Friday, July 10, 2026
HomeDistrictsBallariಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈಜೋಡಿಸಿ

ಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈಜೋಡಿಸಿ

ಬಳ್ಳಾರಿ,ಜು.10:ಜಿಲ್ಲೆಯನ್ನು ಸಂಪೂರ್ಣ ಕ್ಷಯಮುಕ್ತ (ಟಿಬಿ) ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಕರೆ ನೀಡಿದ್ದಾರೆ.

ಕ್ಷಯರೋಗವು ‘ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ದೇಹದ ಇತರ ಭಾಗಗಳಾದ ಮೂಳೆ, ಮೆದುಳು ಹಾಗೂ ಮೂತ್ರಪಿಂಡಗಳಿಗೂ ಇದು ಹರಡಬಹುದು.

ಪ್ರಮುಖ ಲಕ್ಷಣಗಳು:
2 ವಾರಗಳಿಗಿಂತ ಹೆಚ್ಚು ಕಾಲ ಇರುವ ಕೆಮ್ಮು ಮತ್ತು ಕೆಮ್ಮಿದಾಗ ಕಫದಲ್ಲಿ ರಕ್ತ ಬೀಳುವುದು. ಮುಖ್ಯವಾಗಿ ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಜ್ವರ ಬರುವುದು ಹಾಗೂ ರಾತ್ರಿ ತೀವ್ರವಾಗಿ ಬೆವರುವುದು. ಯಾವುದೇ ನಿಖರ ಕಾರಣವಿಲ್ಲದೆ ದೇಹದ ತೂಕ ಮತ್ತು ಹಸಿವು ಗಣನೀಯವಾಗಿ ಕಡಿಮೆಯಾಗುವುದು. ನಿರಂತರ ಸುಸ್ತು ಮತ್ತು ಉಸಿರಾಡುವಾಗ ಅಥವಾ ಕೆಮ್ಮುವಾಗ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು.

