Wednesday, April 15, 2026
HomeDistrictsBengaluru Cityಬೇಸಿಗೆ ರಜೆಯಲ್ಲಿ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಳ – ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆಗೆ ಡಿಜಿಪಿಗೆ ಮನವಿ

ಬೇಸಿಗೆ ರಜೆಯಲ್ಲಿ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಳ – ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆಗೆ ಡಿಜಿಪಿಗೆ ಮನವಿ

ಬೆಂಗಳೂರು, ಮಾ.15:
ರಾಜ್ಯದಲ್ಲಿ ಬೇಸಿಗೆ ರಜೆ ಹಿನ್ನೆಲೆ ಅಪ್ರಾಪ್ತರ ವಾಹನ ಚಾಲನೆ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಂಭವನೀಯ ಅಪಘಾತಗಳನ್ನು ತಡೆಗಟ್ಟಲು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ಹಾಗೂ ವ್ಯಾಪಕ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮನವಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಡಿಜಿಪಿಗೆ ಸವಿಸ್ತಾರ ಪತ್ರ ಬರೆದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಮೋಟಾರ್ ವಾಹನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ದಂಡನೀಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಈ ನಿಯಮವನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಶಾಲೆ ಮತ್ತು ಕಾಲೇಜುಗಳಿಗೆ ಬೇಸಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಅಪ್ರಾಪ್ತರು ಖಾಲಿ ಸಮಯವನ್ನು ಅಜಾಗರೂಕವಾಗಿ ಬಳಸುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಷ್ಟೇ ಅಲ್ಲದೆ ನಗರ ಪ್ರದೇಶಗಳು, ಉಪನಗರಗಳು, ನಿರ್ಜನ ಪ್ರದೇಶಗಳು ಮತ್ತು ಖಾಲಿ ಲೇಔಟ್‌ಗಳಲ್ಲಿ ಸಹ ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ. ವೀಲಿಂಗ್, ಟ್ರಿಪಲ್ ರೈಡಿಂಗ್, ವೇಗ ಮಿತಿ ಮೀರಿ ಚಲಿಸುವುದು, ಅಡ್ಡದಿಡ್ಡಿ ಚಾಲನೆ ಮಾಡುವಂತಹ ಅಪಾಯಕಾರಿ ಚಟುವಟಿಕೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರ ಜೀವಭದ್ರತೆ ಅಪಾಯಕ್ಕೆ ಒಳಗಾಗುತ್ತಿದೆ.

ಇದಲ್ಲದೆ, ಅಪ್ರಾಪ್ತರಿಗೆ ಸಂಚಾರ ನಿಯಮಗಳು ಮತ್ತು ಕಾನೂನುಗಳ ಬಗ್ಗೆ ಸಮರ್ಪಕ ಅರಿವು ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ತಮ್ಮ ಜೀವದ ಜೊತೆಗೆ ಇತರರ ಜೀವಕ್ಕೂ ಅಪಾಯ ಉಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ಪೋಷಕರೇ ಮಕ್ಕಳಿಗೆ ವಾಹನ ಚಾಲನೆ ಕಲಿಸುವುದು, ಹಿಂಬದಿ ಕುಳಿತು ಸಾರ್ವಜನಿಕ ರಸ್ತೆಗಳಲ್ಲೇ ಮಕ್ಕಳಿಗೆ ಚಾಲನೆ ಮಾಡಲು ಅವಕಾಶ ನೀಡುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ.

ಇಂತಹ ಅಜಾಗರೂಕ ಚಾಲನೆಯಿಂದ ಸಂಭವಿಸಿರುವ ಹಲವು ದುರ್ಘಟನೆಗಳನ್ನು ಉಲ್ಲೇಖಿಸಿರುವ ಅವರು, 2021ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿದ್ದ ವಾಹನದಿಂದ ಸಂಭವಿಸಿದ ಅಪಘಾತದಲ್ಲಿ ಪ್ರಾಧ್ಯಾಪಕರೊಬ್ಬರು ಮೃತಪಟ್ಟ ಪ್ರಕರಣದಲ್ಲಿ, ನ್ಯಾಯಾಲಯವು ವಾಹನ ಮಾಲೀಕರಿಂದ 1.41 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿರುವುದನ್ನು ಉದಾಹರಣೆಯಾಗಿ ನೀಡಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಅಪ್ರಾಪ್ತರು ಸ್ಟಂಟ್ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕ ಹಾಗೂ ಆತನ ತಂದೆಯ ವಿರುದ್ಧ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಘಟನೆಗೂ ಗಮನಸೆಳೆದಿದ್ದಾರೆ.

ತುಮಕೂರಿನ ಗುಬ್ಬಿ ಪ್ರದೇಶದಲ್ಲಿಯೂ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದಕ್ಕಾಗಿ ತಂದೆಗೆ ಒಂದು ದಿನ ಜೈಲು ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡ ವಿಧಿಸಿರುವುದನ್ನು ಉಲ್ಲೇಖಿಸಿ, ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಕಠಿಣ ನಿಲುವು ತಾಳುತ್ತಿದ್ದರೂ, ಅಪ್ರಾಪ್ತರು ಮತ್ತು ಪೋಷಕರು ನಿರ್ಲಕ್ಷ್ಯ ತೋರಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಕ್ಷಣ ವಿಶೇಷ ಕಾರ್ಯಾಚರಣೆ ಕೈಗೊಂಡು ಅಪ್ರಾಪ್ತರ ವಾಹನ ಚಾಲನೆಗೆ ಕಟ್ಟುನಿಟ್ಟಿನ ನಿಯಂತ್ರಣ ತರಬೇಕೆಂದು ಅವರು ಒತ್ತಾಯಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ವಾಹನ ಮಾಲೀಕರು ಮತ್ತು ಪೋಷಕರ ಮೇಲೆಯೂ ಜವಾಬ್ದಾರಿ ನಿಗದಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಕೇವಲ ದಂಡಾತ್ಮಕ ಕ್ರಮಗಳಷ್ಟೇ ಅಲ್ಲದೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿರುವ ಅವರು, ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳು, ಸಾಮಾಜಿಕ ಜಾಲತಾಣಗಳು, ಎಫ್‌ಎಂ ರೇಡಿಯೋ, ಸ್ಥಳೀಯ ಹಾಗೂ ರಾಷ್ಟ್ರೀಯ ಟಿವಿ ವಾಹಿನಿಗಳು ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ನಿರಂತರ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ವಿಶೇಷವಾಗಿ ಪೋಷಕರಲ್ಲಿ ಕಾನೂನು ಅರಿವು ಮೂಡಿಸಿ, ಮಕ್ಕಳ ಸುರಕ್ಷತೆ ಬಗ್ಗೆ ಹೊಣೆಗಾರಿಕೆ ಬೆಳೆಸುವ ಕಾರ್ಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತರ ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಸರ್ಕಾರ, ಪೊಲೀಸ್ ಇಲಾಖೆ, ಪೋಷಕರು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಈ ಪತ್ರದ ಸಾರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments