ಬೆಂಗಳೂರು, ನ. 11:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ಟೇಬಲ್ಗಳು ಇನ್ಮುಂದೆ ಹಳೆಯ ಕಾಲದ ಮೆಟಲ್ ವಿಸಿಲ್ ಚೈನ್ ಬದಲಾಗಿ ನೂತನ ಖಾಕಿ ಬಣ್ಣದ ವಿಸಿಲ್ ಗಾರ್ಡ್ ಅಳವಡಿಸಿಕೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಸಮವಸ್ತ್ರದ ಗುಣಮಟ್ಟ ಮತ್ತು ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮಹತ್ವದ ಬದಲಾವಣೆಗೆ ಇಲಾಖೆ ಮುಂದಾಗಿದೆ.
ರಾಜ್ಯ ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಹಲವು ವರ್ಷಗಳಿಂದ ಬಳಕೆಯಾಗುತ್ತಿರುವ ಮೆಟಲ್ ವಿಸಿಲ್ ಚೈನ್ಗಳು ಹವಾಮಾನ ವೈಪರೀತ್ಯ ಹಾಗೂ ನಿರಂತರ ಬಳಕೆಯಿಂದ ತುಕ್ಕು ಹಿಡಿದು ಬೇಗನೆ ಹಾಳಾಗುತ್ತಿವೆ. ಈ ತುಕ್ಕು ಸಮವಸ್ತ್ರಕ್ಕೆ ಹರಡಿ ಕಲೆಗಳನ್ನು ಉಂಟುಮಾಡುವುದಲ್ಲದೆ, ಬಟ್ಟೆಯ ಮೇಲೆ ಶಾಶ್ವತವಾಗಿ ಅಂಟಿಕೊಂಡು ಸಮವಸ್ತ್ರದ ಅಂದವನ್ನು ಹಾಳುಮಾಡುತ್ತಿದೆ. ಅಲ್ಲದೆ, ತುಕ್ಕು ಹಿಡಿದ ಲೋಹದ ಭಾಗಗಳು ದೇಹದ ಸಂಪರ್ಕಕ್ಕೆ ಬರುವುದರಿಂದ ಚರ್ಮರೋಗ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ಹಳೆಯ ಮೆಟಲ್ ವಿಸಿಲ್ ಚೈನ್ಗಳ ಬದಲಿಗೆ ಆರೋಗ್ಯಕ್ಕೆ ಅನುಕೂಲಕರವಾದ ಹಾಗೂ ಸಮವಸ್ತ್ರಕ್ಕೆ ಹೊಂದಿಕೆಯಾಗುವ ವಿಸಿಲ್ ಗಾರ್ಡ್ಗಳನ್ನು ಅಳವಡಿಸುವ ಅಗತ್ಯವಿದೆ ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿತ್ತು.
ದೇಶದ ಇತರೆ ರಾಜ್ಯಗಳ ಪೊಲೀಸ್ ಇಲಾಖೆಗಳು ಈಗಾಗಲೇ ಈ ಸಮಸ್ಯೆಯನ್ನು ಮನಗಂಡು ತಮ್ಮ ಸಿಬ್ಬಂದಿಗಳ ಸಮವಸ್ತ್ರದಲ್ಲಿರುವ ಮೆಟಲ್ ವಿಸಿಲ್ ಚೈನ್ಗಳನ್ನು ಬದಲಿಸಿವೆ. ಕೆಲವು ರಾಜ್ಯಗಳಲ್ಲಿ ಖಾಕಿ ಬಣ್ಣದ ವಿಸಿಲ್ ಗಾರ್ಡ್ಗಳನ್ನು ಅಳವಡಿಸಿದ್ದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ನೀಲಿ ಬಣ್ಣದ ವಿಸಿಲ್ ಗಾರ್ಡ್ಗಳನ್ನು ಬಳಕೆಗೆ ತರಲಾಗಿದೆ. ಇದರ ಜೊತೆಗೆ ಸಮವಸ್ತ್ರಕ್ಕೆ ಹೊಂದಿಕೆಯಾಗುವ ಮ್ಯಾಟ್ ಫಿನಿಶ್ ಬಟನ್ಗಳನ್ನೂ ಅಳವಡಿಸಿಕೊಂಡಿವೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೂ ಅಗತ್ಯ ಬದಲಾವಣೆಗಳನ್ನು ತರಬೇಕು ಎಂಬ ಉದ್ದೇಶದಿಂದ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ವಿಶೇಷ ಆಸಕ್ತಿ ವಹಿಸಿ ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ನಿರಂತರವಾಗಿ ಪತ್ರಗಳನ್ನು ಬರೆದು ಒತ್ತಾಯಿಸಿದ್ದರು. ದೇಶದ ಇತರೆ ರಾಜ್ಯಗಳ ಪೊಲೀಸ್ ಇಲಾಖೆಗಳು ತಮ್ಮ ಸಿಬ್ಬಂದಿಗಳ ಸಮವಸ್ತ್ರದಲ್ಲಿ ವಿಸಿಲ್ ಗಾರ್ಡ್ ಹಾಗೂ ಮ್ಯಾಟ್ ಫಿನಿಶ್ ಬಟನ್ಗಳನ್ನು ಅಳವಡಿಸಿಕೊಂಡಿರುವ ಛಾಯಾಚಿತ್ರಗಳನ್ನು ಪತ್ರಗಳೊಂದಿಗೆ ಲಗತ್ತಿಸಿ, ಕರ್ನಾಟಕದಲ್ಲಿಯೂ ಇಂತಹ ಬದಲಾವಣೆಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದ್ದರು.

ಪೊಲೀಸ್ ಸಿಬ್ಬಂದಿಗಳು ಪ್ರತಿದಿನ ಕರ್ತವ್ಯದ ವೇಳೆ ಸಮವಸ್ತ್ರ ಧರಿಸುವುದರಿಂದ ಅದರ ನಿರ್ವಹಣೆ, ಗುಣಮಟ್ಟ ಹಾಗೂ ಸಿಬ್ಬಂದಿಗಳ ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳೂ ದೀರ್ಘಾವಧಿಯಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಹಳೆಯ ಮೆಟಲ್ ವಿಸಿಲ್ ಚೈನ್ನಿಂದ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಿ, ಸಿಬ್ಬಂದಿಗಳಿಗೆ ಅನುಕೂಲಕರವಾದ ವಿಸಿಲ್ ಗಾರ್ಡ್ ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಮೋಹನ್ ಕುಮಾರ್ ದಾನಪ್ಪ ಅವರು ತಮ್ಮ ಮನವಿಗಳಲ್ಲಿ ಗಮನ ಸೆಳೆದಿದ್ದರು.
ಈ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಸಿಬ್ಬಂದಿಗಳ ಸಮವಸ್ತ್ರದಲ್ಲಿ ವಿಸಿಲ್ ಗಾರ್ಡ್ ಅಳವಡಿಸುವ ಕುರಿತು ಘೋಷಣೆ ಮಾಡಿದ್ದು, ಇದೀಗ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಪ್ರಸ್ತುತ ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ ನೀಡಲಾಗಿರುವ ನೇವಿ ಬ್ಲೂ ಬಣ್ಣದ ಪೀಕ್ಸ್ ಕ್ಯಾಪ್ಗೆ ಹೊಂದಾಣಿಕೆಯಾಗುವ ಬಣ್ಣದ ಅಥವಾ ಇಲಾಖೆಯು ಸೂಕ್ತವೆಂದು ಆಯ್ಕೆ ಮಾಡುವ ಬಣ್ಣದ ವಿಸಿಲ್ ಗಾರ್ಡ್ಗಳನ್ನು ಒದಗಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇದರಿಂದ ಪೊಲೀಸ್ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಏಕರೂಪತೆ ಕಾಪಾಡುವುದರ ಜೊತೆಗೆ ಹಳೆಯ ಮೆಟಲ್ ವಿಸಿಲ್ ಚೈನ್ನಿಂದ ಉಂಟಾಗುತ್ತಿದ್ದ ತುಕ್ಕಿನ ಸಮಸ್ಯೆ ಹಾಗೂ ಸಮವಸ್ತ್ರದ ಹಾನಿಯನ್ನು ತಡೆಯಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ.
ತಮ್ಮ ನಿರಂತರ ಮನವಿ ಹಾಗೂ ಪ್ರಯತ್ನಗಳನ್ನು ಪರಿಗಣಿಸಿ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಮತ್ತು ಅನುಕೂಲದ ದೃಷ್ಟಿಯಿಂದ ಈ ಮಹತ್ವದ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ಮೋಹನ್ ಕುಮಾರ್ ದಾನಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳ ದೈನಂದಿನ ಕರ್ತವ್ಯಕ್ಕೆ ಅನುಕೂಲವಾಗುವಂತೆ ಸಮವಸ್ತ್ರದಲ್ಲಿ ಬದಲಾವಣೆ ತರಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಂದಾಗಿರುವುದು ಸಿಬ್ಬಂದಿಗಳ ಹಿತದೃಷ್ಟಿಯಿಂದ ಸ್ವಾಗತಾರ್ಹ ಕ್ರಮವಾಗಿದೆ.