ರೋಗ ಹರಡುವ ವಿಧಾನ:
ಕ್ಷಯರೋಗವು ಗಾಳಿಯ ಮೂಲಕ ಹರಡುತ್ತದೆ. ಶ್ವಾಸಕೋಶದ ಟಿಬಿ ಇರುವ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಹರಡುತ್ತವೆ. ಆ ಗಾಳಿಯನ್ನು ಆರೋಗ್ಯವಂತ ವ್ಯಕ್ತಿ ಉಸಿರಾಡಿದಾಗ ಅವರ ದೇಹಕ್ಕೆ ರೋಗಾಣು ಪ್ರವೇಶಿಸುತ್ತದೆ. ಆದರೆ, ಟಿಬಿ ಪೀಡಿತ ವ್ಯಕ್ತಿ ಬಳಸಿದ ತಟ್ಟೆ, ಲೋಟ ಅಥವಾ ಅವರು ಮುಟ್ಟಿದ ವಸ್ತುಗಳಿಂದ ಈ ರೋಗ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಚಿತ ತಪಾಸಣೆ ಮತ್ತು ಅತ್ಯಾಧುನಿಕ ಪರೀಕ್ಷೆಗಳು:
ಸರ್ಕಾರಿ ಆಸ್ಪತ್ರೆಗಳಲ್ಲಿ ಟಿಬಿ ಪತ್ತೆಗೆ ಉಚಿತ ವ್ಯವಸ್ಥೆ ಇದೆ. ಕಫದ ಪರೀಕ್ಷೆ ಮತ್ತು ಎದೆಯ ಎಕ್ಸ್-ರೇ (ಕ್ಷ-ಕಿರಣ) ಜೊತೆಗೆ, ಪ್ರಸ್ತುತ ಸಿಬಿನ್ಯಾಟ್/ಟ್ರೂನ್ಯಾಟ್ ಎಂಬ ಅತ್ಯಾಧುನಿಕ ಪರೀಕ್ಷೆ ಲಭ್ಯವಿದೆ. ಇದು ಕೆಲವೇ ಗಂಟೆಗಳಲ್ಲಿ ಟಿಬಿ ಇರುವುದನ್ನು ಪತ್ತೆ ಮಾಡುವುದಲ್ಲದೆ, ಅದಕ್ಕೆ ಯಾವ ಔಷಧಿ ಸೂಕ್ತ ಎಂಬುದನ್ನೂ ನಿಖರವಾಗಿ ತಿಳಿಸುತ್ತದೆ. ಕ್ಷಯರೋಗಕ್ಕೆ ಸಂಪೂರ್ಣ ಮತ್ತು ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದ್ದು, ಇದು ಸಂಪೂರ್ಣವಾಗಿ ವಾಸಿಯಾಗುವ ಕಾಯಿಲೆಯಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ವಿ. ಅವರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ‘ಡಾಟ್ಸ್’ ಕೇಂದ್ರಗಳ ಮೂಲಕ ಉಚಿತವಾಗಿ ಮಾತ್ರೆಗಳನ್ನು ಆರೋಗ್ಯ ಕಾರ್ಯಕರ್ತರ ಸಮ್ಮುಖದಲ್ಲೇ ನೀಡಲಾಗುತ್ತದೆ. ಸಾಮಾನ್ಯ ಟಿಬಿಗೆ ಕನಿಷ್ಠ 6 ತಿಂಗಳು ಹಾಗೂ ತೀವ್ರತೆಗೆ ಅನುಗುಣವಾಗಿ 9 ರಿಂದ 12 ತಿಂಗಳವರೆಗೆ ನಿರಂತರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಮಾತ್ರೆ ಪ್ರಾರಂಭಿಸಿದ ಕೆಲವು ವಾರಗಳಲ್ಲಿ ಗುಣಮುಖರಾದಂತೆ ಅನಿಸಿದರೂ ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆ ನಿಲ್ಲಿಸಬಾರದು. ಮಧ್ಯದಲ್ಲೇ ನಿಲ್ಲಿಸಿದರೆ ಬ್ಯಾಕ್ಟೀರಿಯಾಗಳು ಶಕ್ತಿ ಪಡೆದುಕೊಂಡು ಎಂಡಿಆರ್-ಟಿಬಿ (ಮಲ್ಟಿ ಡ್ರಗ್ ರೆಸಿಸ್ಟಂಟ್ ಟಿಬಿ) ಆಗಿ ಬದಲಾಗುತ್ತವೆ. ಇದರ ಚಿಕಿತ್ಸೆ ಅತ್ಯಂತ ಕಠಿಣ ಮತ್ತು ದೀರ್ಘವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನಿಕ್ಷಯ್ ಪೋಷಣ್ ಯೋಜನೆ: ರೂ. 1000 ಆರ್ಥಿಕ ನೆರವು
ಭಾರತ ಸರ್ಕಾರವು ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಚಿಕಿತ್ಸೆ ಮುಗಿಯುವವರೆಗೆ ಪ್ರತಿ ತಿಂಗಳು 1000 ರೂ.ಗಳನ್ನು ನೇರವಾಗಿ ರೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಿಕಿತ್ಸೆಯ ಸಮಯದಲ್ಲಿ ಮೊಟ್ಟೆ, ಹಾಲು, ಬೇಳೆಕಾಳುಗಳು, ಹಸಿರು ತರಕಾರಿ ಮತ್ತು ಹಣ್ಣುಗಳಂತಹ ಪ್ರೊಟೀನ್ ಯುಕ್ತ ಆಹಾರ ಸೇವಿಸುವುದು ಮುಖ್ಯವಾಗಿದೆ.

ತಡೆಗಟ್ಟುವ ಕ್ರಮಗಳು:
ಮಗು ಹುಟ್ಟಿದ ತಕ್ಷಣವೇ ಬಿಸಿಜಿ ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ಟಿಬಿ ಬರದಂತೆ ತಡೆಯಬಹುದು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತç ಬಳಸಬೇಕು. ಮನೆಯಲ್ಲಿ ಯಾರಿಗಾದರೂ ಟಿಬಿ ಇದ್ದರೆ, ಇತರರೂ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಮನೆಯಲ್ಲಿ ಗಾಳಿ-ಬೆಳಕು ಚೆನ್ನಾಗಿ ಆಡುವಂತೆ ನೋಡಿಕೊಳ್ಳಬೇಕು.
ನಿಮಗಾಗಲಿ ಅಥವಾ ನಿಮ್ಮ ಪರಿಚಿತರಿಗಾಗಲಿ ಇಂತಹ ಲಕ್ಷಣಗಳು ಕಂಡುಬAದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments