[ವರದಿ: ಶಿವರಾಜ್ ಕನ್ನಡಿಗ ]
ಕೊಟ್ಟೂರು: ಅಪಾರ ಭಕ್ತಿ, ಶ್ರದ್ಧೆ ಹಾಗೂ ನಿಷ್ಕಾಮ ಸೇವೆಗೆ ಮತ್ತೊಂದು ಹೆಸರು ‘ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಗದ್ದುಗೆ’. ಈ ಪವಿತ್ರ ಸನ್ನಿಧಿಯಲ್ಲಿ ಭಕ್ತಿಯ ಸಿಹಿಯುಣ್ಣಿಸುವ ಅಪೂರ್ವ ಸೇವೆಯೊಂದು ಸಂಭ್ರಮದಿಂದ ನೆರವೇರಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ಕೊಟ್ಟೂರೇಶ್ವರ ಭಕ್ತ ಮಂಡಳಿಯ ಆಶ್ರಯದಲ್ಲಿ, ಗ್ರಾಮಸ್ಥರೆಲ್ಲರೂ ಸ್ವತಃ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಬೃಹತ್ ಮಟ್ಟದ ‘ಹೋಳಿಗೆ ಪ್ರಸಾದ’ ಸೇವೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿಕೊಟ್ಟಿದ್ದಾರೆ.
ಊರಿನ ಒಗ್ಗಟ್ಟು, ಭಕ್ತಿಯ ಪ್ರತಿಫಲ!
ಪ್ರತಿ ವರ್ಷದಂತೆ ಈ ಬಾರಿಯೂ ಶಿಗ್ಲಿ ಗ್ರಾಮದ ನೂರಾರು ಭಕ್ತಾದಿಗಳು ಕೊಟ್ಟೂರಿನ ಮಠಕ್ಕೆ ಆಗಮಿಸಿ, ನಿರಂತರವಾಗಿ ಪರಿಶ್ರಮ ವಹಿಸಿ ಸ್ವಹಸ್ತದಿಂದ ಲಕ್ಷಾಂತರ ಹೋಳಿಗೆಗಳನ್ನು ತಯಾರಿಸಿದ್ದಾರೆ. ಗ್ರಾಮದ ಪ್ರತಿಯೊಬ್ಬರೂ ಜಾತಿ-ಮತದ ಭೇದ ಮರೆತು, ಈ ಪ್ರಸಾದ ಸೇವೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಾವಿರಾರು ಭಕ್ತರಿಗೆ ಸಿಹಿ ದಾಸೋಹ: ನಾಡಿನ ಮೂಲೆ ಮೂಲೆಗಳಿಂದ ಕೊಟ್ಟೂರೇಶನ ದರ್ಶನಕ್ಕೆ ಆಗಮಿಸಿದ ಅಪಾರ ಜನಸ್ತೋಮಕ್ಕೆ ಅತ್ಯಂತ ಪ್ರೀತಿಯಿಂದ, ಶ್ರದ್ಧೆಯಿಂದ ಹೋಳಿಗೆ ಹಾಗೂ ಊಟದ ಪ್ರಸಾದವನ್ನು ವಿತರಿಸಲಾಯಿತು.
ಭಕ್ತರ ಹರ್ಷ: ಕೊಟ್ಟೂರೇಶನ ಕೃಪೆ ಮತ್ತು ಶಿಗ್ಲಿ ಗ್ರಾಮಸ್ಥರ ಈ ಅಪಾರ ದಾಸೋಹ ಸೇವೆಯನ್ನು ಕಂಡು ಸ್ವಾಮಿಯ ದರ್ಶನಕ್ಕೆ ಬಂದ ಭಕ್ತಾದಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿ, ದಾಸೋಹ ಸೇವಕರನ್ನು ಹಾರೈಸಿದರು.
”ಕಾಯಕವೇ ಕೈಲಾಸ, ದಾಸೋಹವೇ ಪರಮಧರ್ಮ” ಎಂಬ ಶರಣರ ತತ್ವದಂತೆ, ಶಿಗ್ಲಿ ಗ್ರಾಮಸ್ಥರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕೈಗೊಂಡ ಈ ಹೋಳಿಗೆ ಪ್ರಸಾದ ಸೇವೆ ಇಡೀ ನಾಡಿಗೆ ಭಕ್ತಿ ಮತ್ತು ಒಗ್ಗಟ್ಟಿನ ಮಾದರಿಯಾಗಿ ಕಂಗೊಳಿಸಿತು. ‘ಹರ ಹರ ಮಹಾದೇವ’, ‘ಶ್ರೀ ಗುರು ಕೊಟ್ಟೂರೇಶ ಸಿದ್ಧೇಶ್ವರ ಮಹಾರಾಜ್ ಕಿ ಜೈ’ ಎಂಬ ಭಕ್ತರ ಜಯಘೋಷಗಳು ದೇವಾಲಯದ ಆವರಣದಲ್ಲಿ ಮಾರ್ದನಿಸಿದವು.
