Monday, June 29, 2026
HomeDistrictsBallariಮಳೆಯ ಆತಂಕದ ನಡುವೆಯೂ ಕಾರಹುಣ್ಣಿಮೆ ಸಂಭ್ರಮ; ಬಸವನಿಗೆ ಶೃಂಗಾರ ಮಾಡಿ ಸಂಪ್ರದಾಯ ಉಳಿಸಿಕೊಂಡ ರೈತರು

ಮಳೆಯ ಆತಂಕದ ನಡುವೆಯೂ ಕಾರಹುಣ್ಣಿಮೆ ಸಂಭ್ರಮ; ಬಸವನಿಗೆ ಶೃಂಗಾರ ಮಾಡಿ ಸಂಪ್ರದಾಯ ಉಳಿಸಿಕೊಂಡ ರೈತರು

ವರದಿ : ಜಿ ಎಂ ಬಸಯ್ಯ

ಕಂಪ್ಲಿ: ಕಂಪ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರೂ ಅನ್ನದಾತನ ಕೃಷಿ ಕಾಯಕ ಮಾತ್ರ ನಿಂತಿಲ್ಲ. ಮಳೆಯ ಕೊರತೆಯ ನಡುವೆಯೂ ರೈತರಲ್ಲಿ ಉತ್ಸಾಹ ಕುಂದಿಲ್ಲ. ಅದರ ನಿದರ್ಶನವಾಗಿ ಪ್ರತಿವರ್ಷದಂತೆ ಕಾರಹುಣ್ಣಿಮೆಯನ್ನು ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರಹುಣ್ಣಿಮೆ ಅಂಗವಾಗಿ ಇಟಗಿ, ರಾಮಸಾಗರ, ನೆಲ್ಲುಡಿ, ಬೆಳಗೋಡು, ಸಣಾಪುರ ಹಾಗೂ ಎಮ್ಮಿಗನೂರು ಗ್ರಾಮಗಳಲ್ಲಿ ರೈತರು ತಮ್ಮ ಎತ್ತುಗಳನ್ನು ತೊಳೆದು, ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಬಳಿದು, ಮೈಗೆ ಕೆಂಬಣ್ಣ ಹಚ್ಚಿ, ಹೊಸ ಮೂಗುದಾರ ಹಾಕಿ ಅಲಂಕರಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಸವನಿಗೆ ವಿಶೇಷ ಶೃಂಗಾರ ಮಾಡಿ ಪೂಜೆ ಸಲ್ಲಿಸಲಾಯಿತು.

“ಎತ್ತಿಲ್ಲದವನಿಗೆ ಇಲ್ಲಿ ಎದೆಯಿಲ್ಲ” ಎಂಬ ಗಾದೆ ಮಾತು ರೈತರ ಬದುಕಿನೊಂದಿಗೆ ಬೆಸೆದುಕೊಂಡಿರುವ ಎತ್ತುಗಳ ಮಹತ್ವವನ್ನು ಸಾರುತ್ತದೆ. ರೈತನ ಜೀವನದಲ್ಲಿ ಎತ್ತುಗಳು ಕೇವಲ ಪಶುಗಳಲ್ಲ, ಕುಟುಂಬದ ಸದಸ್ಯರಂತೆಯೇ ಭಾವನಾತ್ಮಕ ಸಂಬಂಧ ಹೊಂದಿವೆ ಎಂಬುದು ಈ ಹಬ್ಬದ ವಿಶೇಷತೆ.
ಕಾರಹುಣ್ಣಿಮೆಯಂದು ರೈತರು ಸಂಪ್ರದಾಯದಂತೆ ಎತ್ತುಗಳ ಮೈಬಣ್ಣವನ್ನು ಗಮನಿಸಿ ಮುಂಬರುವ ಬೆಳೆಯ ಕುರಿತು ಅಂದಾಜು ಮಾಡುತ್ತಾರೆ.

ಕರಿ-ಕೆಂಪು ಹಾಗೂ ಬಿಳಿ ಬಣ್ಣಗಳು ಸಮಪಾಲಿನಲ್ಲಿ ಕಂಡುಬಂದರೆ ಉತ್ತಮ ಕೆಂಜೋಳ ಬೆಳೆಯುತ್ತದೆ, ಬಿಳಿ ಎತ್ತು ಹೆಚ್ಚಾಗಿ ಕಂಡರೆ ಬಿಳಿಜೋಳ ಉತ್ತಮವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದೆ.

ಇದೇ ನಂಬಿಕೆಯೊಂದಿಗೆ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆಗೆ ಸಜ್ಜಾಗುತ್ತಾರೆ.
ಆದರೆ ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ರೈತರಲ್ಲಿ ಆತಂಕವೂ ಮನೆಮಾಡಿದೆ. ಆಕಾಶದತ್ತ ಕಣ್ಣಿಟ್ಟು ಉತ್ತಮ ಮಳೆಯ ನಿರೀಕ್ಷೆಯಲ್ಲಿರುವ ರೈತರು, ಪ್ರಕೃತಿ ಕೃಪೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಸಂಪ್ರದಾಯವನ್ನು ಉಳಿಸಿಕೊಂಡು ಕಾರಹುಣ್ಣಿಮೆಯನ್ನು ಆಚರಿಸಿದ ರೈತರು ಉತ್ತಮ ಮಳೆ ಸುರಿದು ಸಮೃದ್ಧ ಬೆಳೆ ಬರಲಿ ಎಂಬ ಆಶಯ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments