Monday, June 22, 2026
HomeDistrictsBallariಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಬಳ್ಳಾರಿ ಜಿಲ್ಲೆಯಲ್ಲಿ 1.99 ಲಕ್ಷ...

ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಬಳ್ಳಾರಿ ಜಿಲ್ಲೆಯಲ್ಲಿ 1.99 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಬಳ್ಳಾರಿ,ಜೂ.22:
ಸಾಮಾನ್ಯವಾಗಿ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ‘ಪೋಲಿಯೋ ಮೈಲಿಟಿಸ್’ ವೈರಸ್ ನಿಯಂತ್ರಣಕ್ಕಾಗಿ 1995 ರಿಂದ ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರಲಾಗಿರುವ “ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ”ವು ಈ ವರ್ಷ ಜೂನ್ 28ರ ಭಾನುವಾರದಂದು ಜಿಲ್ಲಾದ್ಯಂತ ಜರುಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಲಸಿಕಾ ಕಾರ್ಯಕ್ರಮದ ಒಂದು ನೋಟ:

ಬಳ್ಳಾರಿ ಜಿಲ್ಲೆಯ ಒಟ್ಟು 5 ತಾಲ್ಲೂಕುಗಳಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಟ್ಟಿನಿಂದ 5 ವರ್ಷದೊಳಗಿನ ಒಟ್ಟು 1,99,703 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 615 ಮನೆ ಭೇಟಿ ತಂಡಗಳು, 50 ಟ್ರಾನ್ಸಿಟ್ ತಂಡಗಳು ಹಾಗೂ 15 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 916 ತಂಡಗಳನ್ನು ನಿಯೋಜಿಸಲಾಗಿದೆ.

ಒಟ್ಟು 977 ಲಸಿಕಾ ಕಾರ್ಯಕರ್ತರು, 188 ಮೇಲುಸ್ತುವಾರಿ ತಂಡಗಳು ಮತ್ತು 5 ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 236 ಕ್ಲಿಷ್ಟಕರ ಸ್ಥಳಗಳನ್ನು ಗುರುತಿಸಲಾಗಿದ್ದು, ಒಟ್ಟು 3,10,143 ಡೋಸ್ ಲಸಿಕೆಯನ್ನು ಲಭ್ಯವಿಟ್ಟುಕೊಳ್ಳಲಾಗಿದೆ.

ಭಾರತ ಪೋಲಿಯೋ ಮುಕ್ತ, ಆದರೆ ಜಾಗ್ರತೆ ಅಗತ್ಯ:

ದೇಶದಲ್ಲಿ ಕೊನೆಯ ಪೋಲಿಯೋ ಪ್ರಕರಣವು 2011ರ ಜನವರಿ 13 ರಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ವರದಿಯಾಗಿತ್ತು. ಅದಾದ ಬಳಿಕ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು 2014ರ ಫೆಬ್ರವರಿ 11 ರಂದು ಭಾರತವನ್ನು ‘ಪೋಲಿಯೋ ಮುಕ್ತ ರಾಷ್ಟ್ರ’ ಎಂದು ಘೋಷಿಸಿದೆ. ಆದರೆ, ಭಾರತವನ್ನು ನಿರಂತರವಾಗಿ ಪೋಲಿಯೋ ಮುಕ್ತವಾಗಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ ಅವರು, ಪೋಲಿಯೋ ವೈರಸ್‌ನಲ್ಲಿ 3 ವಿಧಗಳಿದ್ದು, ಅದರಲ್ಲಿ ಟೈಪ್ 2 ಮತ್ತು ಟೈಪ್ 3 ವೈರಸ್‌ಗಳು ಈಗಾಗಲೇ ನಿರ್ಮೂಲನೆಯಾಗಿವೆ. ಆದರೆ ಟೈಪ್ 1 ವೈರಸ್ ಪ್ರಕರಣಗಳು ಇಂದಿಗೂ ನೆರೆರಾಷ್ಟ್ರಗಳಲ್ಲಿ ಕಂಡುಬರುತ್ತಿರುವುದರಿಂದ ನಾವು ಸದಾ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ವಲಸೆ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ:

ವಲಸೆ ಪ್ರದೇಶಗಳು, ಕೈಗಾರಿಕಾ ವಲಯಗಳು, ಇಟ್ಟಿಗೆ ಭಟ್ಟಿಗಳು, ಅಲೆಮಾರಿ ಕುರಿ ಸಾಕಾಣಿಕೆದಾರರ ತಾತ್ಕಾಲಿಕ ನಿವಾಸಿಗಳು, ತೋಟದ ಮನೆಗಳು ಹಾಗೂ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿರುವ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ಹನುಮಂತಪ್ಪ ತಿಳಿಸಿದ್ದಾರೆ.

ಪಾಲಕರಲ್ಲಿ ಮನವಿ:

ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹಾಗೂ ಪಾಲಕರು ತಮ್ಮ ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ತಪ್ಪದೇ ಹತ್ತಿರದ ಪೋಲಿಯೋ ಬೂತ್‌ಗಳಿಗೆ ಕರೆತಂದು, ಜೂನ್ 28, 2026ರ ಭಾನುವಾರದಂದು ‘ಎರಡು ಹನಿ’ ಪೋಲಿಯೋ ಲಸಿಕೆ ಕೊಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments