ವರದಿ : ಬಸಯ್ಯ ಜಿ ಎಂ
ಕಂಪ್ಲಿ, ಜೂನ್ 11: ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಅವರ ಹುಟ್ಟುಹಬ್ಬದ ಅಂಗವಾಗಿ, ಕಂಪ್ಲಿ ಪಟ್ಟಣದ ವೀರಶೈವ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಗುರುವಾರ ಮಾದರಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಕೋಟೆ ಜಗದೀಶ್ ಅವರು, “ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಗುರು-ಹಿರಿಯರ ಮಾರ್ಗದರ್ಶನ ಪಡೆದು ಶೈಕ್ಷಣಿಕವಾಗಿ ಮುಂದೆ ಬಂದು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು” ಎಂದು ತಿಳಿಸಿದರು.
ವೀರಶೈವ ಮಠಗಳು ಇತಿಹಾಸದ ಕಾಲದಿಂದಲೂ ಸರ್ವ ಸಮುದಾಯಗಳ ಮಕ್ಕಳಿಗೆ ಅನ್ನ, ವಸ್ತ್ರ, ವಸತಿ ಹಾಗೂ ಶಿಕ್ಷಣ ನೀಡುವ ಮೂಲಕ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ. ಸರ್ವಧರ್ಮಗಳಲ್ಲಿ ಸಮಾನತೆಯನ್ನು ಬಯಸುವ ಸಮುದಾಯವೇ ವೀರಶೈವ ಲಿಂಗಾಯತ ಸಮುದಾಯ ಎಂದು ಅವರು ಹೇಳಿದರು.
ಪೂರ್ವದಲ್ಲಿ ಎಮ್ಮಿಗನೂರಿನ ಹಂಪಿಸಾವಿರದೇವರ ಮಠದ ವಾಮದೇವ ಶಿವಾಚಾರ್ಯರು ಮಾತನಾಡಿ, “ದಾನ, ಧರ್ಮ, ದಯೆ, ಕರುಣೆ ಮೊದಲಾದ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ನಿಜವಾದ ದೊಡ್ಡ ಮನುಷ್ಯರು” ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಅವರು ತಾಲೂಕು ಕಚೇರಿ ಆರಂಭಕ್ಕೆ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಚೌಕಿಮಠದ ಬಸವರಾಜ ಶಾಸ್ತ್ರಿ, ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ, ಕ್ರಿಸ್ಚಿಯನ್ ಫಾಸ್ಟರ್ಸ್ ವೆಲ್ಫೇರ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಪಾಲ್ ಪಂಪಾಪತಿ, ವೇದಿಕೆ ರಾಜ್ಯ ಉಪಾಧ್ಯಕ್ಷ ಬಿ.ವಿ. ಗೌಡ, ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸೇರಿದಂತೆ ಪ್ರಮುಖರಾದ ಪಿ. ಮೂಕಯ್ಯಸ್ವಾಮಿ, ಎಸ್.ಎಂ. ನಾಗರಾಜ, ಕೆ.ಎಂ. ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಎಸ್.ಎಸ್.ಎಂ. ಚನ್ನಬಸವರಾಜ, ಇಟಗಿ ಬಸವರಾಜಗೌಡ, ವಾಲಿ ಕೊಟ್ರಪ್ಪ, ವಿ. ವಿದ್ಯಾಧರ, ಹೊನ್ನಳ್ಳಿ ಗಂಗಾಧರ ಹಾಗೂ ಹಿರಿಯ ವೀರಶೈವ ಲಿಂಗಾಯತ ಮುಖಂಡರು, ಯುವ ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮುಖಂಡರು ಉಪಸ್ಥಿತರಿದ್ದರು.
