Thursday, April 16, 2026
HomeDistrictsBallariನೀರು ಕೇಳಿದರೆ ‘ಇಲ್ಲ’ ಎನ್ನಬೇಡಿ: ಹಂಪಿ ಸಾವಿರ ಮಠ ಸ್ವಾಮೀಜಿ ಸಲಹೆ

ನೀರು ಕೇಳಿದರೆ ‘ಇಲ್ಲ’ ಎನ್ನಬೇಡಿ: ಹಂಪಿ ಸಾವಿರ ಮಠ ಸ್ವಾಮೀಜಿ ಸಲಹೆ

(ವರದಿ: ಬಸಯ್ಯ ಜಿಎಂ)
ಕಂಪ್ಲಿ, ಏಪ್ರಿಲ್ 16: ರಾಜ್ಯದಲ್ಲಿ ಉರಿಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ, ನೀರಿನ ಮಹತ್ವವನ್ನು ಮನಗಾಣಿಸಿ ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಂಪಿ ಸಾವಿರ ಮಠದ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ಮಠದಲ್ಲಿ ಸ್ವಾಮೀಜಿಯವರ ಹುಟ್ಟುಹಬ್ಬದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ 33 ವರ್ಷಗಳ ನಂತರ ದಾಖಲೆ ಮಟ್ಟದ ಬಿಸಿಲು ಕಾಣಿಸಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉರಿ ಬಿಸಿಲಿನ ತೀವ್ರತೆಗೆ ಜಲಚರಗಳು ಕೂಡ ಸಂಕಷ್ಟ ಅನುಭವಿಸುತ್ತಿದ್ದು, ನೀರಿನ ಅಭಾವ ಗಂಭೀರವಾಗುತ್ತಿದೆ ಎಂದು ಹೇಳಿದರು.

ಬದಲಾಗುತ್ತಿರುವ ಹವಾಮಾನದಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗುತ್ತಿದ್ದು, ಮೇ ತಿಂಗಳೊಳಗೆ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಈಗಾಗಲೇ ನದಿಗಳು, ಹಳ್ಳಗಳು ಮತ್ತು ಬೋರ್‌ವೆಲ್‌ಗಳು ಒಣಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ನೀರಿನ ತೀವ್ರ ಕೊರತೆ ಎದುರಾಗುತ್ತಿದೆ ಎಂದು ಎಚ್ಚರಿಸಿದರು.

ಉರಿಬಿಸಿಲಿನ ಪರಿಣಾಮ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳೂ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಯಾರೇ ನೀರು ಕೇಳಿದರೂ ‘ಇಲ್ಲ’ ಎಂದು ಹೇಳದೆ ಸಹಾಯ ಮಾಡಬೇಕು. ಮನೆಗಳ ಮುಂದೆ ನೆರಳಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಅಗತ್ಯ ಎಂದು ತಿಳಿಸಿದರು.

ಬಿಸಿಲಿನ ತೀವ್ರತೆಯಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುವ ಕಾರಣ, ಜನರು ಅಗತ್ಯವಿಲ್ಲದೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು. ಹೆಚ್ಚು ನೀರು, ಹಣ್ಣು ಹಾಗೂ ಪಾನೀಯಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯದ ಮೇಲೂ ಕಾಳಜಿ ವಹಿಸುವುದು ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವರರುದ್ರ ಮುನಿ ಶಿವಾಚಾರ್ಯರು (ಮಸ್ಕಿ), ಅಭಿನವ ಸಿದ್ದಲಿಂಗ ಶಿವಾಚಾರ್ಯರು (ಅರಗಿನದೋಣಿ), ಶರಣಬಸವ ಶರಣರು (ಕುರಕುಪ್ಪ), ಕೊಟ್ರಯ್ಯ ತಾತ (ನೆಲ್ಲೂಡಿ) ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments