[ವರದಿ : ಬಸಯ್ಯ ಜಿಎಂ]
ಕುರುಗೋಡು ಸಮೀಪದ ಕುಡಿತಿನಿ ಪಟ್ಟಣದಲ್ಲಿ ರೈತರ ಹೋರಾಟ ದಿನೇ ದಿನೇ ತೀವ್ರಗೊಂಡಿದ್ದು, ಮಹಿಳೆಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸುವ ಮೂಲಕ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಸೇರಿಸಿದ್ದಾರೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಿರುವುದನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ಹಲವು ರೈತರನ್ನು ಬಂಧಿಸಿದ ಘಟನೆ ನಡೆದಿದೆ.
ಕಳೆದ ಮೂರು ವರ್ಷಗಳಿಂದ ನಿರಂತರ ಧರಣಿ ನಡೆಸುತ್ತಿರುವ ರೈತರು, ಹನ್ನೆರಡು ನೂರು ದಿನಗಳು ಕಳೆದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾ ಪರಿವರ್ತನ ವೇದಿಕೆ ಜಿಲ್ಲಾ ಅಧ್ಯಕ್ಷ ಸಿ. ಆನಂದ ಕುಮಾರ್ ಮಾತನಾಡಿ, “ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ” ಎಂದು ಹೇಳಿದ್ದಾರೆ.
ಸುಮಾರು ಹದಿಮೂರು ವರ್ಷಗಳ ಹಿಂದೆ ಕಾರ್ಖಾನೆ ಸ್ಥಾಪನೆ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡಿದ್ದರೂ, ಇಂದಿಗೂ ಯಾವುದೇ ಕಾರ್ಖಾನೆ ಸ್ಥಾಪನೆ ಮಾಡಲಾಗಿಲ್ಲ. ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆ ಕೂಡ ಈಡೇರಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಸತ್ಯಾಗ್ರಹ ರೂಪದಲ್ಲಿ ಹೋರಾಟ ಮುಂದುವರಿಸಿರುವ ರೈತರು, ಸರ್ಕಾರ ಮತ್ತು ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲವೆಂದು ದೂರಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರು ಇಂಜಕ್ಷನ್ ಆದೇಶದಡಿ ಕ್ರಮ ಕೈಗೊಂಡು, ರೈತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದಿರುವುದಾಗಿ ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸರ್ಕಾರದ ದರ್ಪ ಮತ್ತು ಅಹಂಕಾರ ರೈತರ ಮೇಲೆ ತೋರಿಸಲಾಗುತ್ತಿದೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತವು ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಿತ್ತು. ಈ ವೇಳೆ ಕುಡಿತಿನಿ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ರೈತರು, ಮಹಿಳೆಯರು ಹಾಗೂ ಮುಖಂಡರು ಭಾಗವಹಿಸಿದ್ದರು.
