[ಜಿ ಎಂ ಬಸಯ್ಯ]
ಕುರುಗೋಡು, ಆಗಸ್ಟ್ 6: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ನಾಡಿನಾದ್ಯಂತ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಗಮವಾಗಲಿ ಎಂಬ ಉದ್ದೇಶದಿಂದ ಕುರುಗೋಡು ಪಟ್ಟಣದ ಆರಾಧ್ಯ ದೈವ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪಾರ್ಜನ್ಯ ಹೋಮ, ಹವನ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮೊದಲು ಶ್ರೀ ಗಣಪತಿ ದೇವರಿಗೆ ಸಂಕಲ್ಪ ನೆರವೇರಿಸಲಾಯಿತು. ಬಳಿಕ ವಿವಿಧ ವಾದ್ಯಗಳ ನಿನಾದದ ನಡುವೆ ವೈದಿಕ ಮಂತ್ರೋಚ್ಚಾರಣೆಯೊಂದಿಗೆ ಪಾರ್ಜನ್ಯ ಹೋಮ, ಹವನ ಮತ್ತು ಶ್ರೀ ದೊಡ್ಡ ಬಸವೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ವರುಣ ದೇವರ ಕೃಪೆಗಾಗಿ ಪ್ರಾರ್ಥಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಳು ಆನಂದ ಮಾತನಾಡಿ, “ಪ್ರತಿ ವರ್ಷ ದೇವರ ಕೃಪೆಯಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಕೆಲವರು ಜೀವನೋಪಾಯಕ್ಕಾಗಿ ವಲಸೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಲಿ ಎಂಬ ಉದ್ದೇಶದಿಂದ ಪಾರ್ಜನ್ಯ ಹೋಮ ಹಾಗೂ ವಿಶೇಷ ಪೂಜೆ ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕರು, ಪುರೋಹಿತರು, ಆಡಳಿತ ಮಂಡಳಿಯ ಸದಸ್ಯರು, ಪಟ್ಟಣದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆಂಜೀನೆಯಲು ಮಾತನಾಡಿ, “ಸಂಪ್ರದಾಯದಂತೆ ಮಳೆ ಕೊರತೆಯ ಸಂದರ್ಭದಲ್ಲಿ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಮತ್ತು ಪಾರ್ಜನ್ಯ ಹೋಮವನ್ನು ನೆರವೇರಿಸಿ, ನಾಡಿನಾದ್ಯಂತ ಉತ್ತಮ ಮಳೆ ಸುರಿದು ರೈತರು ಸಮೃದ್ಧ ಬೆಳೆ ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ” ಎಂದು ಹೇಳಿದರು.
