[ವರದಿ : ಜಿ ಎಂ ಬಸಯ್ಯ]
ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ತಳವಾರ ಪೇಟೆಯಲ್ಲಿ ಮಹಾದೇವಪ್ಪ ತಾತ, ಪಂಪನಗೌಡ ತಾತ ಹಾಗೂ ಸುಂಕಪ್ಪ ತಾತನವರ ಆವರಣದಲ್ಲಿ ತ್ರಿಮೂರ್ತಿಗಳ 15ನೇ ವರ್ಷದ ಉರುಸು ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಜರುಗಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಎನ್. ವೀರುಪಾಕ್ಷಪ್ಪ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ತ್ರಿಮೂರ್ತಿಗಳ ಉರುಸು ಹಾಗೂ ಧಾರ್ಮಿಕ ಆಚರಣೆಗಳನ್ನು ಹಲವು ಅವಿಭಕ್ತ ಕುಟುಂಬಗಳು ಒಗ್ಗಟ್ಟಿನಿಂದ ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ನೆಮ್ಮದಿ, ಸಂತೋಷ ಹಾಗೂ ಸೌಹಾರ್ದತೆ ಮೂಡುತ್ತದೆ ಎಂದು ಹೇಳಿದರು.
ಉರುಸು ಅಂಗವಾಗಿ ಆವರಣದಲ್ಲಿ ವಿಶೇಷ ಹೂವಿನ ಅಲಂಕಾರ, ಗಂಧಾಭಿಷೇಕ, ಜಿಯಾರತ್ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ತ್ರಿಮೂರ್ತಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ದಿವಂಗತ ಮಹಾದೇವಪ್ಪ ತಾತನವರ ಮನೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವಯುತ ಮೆರವಣಿಗೆ ನಡೆಯಿತು. ಭಕ್ತರ ಜಯಘೋಷಗಳೊಂದಿಗೆ ಮೆರವಣಿಗೆಯು ದರ್ಗಾ ಆವರಣಕ್ಕೆ ಆಗಮಿಸಿ ಸಂಪನ್ನಗೊಂಡಿತು.
ಕಳೆದ ಮೂರು ದಿನಗಳಿಂದ ಭಕ್ತರು ವಿವಿಧ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಉರುಸು ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳ ಸಡಗರವನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಸದಾಶಿವಗೌಡ, ಸುಂಕಪ್ಪ ಕೋಳೂರು, ಸುಣುಗಾರ ಹನುಮಂತಪ್ಪ, ನಾಯಕರ ಮಲ್ಲಪ್ಪ, ಪೊತಲಿಂಗಪ್ಪ, ಕುಡಿತಿನಿ ನಾಗರಾಜ, ಜೆಡಿಮೂರ್ತಿ, ಮಹೇಶ್, ಹೊಸಮನಿ ರಾಜಪ್ಪ, ಶೇಖಣ್ಣ, ರಾಜಪ್ಪ, ಶೇಷವಲಿ, ಕಾಗಿ ವೀರಣ್ಣ, ಮುದಿಯಪ್ಪ, ಶಿವಗಂಗಮ್ಮ, ಪಾರ್ವತಮ್ಮ, ರಮೇಶ್ ಸೇರಿದಂತೆ ಬಳ್ಳಾಪುರ, ರಾಮಚಂದ್ರಪುರ, ನೆಲ್ಲುಡಿ, ಶಂಕರ್ಸಿಂಗ್ ಕ್ಯಾಂಪ್, ಶಾಂತಿನಗರ, ಜಡೇಶನಗರ, ಗುತ್ತಿಗನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
