ಬಿಸಿಲಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮತ್ತೆ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. 11 ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾತ್ರ ಭಾರಿ ಮಳೆ ಅಲರ್ಟ್ ಕೊಡಲಾಗಿದೆ. ಮಳೆ ಜೊತೆಗೆ ಬಿರುಗಾಳಿ, ಗುಡುಗು ಅಲರ್ಟ್ ಕೂಡಾ ಇದ್ದು, ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಹಾಗೂ ಮಲೆನಾಡು , ಕರಾವಳಿ ಜಿಲ್ಲೆಗಳಿಗೆ ಅಲರ್ಟ್ ಇದೆ.
- ಧಾರವಾಡ, ಗದಗ, ಹಾವೇರಿ, ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ
- ಜೂನ್ 2 ರಿಂದ ಜೂನ್ 6 ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆ
- ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರು: ಜೂನ್ 4 ಕ್ಕೆ ಖೇರಳ-ತಮಿಳುನಾಡಿಗೆ ಮುಂಗಾರು ಎಂಟ್ರಿ
ಮಳೆಗಾಲದ ತಿಂಗಳು ಶುರುವಾಗಿದ್ರೂ ರಾಜ್ಯದ ಹಲವೆಡೆ ಬಿಸಿಲು ಸುಡುತ್ತಿದೆ. ಈ ಮಧ್ಯೆ ಇಂದಿನಿಂದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಆದರೆ ಈ ಮಳೆ ಜಿಲ್ಲೆಗಳ ಒಂದೆರಡು ಸ್ಥಳಗಳಿಗೆ ಮಾತ್ರ ಸೀಮಿತ ಆಗಲಿದೆ. ಇದರ ಜೊತೆಗೆ ಜೂನ್ 4 ರಂದು ಮಾನ್ಸೂಚನ್ ಕೇರಳ ಹಾಗೂ ತಮಿಳುನಾಡಿಗೆ ಎಂಟ್ರಿ ಸಿಗುವ ಸಿಹಿಸುದ್ದಿ ಸಿಕ್ಕಿದೆ. ಕೇರಳಕ್ಕೆ ಆಗಮನವಾದ ಮುಂದಿನ 2-3 ದಿನಗಳಲ್ಲಿ ಕರ್ನಾಟಕಕ್ಕೂ ಪ್ರವೇಶ ಪಡೆಯಲಿದ್ದು, ಆರಂಭದಲ್ಲಿ ಮುಂಗಾರು ಅಬ್ಬರ ಕಡಿಮೆ ಇರಲಿದೆ.
ಎಲ್ಲೆಲ್ಲಿ ಭಾರಿ ಮಳೆ ಅಲರ್ಟ್?
ಜೂನ್ 2 ರಿಂದ ಜೂನ್ 6 ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮಳೆ ಜೊತೆಗೆ ಬಿರುಗಾಳಿ ಸಹಿತ ಗುಡುಗು ಸಿಡಿಲಿನೊಂದಿಗೆ ಮಳೆಯಾಗಲಿದ್ದು, ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆ ಕೊಡಲಾಗಿದೆ.
ಯಾವ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ?
ಕರಾವಳಿ ಜಿಲ್ಲೆಗಳಾದ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಸಾಧಾರಣ ಮಳೆ ಎಲ್ಲೆಲ್ಲಿ?
ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ವಿಜಯ ನಗರ, ಬಳ್ಳಾರಿ, ಚಿಕ್ಕಬಳ್ಳಾಪುರ , ಉತ್ತರ ಕರ್ನಾಟಕದ ಬೀದರ್ ,ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳದಲ್ಲಿಯೂ ಮುಂದಿನ 4 ದಿನ ಸಾಧಾರಣ ಮಳೆಯಾಗಲಿದೆ. ಬಳಿಕ ಜೂನ್ 7 ರಿಂದ ಮಳೆ ಪ್ರಮಾಣ ಕ್ಷೀಣಿಸಲಿದೆ ಎಂದು ಸದ್ಯದ ಹವಾಮಾನ ವರದಿ ತಿಳಿಸಿದೆ.
ಬೆಂಗಳೂರು ಹವಾಮಾನ
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ 22 ಡೊಗ್ರಿ ಸೆ. ನಿಂದ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಎಲ್ಲೆಲ್ಲಿ ಮುಂಗಾರು ಪ್ರವೇಶ?
ಜೂನ್ 4 ರ ಸುಮಾರಿಗೆ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಜೂನ್ 4 ರ ಸುಮಾರಿಗೆ ನೈಋತ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪ ದ್ವೀಪಗಳು, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳು, ನೈಋತ್ಯ, ಪಶ್ಚಿಮ ಮಧ್ಯ, ಪೂರ್ವ ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಉಳಿದ ಭಾಗಗಳಿಗೆ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎನ್ನಲಾಗಿದೆ.
