ಹೊಸಪೇಟೆ, ವಿಜಯನಗರ ಜಿಲ್ಲೆ: ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ, ನೋಬೆಲ್ ಎಜುಕೇಶನ್ ಟ್ರಸ್ಟ್ (ರಿ) ಆಡಳಿತಾಧಿಕಾರಿಗಳಾದ ಯುವ ಮುಖಂಡ ಶ್ರೀ ಹಫೀಜ್ ಶೇಖ್ ಅವರ ಹುಟ್ಟುಹಬ್ಬವನ್ನು ನಗರದ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯ ಅಧೀನದಲ್ಲಿರುವ ಸಾಧ್ಯ ಮಾನಸಿಕ ವಿಶೇಷ ಚೇತನರ ವಿಶೇಷ ಶಾಲೆ ಹಾಗೂ ವೃತ್ತಿ ತರಬೇತಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ, 130ಕ್ಕೂ ಹೆಚ್ಚು ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡು, ಸಮಾಜಮುಖಿ ಸಂದೇಶವನ್ನು ಸಾರಲಾಯಿತು.
ಈ ವೇಳೆ ಮಾತನಾಡಿದ ಯುವ ಮುಖಂಡ ಭರತ್ ಕುಮಾರ್ ಸಿಆರ್, “ಇಂದಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಆಡಂಬರದಿಂದ ಹುಟ್ಟುಹಬ್ಬ ಆಚರಿಸುವುದು ಸಾಮಾನ್ಯವಾಗಿದೆ. ಆದರೆ ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸುವುದು ನಿಜವಾದ ಮಾನವೀಯತೆ ಮತ್ತು ಸಮಾಜಸೇವೆಯ ಪ್ರತೀಕವಾಗಿದೆ. ಶ್ರೀ ಹಫೀಜ್ ಶೇಖ್ ಅವರಿಗೆ ದೇವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಕರುಣಿಸಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಶೇಖ್ ತಾಜುದ್ದೀನ್, ಅಲನ್ ಭಕ್ಷಿ, ಮೊಹಮ್ಮದ್ ಸುಹೇಲ್, ಚಿರಂಜೀವಿ, ಅಸಾದ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
