾರೆ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿ ತೊಂದರೆ ಪಡುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಬರ ಘೋಷಣೆ ಮಾಡಬೇಕು. ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ರೈತರ ಸಾಲಮನ್ನಾ ಮಾಡಿದ್ದ ರೀತಿಯಲ್ಲಿಯೇ ಈಗಿನ ಕಾಂಗ್ರೆಸ್ ಸರ್ಕಾರವೂ ಎಲ್ಲ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿನ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಪಂಪ್ಸೆಟ್ಗಳಿಗೆ ದಿನಕ್ಕೆ 7ಗಂಟೆ ವಿದ್ಯುತ್ ನೀಡಬೇಕಾದ ಕೆಇಬಿ, ಇಲ್ಲದ ಕಾರಣ ಹೇಳಿ ನಿತ್ಯ ಕೇವಲ ಒಂದು ಗಂಟೆ ಕರೆಂಟ್ ನೀಡುತ್ತಿದೆ. ರೈತರಿಗೆ ಪೂರ್ಣ ಪ್ರಮಾಣದಲ್ಲಿ 7 ಗಂಟೆ ವಿದ್ಯುತ್ ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕು. ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಬೇಕಾದ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನರಿಬೋಳ-ಚಾಮನೂರ ಸೇತುವೆ ನಿರ್ಮಾಣ ಕಾಮಗಾರಿಗಾಗಿ 32 ಕೋಟಿ ರೂ. ಟೆಂಡರ್ ಆಗಿದ್ದು, ಕೂಡಲೇ ಕೆಲಸ ಆರಂಭಿಸಬೇಕು. ವಡಗೇರಾ ಸಕ್ಕರೆ ಕಾರ್ಖಾನೆ ಕಬ್ಬು ನೀಡಿದ ರೈತರ ಬಿಲ್ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಖಾತೆಗೆ ಜಮೆ ಮಾಡಬೇಕು. ತಾಲೂಕಿನಲ್ಲಿ ಭೂಸೇನೆಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಹಣ ಲೂಟಿ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಲೂಟಿ ಮಾಡಿದ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಮೇಶಬಾಬು ವಕೀಲ, ರೌಫ್ ಹವಾಲ್ದಾರ್, ದಂಡಪ್ಪ ಸಾಹು ಕುರಳಗೇರಾ, ಬಸವರಾಜ ಪಾಟೀಲ್ ನರಿಬೋಳ, ಬಸವರಾಜ ಪಾಟೀಲ್ ಬಳಬಟ್ಟಿ, ಬಸವರಾಜ ಮಾಲಿಪಾಟೀಲ್ ಅರಳಗುಂಡಗಿ, ಶಿವಾನಂದ ದ್ಯಾಮಗೊಂಡ, ಧಮುರ್ ಜೋಗೂರ, ಬಾಪುಗೌಡ ವಿಭೂತಿ, ಸಿದ್ದಣ್ಣ ಹೂಗಾರ, ಗೊಲ್ಲಾಳಪ್ಪ ಮಾಗಣಗೇರಾ, ಗೊಲ್ಲಾಳಪ್ಪ ಕಡಿ, ನಾನಾಗೌಡ ಅಲ್ಲಾಪುರ, ಸಿದ್ದಣ್ಣ ಗಡ್ಡದ, ಭೀಮರಾಯ ಮಡಿವಾಳ, ಹಳ್ಳೆಮ್ಮ ಗೌಡತಿ ಮಲ್ಲಾಬಾದ್, ವಿಜಯಲ್ಮ ಆಂದೋಲಾ, ಸರೋಜಿನಿ ಮಯೂರ, ಈರಣ್ಣ ಅವರಾದ, ರವಿ ಪಡಶೆಟ್ಟಿ, ರಾಕೇಶ ಹರಸೂರ, ಬಸವರಾಜ ಮಡಿವಾಳ ಇತರರಿದ್ದರು.
ಅಖಂಡೇಶ್ವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಎತ್ತಿನ ಬಂಡಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಕ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
