Thursday, June 4, 2026
HomeDistrictsBallariಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಬಳ್ಳಾರಿ,ಜೂ.04: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಳ್ಳಾರಿ ಜಿಲ್ಲಾದ್ಯಂತ 2026ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಸಿ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯುತವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. ಅರ್ಹ ಮತದಾರರು ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಮನೆ ಮನೆಗೆ ಖುದ್ದಾಗಿ ಬಿಎಲ್‌ಒ ಭೇಟಿ: ವಿಶಿಷ್ಟ ಪ್ರಕ್ರಿಯೆ:
ಜಿಲ್ಲೆಯಲ್ಲಿ 2026ರ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿಯೊಬ್ಬ ಮತದಾರರ ಮನೆ ಮನೆಗೂ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪ್ರತಿ ವರ್ಷ ಜನವರಿ 1ರಂದು ಮತದಾರರ ಪಟ್ಟಿಯನ್ನು ಪ್ರಕಟಿಸುತ್ತೇವೆ. ತದನಂತರ ಹೆಸರು ಸೇರ್ಪಡೆ (ನಮೂನೆ 6), ಕೈಬಿಡುವುದು (ನಮೂನೆ 7), ಸ್ಥಳಾಂತರ (ನಮೂನೆ 8) ಮತ್ತು ತಿದ್ದುಪಡಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತವೆ. ಇದು ಸಾಮಾನ್ಯವಾಗಿದ್ದು, ಪ್ರಸಕ್ತ ನಡೆಯುತ್ತಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ (ಫೇಸ್-3) ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಪರಿಷ್ಕರಣೆಯಲ್ಲಿ ಮನೆ ಮನೆಗೆ ಹೋಗುವುದಿಲ್ಲ. ಈ ವಿಶೇಷ ಅಭಿಯಾನದಲ್ಲಿ ನಮ್ಮ ಬೂತ್ ಮಟ್ಟದ ಅಧಿಕಾರಿಗಳು 1/1/2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮನೆಗೂ ಖುದ್ದಾಗಿ ಭೇಟಿ ನೀಡಿ, ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ ಎಂದು ವಿವರಿಸಿದರು.

ಜೂನ್ 30 ರಿಂದ ಜುಲೈ 21ರ ವರೆಗೆ ಬಿಎಲ್‌ಒಗಳು ಪ್ರತೀ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಿರುವ ಎರಡು ಪುಟಗಳ ‘ಎನ್ಯುಮರೇಷನ್ ಫಾರ್ಮ್’ (ನೋಂದಣಿ ನಮೂನೆ) ಅನ್ನು ಪ್ರತಿಯೊಬ್ಬ ಮತದಾರರಿಗೂ ತಲುಪಿಸಲಾಗುತ್ತದೆ. ಈ ಬಾರಿ ಇಂಗ್ಲೀಷ್ ಜೊತೆಗೆ ಕನ್ನಡದಲ್ಲೂ ಈ ಫಾರ್ಮ್ ಲಭ್ಯವಿರಲಿದೆ. ಮತದಾರರಿಂದ ಈ ಎರಡು ಫಾರ್ಮ್ಗಳನ್ನು ಭರ್ತಿ ಮಾಡಿಸಿಕೊಂಡು, ಅದರಲ್ಲಿ ಒಂದನ್ನು ಬಿಎಲ್‌ಒ ವಾಪಸ್ ಪಡೆದರೆ, ಮತ್ತೊಂದಕ್ಕೆ ಸ್ವೀಕೃತಿ ಸಹಿ ಹಾಕಿ ಮತದಾರರ ಕೈಗೆ ನೀಡಲಿದ್ದಾರೆ. ಹೆಸರು ಬಿಟ್ಟು ಹೋಗಿರುವ ಅಥವಾ ತಪ್ಪುಗಳಾಗಿರುವ ಕುರಿತು ಮತದಾರರು ಆಕ್ಷೇಪಣೆ ಅವಧಿಯಲ್ಲಿ ಈ ಸ್ವೀಕೃತಿ ಪತ್ರದೊಂದಿಗೆ ಕ್ಲೆöÊಮ್ ಮಾಡಬಹುದಾಗಿದೆ. ಬಿಎಲ್‌ಒ ಆಪ್ ಮೂಲಕ ಇಆರ್‌ಒ (ಮತದಾರರ ನೋಂದಣಾಧಿಕಾರಿ) ಅವರಿಗೆ ವಿವರಗಳನ್ನು ಸಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಎಲ್‌ಒಗಳಿಗೆ ವಹಿಸಲಾಗಿದೆ ಎಂದರು.

ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ (ಆರ್.ಪಿ.ಆಕ್ಟ್) ಸೆಕ್ಷನ್ 21ರಡಿ ಈ ವಿಶೇಷ ಪರಿಷ್ಕರಣೆಗೆ ಚಾಲನೆ ನೀಡಿದ್ದು, ಕರ್ನಾಟಕದಲ್ಲಿ ಸದ್ಯ 3ನೇ ಹಂತದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಬಾರಿಯ ಪರಿಷ್ಕರಣೆಗೆ 1/10/2026 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅಂದರೆ, ಈ ದಿನಾಂಕಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದರು.

ಪರಿಷ್ಕರಣೆ ವೇಳಾಪಟ್ಟಿ:
ಅಧಿಕಾರಿಗಳ ಅಂತಿಮ ಹಂತದ ತರಬೇತಿ ಮುಕ್ತಾಯ: ಜೂನ್ 20, 2026 ರಿಂದ ಜೂನ್ 29, 2026.
ಬಿಎಲ್‌ಒಗಳ ಮನೆ ಮನೆ ಭೇಟಿ ಮತ್ತು ಸಮೀಕ್ಷೆ: ಜೂನ್ 30, 2026 ರಿಂದ ಜುಲೈ 21, 2026.
ಹೆಚ್ಚುವರಿ ಮತಗಟ್ಟೆಗಳ ಮರುಹಂಚಿಕೆ): ಜುಲೈ 29, 2026.
ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 5, 2026.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ: ಆಗಸ್ಟ್ 5, 2026 ರಿಂದ ಸೆಪ್ಟೆಂಬರ್ 4, 2026.
ನೋಟಿಸ್ ಅವಧಿ ಮತ್ತು ಇತ್ಯರ್ಥ: ಆಗಸ್ಟ್ 5, 2026 ರಿಂದ ಅಕ್ಟೋಬರ್ 3, 2026.
ಅಂತಿಮ ಮತದಾರರ ಪಟ್ಟಿ ಅಧಿಕೃತ ಪ್ರಕಟಣೆ: ಅಕ್ಟೋಬರ್ 7, 2026 |

ದಾಖಲೆಯ ಶೇ 97.68 ರಷ್ಟು ಮ್ಯಾಪಿಂಗ್ ಯಶಸ್ವಿ:
ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥಿತ ಮ್ಯಾಪಿಂಗ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ದಾಖಲೆಯ ಯಶಸ್ಸು ಸಿಕ್ಕಿದೆ. ಕಳೆದ 2002ರ ಮತದಾರರ ಪಟ್ಟಿಯನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ ಮ್ಯಾಪಿಂಗ್ ಮಾಡುವ ಮಹತ್ವದ ಕಾರ್ಯವನ್ನು ಚುನಾವಣಾ ವಿಭಾಗ ಹಮ್ಮಿಕೊಂಡಿತ್ತು. ಈ ಪ್ರಕ್ರಿಯೆಯಡಿ ಜಿಲ್ಲೆಯ 2025ರ ಪಟ್ಟಿಯ ಅನ್ವಯ ಇರುವ ಒಟ್ಟು 12,28,958 ಮತದಾರರ ಪೈಕಿ ಬರೋಬ್ಬರಿ 12,00,463 (ಶೇ 97.68 ರಷ್ಟು) ಜನರನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ, ಅವರ ಕುಟುಂಬದವರೊAದಿಗೆ ಕೊಂಡಿ ಕಲ್ಪಿಸುವ ಕೆಲಸ ಯಶಸ್ವಿಯಾಗಿದೆ. ಇನ್ನೂ ಮ್ಯಾಪ್ ಆಗದೇ ಉಳಿದಿರುವ 28,495 ಮತದಾರರನ್ನು ಪತ್ತೆ ಹಚ್ಚಲು ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು ಎಂದರು.

