(ವರದಿ: ಜಿಎಂ ಪುಷ್ಪವತಿ ಬಸಯ್ಯ)
ಕಂಪ್ಲಿ ತಾಲೂಕು: ಮಕ್ಕಳ ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದೇ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅಪರಂಜಿ ಹೇಳಿದರು.

ತಾಲೂಕಿನ ನೆಲ್ಲುಡಿ ಗ್ರಾಮದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಹಾಗೂ ನೆಲ್ಲುಡಿ ಗ್ರಾಮ ಪಂಚಾಯತಿ ಸಂಯುಕ್ತವಾಗಿ ಗ್ರಂಥಾಲಯದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು, ಅಂಕಿ-ಸಂಖ್ಯೆ ಹಾಗೂ ವಿಜ್ಞಾನ ಸಂಬಂಧಿತ ವಿಷಯಗಳ ಅರಿವು ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಯೋಜನೆ ರೂಪಿಸುವುದು, ಕೌಶಲಾಭಿವೃದ್ಧಿ ಸಾಧಿಸುವುದು ಹಾಗೂ ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ವಿಜ್ಞಾನ ಮತ್ತು ಗಣಿತ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ಶಿಕ್ಷಕರು ಹಾಗೂ ಸ್ವಯಂಪ್ರೇರಿತ ಸಂಪನ್ಮೂಲ ವ್ಯಕ್ತಿಗಳ ಸಹಕಾರ ಪಡೆಯಲಾಗುತ್ತದೆ ಎಂದು ಹೇಳಿದರು. ಜೊತೆಗೆ, ಗ್ರಂಥಾಲಯದ ಬಳಕೆ ಕುರಿತು ಪರಿಚಯ ನೀಡಿ ಮಕ್ಕಳಲ್ಲಿ ಓದು ಮತ್ತು ಬರವಣಿಗೆಯ ಸಾಮರ್ಥ್ಯವನ್ನು ವೃದ್ಧಿಸುವತ್ತ ವಿಶೇಷ ಗಮನ ಹರಿಸಲಾಗುವುದು ಎಂದರು.
ತಾಲೂಕಿನ ಹಿರಿಯ ಗ್ರಂಥಪಾಲಕ ಎಚ್. ಅಮರೇಶ ಗೌಡ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಮತ್ತು ಕ್ರಿಯಾಶೀಲತೆ ಬೆಳೆಸುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ಪೋಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಅತಿಥಿ ಶಿಕ್ಷಕ ಸಿದ್ದನಗೌಡ, ಗ್ರಂಥಪಾಲಕ ಅಮರೇಶ್ ಗೌಡ ಹಾಗೂ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
