ಸಂಡೂರು, ಜು.04: ಕರ್ನಾಟಕ ಸರ್ಕಾರ ಇತ್ತೀಚೆಗೆ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರಿನ ಕುಟುಂಬ ಸದಸ್ಯರ ಗಣತಿ ಕಾರ್ಯ ಆರಂಭಿಸಿದ್ದು, ಈ ಪ್ರಕ್ರಿಯೆ ಸಮಗ್ರವಾಗಿ ಮತ್ತು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಬಳ್ಳಾರಿ ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ.
ಮನವಿಯಲ್ಲಿ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಗಣಿಸಿ ನ್ಯಾಯಯುತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗಿದೆ. ಸರ್ಕಾರ ಕೈಗೊಂಡಿರುವ ಗಣತಿ ಕಾರ್ಯ ಅಪೂರ್ಣವಾಗಿದ್ದು, ಹಲವಾರು ಅರ್ಹ ಮಹಿಳೆಯರು ಮತ್ತು ಕುಟುಂಬಗಳು ಸರ್ವೆಯಿಂದ ಹೊರಗುಳಿದಿದ್ದಾರೆ ಎಂದು ಸಂಘದ ಮುಖಂಡರು ದೂರಿದ್ದಾರೆ.
2007ರಲ್ಲಿ ಸರ್ಕಾರವೇ ನಡೆಸಿದ ಸರ್ವೆಯಲ್ಲಿ ಗುರುತಿಸಲ್ಪಟ್ಟಿದ್ದ ದೇವದಾಸಿ ಮಹಿಳೆಯರನ್ನು ಇದೀಗ ವಯೋಮಿತಿ ಹೇರಿ ಹೊಸ ಸರ್ವೆಯಿಂದ ಹೊರಗಿಡಲಾಗುತ್ತಿದೆ. ಈ ರೀತಿಯ ಅನ್ಯಾಯ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ನಮೂನೆ-1, ನಮೂನೆ-2 ಹಾಗೂ ನಮೂನೆ-3ರ ಅಡಿಯಲ್ಲಿ ನಡೆಯುತ್ತಿರುವ ಸರ್ವೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ, ಅರ್ಜಿ ಸಲ್ಲಿಸಿರುವ ಎಲ್ಲಾ ದೇವದಾಸಿ ಮಹಿಳೆಯರನ್ನು ವಯೋಮಿತಿ ಹೇರಿಕೆ ಇಲ್ಲದೆ ಸಮಗ್ರವಾಗಿ ಸರ್ವೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಇನ್ನೂ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪಿಂಚಣಿ (ಪೆನ್ಶನ್) ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. 2026ರ ರಾಜ್ಯ ಬಜೆಟ್‌ನಲ್ಲಿ ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ₹6,000ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಸರ್ವೆ ಪಟ್ಟಿಯಿಂದ ಕೈ ತಪ್ಪಿದ ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣಕ್ಕಾಗಿ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ಅಲ್ಲದೆ, ಎಲ್ಲಾ ಮಾಜಿ ದೇವದಾಸಿ ಮಹಿಳೆಯರಿಗೆ ₹2 ಲಕ್ಷ ಸಾಲ ಸೌಲಭ್ಯ ಮತ್ತು ಸಹಾಯಧನ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದೇವದಾಸಿ ಮಹಿಳೆಯರ ಮಕ್ಕಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಒದಗಿಸಬೇಕು. ಉದ್ಯೋಗ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ ಪ್ರತಿ ತಿಂಗಳು ₹10,000 ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಯನ್ನೂ ಸಂಘ ಮುಂದಿಟ್ಟಿದೆ.
ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡುವ ಮಾದರಿಯಲ್ಲೇ ಹೆಚ್ಚಿನ ಜಮೀನು ಹೊಂದಿರುವ ಭೂಮಾಲೀಕರಿಂದ ಜಮೀನು ವಶಪಡಿಸಿಕೊಂಡು, ಮಾಜಿ ದೇವದಾಸಿ ಮಹಿಳೆಯರಿಗೆ ತಲಾ ಐದು ಎಕರೆ ಜಮೀನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಎಲ್ಲಾ ಮಾಜಿ ದೇವದಾಸಿ ಮಹಿಳೆಯರಿಗೆ ಕೆಎಂಆರ್‌ಸಿ ನಿಧಿಯಿಂದ 80×80 ಅಳತೆಯ ನಿವೇಶನ ನೀಡಬೇಕು ಹಾಗೂ ₹12 ಲಕ್ಷ ವೆಚ್ಚದಲ್ಲಿ ಉಚಿತ ಮನೆ ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮದುವೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವ ದೇವದಾಸಿ ಮಹಿಳೆಯರ ಮಕ್ಕಳಿಗೆ ಒಂದು ವರ್ಷದೊಳಗೆ ಹಣ ಬಿಡುಗಡೆ ಮಾಡಬೇಕು. ಅಲ್ಲದೆ, ಎಲ್ಲ ಮಾಜಿ ದೇವದಾಸಿ ಮಹಿಳೆಯರಿಗೂ ಒಂದು ಬಾರಿ ಶಾಶ್ವತ ದೇವದಾಸಿ ದೃಢೀಕರಣ ಪತ್ರ ವಿತರಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಕಾರ್ಯದರ್ಶಿ ಕೊಂಡಾಪುರ ಹೆಚ್. ದುರುಗಮ್ಮ, ತಾಲೂಕು ಅಧ್ಯಕ್ಷೆ ಮಾರಮ್ಮ, ಉಪಾಧ್ಯಕ್ಷೆ ಹುಲಿಗೆಮ್ಮ, ಮಲ್ಲಮ್ಮ, ಮಹಾಲಕ್ಷ್ಮಿ, ತಾಯಮ್ಮ, ಕೆಂಚಮ್ಮ, ದುರುಗಮ್ಮ, ನೀಲಮ್ಮ, ಈರಮ್ಮ, ಹನುಮಕ್ಕ, ಬಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