ದಾಖಲೆ ಪತ್ರಗಳ ಕಡ್ಡಾಯವಿಲ್ಲ: ಸರಳ ಪ್ರಕ್ರಿಯೆ:
ಬಿಎಲ್‌ಒಗಳು ಸಾರ್ವಜನಿಕರಿಂದ ಭರ್ತಿ ಮಾಡಿದ ಫಾರ್ಮ್ಗಳನ್ನು ಸಂಗ್ರಹಿಸುವಾಗ ಯಾವುದೇ ರೀತಿಯ ಪೂರಕ ದಾಖಲಾತಿಗಳನ್ನು ಕೇಳುವುದಿಲ್ಲ. ಮತದಾರರು ನೀಡುವ ಅರ್ಜಿ ಅಪೂರ್ಣವಾಗಿದ್ದರೂ ಸಹ, ಬಿಎಲ್‌ಒಗಳೇ ಅದಕ್ಕೆ ಅಗತ್ಯವಿರುವ ಸಹಾಯವನ್ನು ಸ್ಥಳದಲ್ಲೇ ಮಾಡಲಿದ್ದಾರೆ. ಅರ್ಜಿದಾರರ ಹೆಸರು ಮತ್ತು ಸಹಿ ಇದ್ದರೆ ಸಾಕು, ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಸಲ್ಲಿಕೆಯಾಗುವ ಅರ್ಜಿಗಳು ಅಪೂರ್ಣವಾಗಿದ್ದಲ್ಲಿ, ಅಂತಹ ಸಾರ್ವಜನಿಕರಿಗೆ ಇಆರ್‌ಒ ವತಿಯಿಂದ ನೋಟಿಸ್ ಜಾರಿ ಮಾಡಲಾಗುತ್ತದೆ. ಅಪೂರ್ಣ ಮಾಹಿತಿ ಇರುವವರು ಸೂಕ್ತ ದಾಖಲೆಗಳೊಂದಿಗೆ ಪೂರ್ಣ ಮಾಹಿತಿ ನೀಡಿದ ಬಳಿಕವಷ್ಟೇ ಆಕ್ಷೇಪಣೆ ಹಾಗೂ ಹಕ್ಕುಗಳ ಪ್ರಕ್ರಿಯೆಯಡಿ ಅದನ್ನು ಇತ್ಯರ್ಥಪಡಿಸಲಾಗುವುದು. ಬಿಎಲ್‌ಒ ಭೇಟಿ ನೀಡಿದಾಗ ಸಾರ್ವಜನಿಕರ ಮನೆ ಬೀಗ ಹಾಕಿದ್ದರೆ, ಅಧಿಕಾರಿಗಳು ಸಮಾನ ಕಾಲಾವಧಿಯ ಅಂತರದಲ್ಲಿ ಕನಿಷ್ಠ 3 ಬಾರಿ ಆ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ:
ಯಾವುದಾದರೂ ಒಂದು ಮತದಾನದ ಭಾಗದಲ್ಲಿ ಮತದಾರರ ಸಂಖ್ಯೆ 1,200 ಕ್ಕಿಂತ ಹೆಚ್ಚಾದರೆ, ಅಲ್ಲಿ ಮತದಾನ ಸುಲಭಗೊಳಿಸಲು ಹೆಚ್ಚುವರಿಯಾಗಿ ಒಂದು ‘ಆಕ್ಸಿಲರಿ ಪೋಲಿಂಗ್ ಸ್ಟೇಷನ್’ ಸ್ಥಾಪಿಸಲಾಗುವುದು. ಈ ಮತಗಟ್ಟೆಗಳ ಮರುಹಂಚಿಕೆ ಅಥವಾ ರ‍್ಯಾಷನಲೈಜೇಶನ್ ಪ್ರಕ್ರಿಯೆಯನ್ನು ಜುಲೈ 29 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು, ಅವರು ನೇಮಿಸುವ ಬೂತ್ ಮಟ್ಟದ ಏಜೆಂಟರು ಹಾಗೂ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಕ್ರಿಯೆಯ ಪ್ರತಿಯೊಂದು ಹಂತದ ಬಗ್ಗೆಯೂ ವಿಸ್ತೃತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದಲ್ಲಿ ವ್ಯಾಪಕ ಸ್ವೀಪ್ ಕಾರ್ಯಕ್ರಮ ಪ್ರಚಾರ ಹಮ್ಮಿಕೊಳ್ಳಲಾಗುವುದು. ಕರಡು ಪಟ್ಟಿ ಪ್ರಕಟವಾದ ನಂತರ ಪಟ್ಟಿಯನ್ನು ಗ್ರಾಮ ಪಂಚಾಯತಿ ಕಚೇರಿಗಳು, ತಾಲೂಕು ಪಂಚೇತಿ ಇಒ ಕಚೇರಿ ಹಾಗೂ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಮುಖ್ಯಸ್ಥರ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗುವುದು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿವಿಧ ನಮೂನೆಗಳು ಮತ್ತು ವೇಳಾಪಟ್ಟಿಯ ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಬಳ್ಳಾರಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್ https://ballari.nic.in/ ಅಥವಾ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ https://ceo.karnataka.gov.in/en ಗೆ ಭೇಟಿ ನೀಡಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments